ಫೆ.29ರ ಬಳಿಕ ಬಾಕಿ ಉಳಿಸಿಕೊಂಡಿರುವ ಕ್ರೆಡಿಟ್‌ಕಾರ್ಡ್ ಪಾವತಿಯನ್ನು ಯೋಜನೆಗೆ ಪರಿಗಣನೆ, ಪ್ರಶ್ನೋತ್ತರ ವೇಳೆಯಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಸರಕಾರ. ಕೊರೋನಾ ಲಾಕ್‌ಡೌನ್ ವೇಳೆಯಲ್ಲಿ ಇಎಂಐ ಪಾವತಿ ಉಳಿಸಿಕೊಂಡಿದ್ದ ಸಾಲಗರರು.
ನವದೆಹಲಿ (ಅ.31): ಕೇಂದ್ರ ಸರ್ಕಾರ ಕಳೆದ ವಾರ ಘೋಷಿಸಿರುವ ಮುಂದೂಡಿಕೆ ಆಗಿರುವ ಸಾಲದ ಕಂತುಗಳ ಮೇಲಿನ ಚಕ್ರಬಡ್ಡಿ ಮನ್ನಾ ಯೋಜನೆ, ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಅನ್ವಯ ಆಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.
ಚಕ್ರ ಬಡ್ಡಿಗೆ ಪರಿಹಾರ ನೀಡುವ ಯೋಜನೆಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾಲಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಎಂಎಸ್‌ಎಂಇ ಸಾಲಗಳು, ಶಿಕ್ಷಣ, ಗೃಹ, ಗ್ರಹೋಪಯೋಗಿ ವಸ್ತುಗಳ ಖರೀದಿಯ ಮೇಲಿನ ಸಾಲಗಳು, ಕ್ರೆಡಿಟ್ ಕಾರ್ಡ್ ಪಾವತಿ, ವಾಹನ ಖರೀದಿ, ವೈಯಕ್ತಿಕ, ವೃತ್ತಿಪರ ಮತ್ತು ಬಳಕೆಗೆ ಸಂಬಂಧಿಸಿದ ಸಾಲಗಳಿಗೆ ಚಕ್ರ ಬಡ್ಡಿ ಮನ್ನಾ ಅನ್ವಯ ಆಗಲಿದೆ.
ನ.5ರೊಳಗೆ ಸಾಲಗಾರರ ಚಕ್ರ ಬಡ್ಡಿ ಖಾತೆಗೆ ವಾಪಾಸ್
ಫೆ.29ರ ಬಳಿಕ ಬಾಕಿ ಉಳಿಸಿಕೊಂಡಿರುವ ಕ್ರೆಡಿಟ್‌ಕಾರ್ಡ್ ಪಾವತಿಯನ್ನು ಯೋಜನೆಗೆ ಪರಿಗಣಿಸಲಾಗಿದೆ. ಆದರೆ, ಬೆಳೆ ಸಾಲ, ಟ್ರ್ಯಾಕ್ಟರ್ ಖರೀದಿ ಸಾಲ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳ ಮೇಲಿನ ಸಾಲವನ್ನು ಚಕ್ರ ಬಡ್ಡಿ ಮನ್ನಾ ಯೋಜನೆಗೆ ಪರಿಗಣಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಪ್ರಶ್ನೋತ್ತರದಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಕಳೆದ ವಾರ ಮುಂದೂಡಿಕೆ ಆದ ಸಾಲದ ಮೇಲಿನ ಚಕ್ರ ಬಡ್ಡಿಗೆ ಪರಿಹಾರವನ್ನು ತಾನೇ ಭರಿಸುವುದಾಗಿ ಪ್ರಕಟಿಸಿತ್ತು. ಇದರಿಂದ ಕೇಂದ್ರ ಸರ್ಕಾರಕ್ಕೆ 6,500 ಕೋಟಿ ರು. ಹೊರೆ ಆಗುವ ಸಾಧ್ಯತೆ ಇದೆ. ಈ ಹಣವನ್ನು ಅರ್ಹ ಸಾಲಗಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈ ಪರಿಹಾರ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.