ಟಾಟಾ ಕಂಪನಿ ತೊರೆದ ಟಿಯಾಗೋ, ನೆಕ್ಸಾನ್, ಹ್ಯಾರಿಯರ್ ವಿನ್ಯಾಸದ ರೂವಾರಿ ಪ್ರತಾಪ್ ಬೋಸ್

By Suvarna NewsFirst Published Apr 29, 2021, 4:43 PM IST
Highlights

ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನಗಳ ಮುಖ್ಯ ವಿನ್ಯಾಸಕಾರರಾಗಿದ್ದ ಮತ್ತು ಪ್ರಖ್ಯಾತ ವಿನ್ಯಾಸಗಾರ ಪ್ರತಾಪ್ ಬೋಸ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಸುಮಾರು 14 ವರ್ಷಗಳಿಂದ ಟಾಟಾರ್ ಮೋಟರ್ಸ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಅವರು ಮರ್ಸಿಡೀಸ್ ಬೆಂಜ್, ಪಿಯಾಜಿಯೋ, ಮಿತ್ಸುಬಿಶಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.

ಟಾಟಾ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಟಿಯಾಗೋ, ಎಸ್‌ಯುವಿಗಳಾದ ನೆಕ್ಸಾನ್, ಹ್ಯಾರಿಯರ್, ಸಫಾರಿ ಇತ್ಯಾದಿ ಕಾರುಗಳ ವಿನ್ಯಾಸದ ರೂವಾರಿ ಪ್ರತಾಪ್ ಬೋಸ್ ಅವರು ತಮ್ಮ ಟಾಟಾ ಮೋಟಾರ್ಸ್ ಗ್ಲೋಬಲ್ ಡಿಸೈನ್ ವೈಸ್ ಪ್ರೆಸಿಡೆಂಟ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ, ಮಾರ್ಟಿನ್ ಉಹ್ಲಾರಿಕ್ ಅವರನ್ನು ಟಾಟಾ ಮೋಟರ್ಸ್‌ನ ಗ್ಲೋಬಲ್ ಡಿಸೈನ್ ಹೆಡ್ ಆಗಿ ನೇಮಕ ಮಾಡಲಾಗಿದೆ.

3ನೇ ತಲೆಮಾರಿನ ಸುಜುಕಿ ಹಯಬುಸಾ ಬೈಕ್ ಲಾಂಚ್, ಬೆಲೆ 16.40 ಲಕ್ಷ ರೂ.!

ಇತ್ತೀಚಿನ ಕೆಲವು ವರ್ಷಗಳಲ್ಲಿ ಟಾಟಾ ಕಂಪನಿಯ ಪ್ರಯಾಣಿಕ ವಾಹನಗಳು ಅದ್ಭುತ ವಿನ್ಯಾಸದಿಂದಲೂ ಗಮನ ಸೆಳೆಯುತ್ತಿವೆ. ಉದಾಹರಣೆಗೆ, ಅಲ್ಟ್ರೋಜ್ ತನ್ನ ವಿನ್ಯಾಸ ಹಾಗೂ ಸುರಕ್ಷತೆಯ ಮೂಲಕವೇ ಹೆಚ್ಚು ಪ್ರಸಿದ್ಧಿಯಾಗಿದೆ. ಅದೇ ರೀತಿ, ಟಾಟಾ ಟಿಯಾಗೋ, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿಯಂಥ ವಾಹನಗಳು ವಿನ್ಯಾಸ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಈ  ಅದ್ಭುತ ವಿನ್ಯಾಸದ ಹಿಂದೆ ಪ್ರತಾಪ್ ಬೋಸ್ ಅವರ ಪರಿಶ್ರಮವೂ ಇದೆ ಎನ್ನುತ್ತಿವೆ ಉದ್ಯಮದ ಮೂಲಗಳು.

ಈ ವಾರದ ಆರಂಭದಲ್ಲಿ ಟಾಟಾ ಗ್ರೂಪ್‌ನಲ್ಲಿ ಆಂತರಿಕ ಜ್ಞಾಪಕವನ್ನು ಪ್ರಸಾರ ಮಾಡಲಾಗಿತ್ತು. ಆ ಪತ್ರದ ಪ್ರಕಾರ, ಪ್ರತಾಪ್ ಬೋಸ್ ಉತ್ತಮ ಅವಕಾಶಗಳಿಗಾಗಿ ಕಂಪನಿ ತೊರೆಯಲು ನಿರ್ಧರಿಸಿದ್ದಾರೆ. ಅವರು ತಮ್ಮ ಉಳಿದ ಅಧಿಕಾರಾವಧಿಯನ್ನು ರಜೆಯಲ್ಲಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.

ಇಷ್ಟು ಮಾತ್ರವಲ್ಲದೇ,  ಪ್ರತಾಪ್ ಅವರ ಡೆಪ್ಯುಟಿ ಮತ್ತು ಕಂಪನಿಯ ಯುಕೆ ವಿನ್ಯಾಸ ಕೇಂದ್ರದ ಮುಖ್ಯಸ್ಥ ಮಾರ್ಟಿನ್ ಉಹ್ಲಾರಿಕ್ ಪ್ರತಾಪ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಟಾಟಾ ಕಂಪನಿ ಹೇಳಿದೆ. ಇದು ಕಂಪನಿಯ ಪೋರ್ಟ್‌ಪೋಲಿಯೊದಲ್ಲಿ ವಿನ್ಯಾಸ ಭಾಷೆ ಮತ್ತು ಸ್ಟೈಲಿಂಗ್‌ನಲ್ಲಿ ನಿರಂತರತೆಯನ್ನುಮುಂದುವರಿಸಲಿದೆ. ಪ್ರತಾಪ್ ಬೋಸ್ ಅವರು ತಮ್ಮ ಸೂಚನೆ ಅವಧಿಯನ್ನು ಪೂರೈಸುತ್ತಿರುವುದರಿಂದ ಸಕ್ರಿಯ ಕೆಲಸದಿಂದ ದೂರ ಸರಿದಿದ್ದಾರೆ. ಏತನ್ಮಧ್ಯೆ, ಟಾಟಾ ಮೋಟಾರ್ಸ್ ಮಾರ್ಟಿನ್ ಉಹ್ಲಾರಿಕ್ ಕಂಪನಿಯ ವಿನ್ಯಾಸದ ಮುಖ್ಯಸ್ಥರಾಗಿ ಹೊಸದಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು  ಕಂಪನಿ ಹೇಳಿಕೊಂಡಿದೆ.

ಟಾಟಾ ಮೋಟಾರ್ಸ್ ಕಂಪನಿಯಲ್ಲಿ ಸುಮಾರು 14 ವರ್ಷಗಳಿಂದ ಪ್ರತಾಪ್  ಬೋಸ್ ಕೆಲಸ ಮಾಡುತ್ತಿದ್ದರು. 2019ರ ಜನವರಿಯಿಂದ ಅವರನ್ನು ಟಾಟಾ ಕಂಪನಿ ಗ್ಲೋಬಲ್ ಡಿಸೈನ್ ಉಪಾಧ್ಯಕ್ಷರಾಗಿ ಭಡ್ತಿ ನೀಡಲಾಗಿತ್ತು. ಆಟೋ ಉದ್ಯಮದಲ್ಲಿ ತಮ್ಮದೇ ಹೆಸರು ಸಂಪಾದಿಸಿರುವ ಪ್ರತಾಪ್ ಬೋಸ್ ಅವರನ್ನು ಕಾರು ವಿನ್ಯಾಸಕ್ಕಾಗಿ ಹಲವು ಪ್ರಶಸ್ತಿಗಳಿಗೆ ನಾಮಿನೇಟ್ ಮಾಡಲಾಗಿತ್ತು.

ಒಮ್ಮೆ ಚಾರ್ಜ್ ಮಾಡಿದ್ರೆ 100 ಕಿ.ಮೀ.ವರೆಗೆ ಓಡುವ ಇ- ಸೈಕಲ್ ರೋಡ್‌ಲರ್ಕ್ ಬಿಡುಗಡೆ!

ಟಾಟಾ ಮೋಟಾರ್ಸ್ ಕಂಪನಿಯ ಗ್ಲೋಬಲ್ ಡಿಸೈನ್ ವೈಯ್ಸ್ ಪ್ರೆಸಿಡೆಂಟ್ ಆಗಿ ಪ್ರತಾಪ್ ಬೋಸ್ ಅವರು ಕಂಪನಿ ಮೂರು ಕೇಂದ್ರಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದರು. ಇಟಲಿಯ ಟುರಿನ್, ಭಾರತ ಪುಣೆ ಮತ್ತು ಇಂಗ್ಲೆಂಡ್‌ ಕೋವೆಂಟ್ರಿ ಕೇಂದ್ರಗಳಲ್ಲಿ ಅವರ ಕೆಲಸ ನಿರಂತರವಾಗಿತ್ತು. ಜೊತೆಗೆ 180 ಉದ್ಯೋಗಿಗಳಿರುವ ತಂಡವನ್ನು ಅವರು ಮುನ್ನಡೆಸುತ್ತಿದ್ದರು.

ಪ್ರತಾಪ್ ಬೋಸ್ ಅವರು ಲಂಡನ್‌ನ ರಾಯಲ್ ಕಾಲೇಜ್ ಆರ್ಟ್‌ ಕಾಲೇಜ್‌ನಿಂದ  ವೆಹಿಕಲ್ ಡಿಸೈನ್‌ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ಹಾಗೆಯೇ, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್ ಸಂಸ್ಥೆಯಿಂದ ಪದವಿ ಸಂಪಾದಿಸಿದ್ದಾರೆ.

ಪ್ರತಾಪ್ ಬೋಸ್ ಅವರು ಟಾಟಾ ಮೋಟಾರ್ಸ್ ಕಂಪನಿ ಸೇರುವ ಮೊದಲು ಮರ್ಸಿಡೀಸ್ ಬೆಂಜ್, ಪಿಯಾಜಿಯೊ, ಮಿತ್ಸುಬಿಶಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

ತಮ್ಮ ಹೊಸ ವಿನ್ಯಾಸಗಳಿಂದಾಗಿಯೇ ಟಾಟಾ ಕಂಪನಿಯ ಇತ್ತೀಚಿನ ವಾಹನಗಳು ಹೆಚ್ಚು ಜನಪ್ರಿಯ, ಶ್ಲಾಘನೆಗೊಳಗಿದ್ದವು. ಸದ್ಯ ಮಾರುಕಟ್ಟೆಯಲ್ಲಿ ಟಿಯಾಗೋ ಅತ್ಯಂತ ಆಕರ್ಷಕವಾಗಿ ಕಾಣುವ ಹ್ಯಾಚ್‌ಬ್ಯಾಕ್ ಕಾರು ಎನಿಸಿಕೊಂಡಿದೆ. ಹ್ಯಾರಿಯರ್ ಕೂಡ ಲಾಂಚ್ ಆದರೆ, ರೋಡ್ ಪ್ರಸೆನ್ಸ್ ಮತ್ತು ಎಸ್‌ಯುವಿ ಸ್ಟೈಲಿನಿಂದಾಗಿ ಹೆಚ್ಚು ಗಮನ ಸೆಳೆದಿತ್ತು. ಇತ್ತೀಚೆಗೆ ಬಿಡುಗಡೆಯಾದ ಸಫಾರಿ ಕೂಡ ಹೆಚ್ಚು ಆಕರ್ಷಕ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು.

ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ

click me!