ದೇಶಾದ್ಯಂತ ಕೊರೋನಾ ಹಾವಳಿ| ಆಕ್ಸಿಜನ್ ಇಲ್ಲದೇ ಪ್ರಾಣ ಬಿಡುತ್ತಿದ್ದಾರೆ ಜನ ಸಾಮಾನ್ಯರು| ಆಕ್ಸಿಜನ್ ಕೊರತೆ ಜನರ ಪ್ರಾಣ ಹಿಂಡುತ್ತಿರುವ ಹಿನ್ನೆಲೆ ಕಾರು ಉತ್ಪಾದಕಾ ಘಟಕ ಸ್ಥಗಿತಗೊಳಿಸಿದ ಮಾರುತಿ ಸುಜುಕಿ!
ನವದೆಹಲಿ(ಏ.29): ದೇಶಾದ್ಯಂತ ಸದ್ಯ ಕೊರೋನಾ ಹಾವಳಿ ಎಲ್ಲರ ಬದುಕನ್ನೂ ಅಲ್ಲೋಲ ಕಲ್ಲೋಲಗೊಳಿಸಿದೆ. ಅತ್ಯಂತ ವೇಗವಾಗಿ ಹಬ್ಬುತ್ತಿರುವ ಕೊರೋನಾದಿಂದಾಗಿ ಜನರು ಕಂಗೆಟ್ಟಿದ್ದು, ಅತ್ತ ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಎದುರಾಗಿದೆ. ಅದರಲ್ಲು ಪ್ರಮುಖವಾಗಿ ಜನರು ಆಕ್ಸಿಜನ್ ಸಿಗದೇ ಪ್ರಾಣ ಬಿಡಲಾರಂಭಿಸಿದ್ದಾರೆ. ಹೀಗಿರುವಾಗ ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದು ತನ್ನ ಎರಡು ಕಾರು ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ.
ಹೌದು ಹರ್ಯಾಣದಲ್ಲಿ ಇರುವ ಎರಡು ಕಾರು ತಯಾರಿಕಾ ಘಟಕಗಳನ್ನು ನಿರ್ವಹಣೆಗಾಗಿ ಮೇ ತಿಂಗಳಿನಲ್ಲಿ ಸ್ಥಗಿತಗೊಳಿಸಲು ಮಾರುತಿ ಸುಜುಕಿ ತೀರ್ಮಾನಿಸಿದೆ.
undefined
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂಪನಿ ಕಾರು ತಯಾರಿಕಾ ಪ್ರಕ್ರಿಯೆಯ ಭಾಗವಾಗಿ ಸಣ್ಣ ಪ್ರಮಾಣದಲ್ಲಿ ಆಮ್ಲಜನಕವನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆಮ್ಲಜನಕ ಜೀವ ಉಳಿಸಲು ಬಳಸಿಕೊಳ್ಳಬೇಕು. ಹಾಗಾಗಿ, ನಾವು ವಾರ್ಷಿಕ ನಿರ್ವಹಣೆಯ ಉದ್ದೇಶದಿಂದ ಘಟಕಗಳನ್ನು ಮೇ 9ರಿಂದ ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದೆ.
ಕಂಪನಿಯು ಸಾಮಾನ್ಯವಾಗಿ ಈ ಎರಡು ತಯಾರಿಕಾ ಘಟಕಗಳನ್ನು ಜೂನ್ ಮತ್ತು ಡಿಸೆಂಬರ್‌ನಲ್ಲಿ ನಿರ್ವಹಣಾ ಉದ್ದೇಶಕ್ಕಾಗಿ ಸ್ಥಗಿತಗೊಳಿಸುತ್ತಿತ್ತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona