ಬೆಂಗಳೂರಿನಲ್ಲಿ ಮತ್ತೆ ಪೇ And ಪಾರ್ಕ್.. ವಾಹನ ಸವಾರರಿಗೆ ಶಾಕ್ ..!

By Suvarna News  |  First Published Jul 6, 2022, 11:52 AM IST

* ವಾಹನ ಸವಾರಿಗೆ ಶಾಕ್ ..!
* ಬೆಂಗಳೂರಿನಾದ್ಯಂತ ಮತ್ತೆ ಪೇ ಅಂಡ್ ಪಾರ್ಕ್ ಆರಂಭಿಸಲು ಸಿದ್ಧತೆ 
* ಗಾಂಧಿನಗರ ಕ್ಷೇತ್ರದಲ್ಲಿ ಮೊದಲ ಹಂತವಾಗಿ ಪ್ರಾಯೋಗಿಕವಾಗಿ ಜಾರಿಗೆ


ವರದಿ : ರಕ್ಷಾ ಕಟ್ಟೆಬೆಳಗುಳಿ

ಬೆಂಗಳೂರು, (ಜುಲೈ.06):
ಬೃಹತ್ ಬೆಂಗಳೂರಿನಾದ್ಯಂತ ಮತ್ತೆ ಪೇ ಅಂಡ್ ಪಾರ್ಕ್ ಆರಂಭಿಸಲು ಸಿದ್ಧತೆ ನಡೆದಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತವಾಗಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಗಾಂಧಿನಗರ ಕ್ಷೇತ್ರದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ‌ ಶೀಘ್ರದಲ್ಲಿ ಆರಂಭಿಸಲು ಅಂತಿಮ ಹಂತದ ಕೆಲಸ ನಡೆದಿದೆ. ಜೊತೆಗೆ ಗಾಂಧಿನಗರದ ಇತರ 12 ರಸ್ತೆಗಳಲ್ಲಿ ಪಾರ್ಕಿಂಗ್ ಬೇಗಳನ್ನ ರೂಪಿಸಲಾಗುತ್ತಿದೆ. ಮೆಜೆಸ್ಟಿಕ್ ಸೇರಿ ಸುತ್ತಲಿನ ಪ್ರದೇಶದಲ್ಲಿನ ವಾಹನ ನಿಲುಗಡೆ ಸಮಸ್ಯೆ ನಿವಾರಿಸಲು ಬಿಬಿಎಂಪಿಯು ಫ್ರೀಡಂಪಾರ್ಕಿನಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಿದೆ.

Latest Videos

undefined

ನೋ ಪಾರ್ಕಿಂಗ್‌ನಲ್ಲಿ ವಾಹನ ನಿಂತ ಚಿತ್ರ ಕಳಿಸಿದರೆ ಸಿಗುತ್ತೆ ಬಹುಮಾನ!

ಗಾಂಧಿನಗರ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಉಚಿತ ವಾಹನ ನಿಲುಗಡೆ ಬದಲಿಗೆ ಪೇ ಅಂಡ್ ಪಾರ್ಕ್ ಮೂಲಕ ಆದಾಯ ಗಳಿಸಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ಗಾಂಧಿನಗರ ವ್ಯಾಪ್ತಿಯಲ್ಲಿ 12 ರಸ್ತೆಗಳನ್ನು ಗುರುತಿಸಿ ಪಾರ್ಕಿಂಗ್ ಬೇ ಮಾಡಲಾಗುತ್ತಿದೆ.   ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ಕಟ್ಟಡದಲ್ಲಿ 1001 ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ. ಒಟ್ಟು ಮೂರು ಮಹಡಿಯ ಕಟ್ಟಡ ಇದಾಗಿದ್ದು, ಮೊದಲ ಮಹಡಿಯಲ್ಲಿ 445 ದ್ವಿಚಕ್ರ ವಾಹನ ಹಾಗೂ 118 ಕಾರುಗಳ ನಿಲುಗಡೆಗೆ ಅವಕಾಶವಿದೆ. ಉಳಿದಂತೆ 2ನೇ, ಮತ್ತು 3ನೇ ಮಹಡಿಯಲ್ಲಿ ತಲಾ 219 ಕಾರು ನಿಲ್ಲಿಸಬಹುದಾಗಿದೆ.

79 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗಿದೆ. ನಾಲ್ಕು ಲಿಫ್ಟ್ ಕೂಡ ಈ ಕಟ್ಟಡಕ್ಕೆ ಇದ್ದು ಮಹಿಳೆಯರು ಮತ್ತು ಪುರುಷರ ಶೌಚಾಲಯ ಕೂಡ ನಿರ್ಮಿಸಲಾಗಿದೆ. ಮೇಲ್ಚಾವಣಿಗೆ ಸೋಲಾರ್ ಪ್ಯಾನೆಲ್ ಕೂಡ ಅಳವಡಿಸಿ ಸಂಪೂರ್ಣ ಸೋಲಾರ್ ವಿದ್ಯುತ್ ಬಳಕೆಗೂ ಸಿದ್ಧತೆ ನಡೆದಿದೆ.

ಬಹುಮಹಡಿ ಕಟ್ಟಡದಲ್ಲಿ ವಾಹನ ನಿಲುಗಡೆ ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆ ನಿಯೋಜಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಗಾಂಧಿನಗರ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಶುಲ್ಕದಿಂದ ಬಿಬಿಎಂಪಿ ವಾರ್ಷಿಕ 4ರಿಂದ 4.5 ಕೋಟಿ ರೂ. ಆದಾಯ ಗಳಿಸುವ ಲೆಕ್ಕ ಹಾಕಿದೆ.
ಪಾರ್ಕಿಂಗ್ ಬೇ ಆಗಲಿರುವ ರಸ್ತೆಗಳು ಗಾಂಧಿನಗರ 2 ಮತ್ತು 4ನೇ ಮುಖ್ಯ ರಸ್ತೆ 1,3, 4, 5, 6ನೇ ತಿರುವು, ಯಾದವಾ ಹಾಸ್ಟೆಲ್ ಪರ್ಯಾಯ ರಸ್ತೆ, ಸಪ್ನಾ ಬುಕ್ ಹೌಸ್ ರಸ್ತೆ, ಡಬ್ಲ್ಯೂ.ಎಚ್.ಹನುಮಂತಪ್ಪ ರಸ್ತೆ, ವೈ. ರಾಮಚಂದ್ರ ರಸ್ತೆ, ಸ್ವಾತಂತ್ರ್ಯ ಉದ್ಯಾನ ಪ್ರವೇಶ ಭಾಗ (ಶೇಷಾದ್ರಿ ರಸ್ತೆ ಕಡೆ).

click me!