ಹುಟ್ಟಿನಿಂದಲೇ ಆಕೆಗೆ ಎರಡೂ ಕೈಗಳಿಲ್ಲ. ಆದರೆ ಸಾಧನೆಗೆ ಅಡ್ಡಿಯಾಗಿಲ್ಲ. ತಾನೂ ಎಲ್ಲರಂತೆ ಕಾರು ಡ್ರೈವಿಂಗ್ ಮಾಡಬೇಕು ಅನ್ನೋದು ಈಕೆಯ ಕನಸಾಗಿತ್ತು. ಕಳೆದ 5 ವರ್ಷಗಳಿಂದ ಸತತ ಪ್ರಯತ್ನದಲ್ಲಿದ್ದ ಈ ಯುವತಿ ಇದೀಗ ಕಾರು ಡ್ರೈವಿಂಗ್ ಮಾತ್ರವಲ್ಲ, ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಕೂಡ ಪಡೆದುಕೊಂಡಿದ್ದಾಳೆ.
ಕೊಚ್ಚಿ(ಡಿ.08) ಸಾಧಿಸುವ ಛಲವಿದ್ದರೆ ಯಾವೂದೂ ಅಡ್ಡಿಯಾಗಲ್ಲ ಅನ್ನೋ ಮಾತಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಇದೀಗ ಕೇರಳದ ಇಡುಕ್ಕಿ ಜಿಲ್ಲೆಯ ಜಿಲುಮೊಳ್ ಎಂ ಥಾಮಸ್ ಸೇರಿಕೊಂಡಿದ್ದಾಳೆ. ಎರಡೂ ಕೈಗಳಿಲ್ಲದ ಹುಟ್ಟಿದ ಜಿಲುಮೊಳ್ ಇದೀಗ ಕಾರು ಡ್ರೈವಿಂಗ್ ಮಾಡುವುದು ಮಾತ್ರಲ್ಲ, ಸರ್ಕಾರದಿಂದ ಅಧಿಕೃತ ಡ್ರೈವಿಂಗ್ ಲೈಸೆನ್ಸ್ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ. ಜಿಲುಮೊಳ್ ಇದೀಗ ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾಳೆ. ಇಷ್ಟೇ ಅಲ್ಲ ವಿಶೇಷ ಚೇತನರಿಗೆ ಮಾದರಿಯಾಗಿದ್ದಾಳೆ.
ಜಿಲುಮೊಳ್ ಬಾಲ್ಯದಿಂದಲೇ ಹಲವು ಸವಾಲು ಎದುರಿಸುತ್ತಲೇ ಬಂದಿದ್ದಾಳೆ. ಕೈಗಳಿಲ್ಲದ ಕಾರಣ ಎಲ್ಲದ್ದಕ್ಕೂ ಪೋಷಕರ ನೆರವ ಅಗತ್ಯವಾಗಿತ್ತು. ಆದರೆ ಬೆಳೆಯುತ್ತಿದ್ದಂತೆ ತಾನು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಅನ್ನೋ ಛಲ ಬೆಳೆದಿತ್ತು. ಇದಕ್ಕೆ ತಕ್ಕಂತೆ ಜಿಲುಮೊಳ್ ಕಠಿಣ ಪರಿಶ್ರಮದಲ್ಲಿ ತೊಡಗಿದ್ದಳು. ತನ್ನ ವಿದ್ಯಾಭ್ಯಾಸವೂ ಎಲ್ಲರಂತೆ ಸುಲಭವಾಗಿರಲಿಲ್ಲ. ಕೈಗಳಿಲ್ಲದ ಕಾರಣ ಕಾಲುಗಳೇ ಈಕೆಗೆ ಕೈಗಳು ಕೂಡ ಆಗಿತ್ತು. ಊಟ, ಬರಹ ಎಲ್ಲವೂ ಕಾಲುಗಳಿಂದಲೇ ನಡೆಯುತ್ತಿತ್ತು.
ವಿದ್ಯಾಭ್ಯಾಸ ಮುಗಿಸಿದ ಜಿಲುಮೊಳ್ ಕೊಚ್ಚಿಯ ಖಾಸಗಿ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿಕೊಂಡಳು. ಕಚೇರಿಗೆ ತೆರಳಲು ಸೇರಿದಂತ ಇತರ ಒಡಾಟಕ್ಕೆ ಕಾರು ಪ್ರಯಾಣ ಅವಶ್ಯಕ. ಹೀಗಾಗಿ ಕಾರು ಡ್ರೈವಿಂಗ್ ಕಲಿಯಲು ನಿರ್ಧರಿಸಿದ್ದಾಳೆ. ಆದರೆ ಡ್ರೈವಿಂಗ್ ಶಾಲೆಗೆ ತೆರಳಿ ಅರ್ಜಿ ಭರ್ತಿ ಮಾಡಿದ್ದಾಳೆ. ಆದರೆ ಈಕೆಯ ಅರ್ಜಿ ಸಾರಿಗೆ ಇಲಾಖೆ ತಿರಸ್ಕರಿಸಿತ್ತು. ಕಾರಣ ವೈಕಲ್ಯ. 5 ವರ್ಷಗಳ ಹಿಂದೆ ಈಕೆಯ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ ಛಲ ಬಿಡದ ಜಿಲುಮೊಳ್, ವಿಕಲಚೇತನ ವ್ಯಕ್ತಿಗಳ ಆಯೋಗದ ಮೊರೆ ಹೋಗಿದ್ದಾಳೆ.
ಈಕೆಯ ಮನವಿ ಪಡೆದ ಆಯೋಗ, ಟ್ರಾನ್ಸ್‌ಪೋರ್ಟ್ ಕಮಿಷನ್‌ಗೆ ಪತ್ರ ಬರೆದಿತ್ತು. ಈ ರೀತಿಯ ಪ್ರಕರಣಗಳಿಗೆ ಪರಿಹಾರವೇನು ಎಂದು ಕೇಳಿತ್ತು. ಅಧ್ಯಯನ ಮೂಲಕ ವರದಿ ನೀಡುವಂತೆ ಸೂಚಿಸಿತ್ತು. ಈ ಸೂಚನೆಯನ್ನು ಮೋಟಾರು ವೆಹಿಕಲ್ ವಿಭಾಗಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಧಿಕಾರಿಗಳು ಹಲವು ದಿನ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಆಯಾ ವಿಶೇಷ ಚೇತನರಿಗೆ ತಕ್ಕಂತೆ ವಾಹನ ಮಾಡಿಫಿಕೇಶ್ ಮಾಡಲು ಶಿಫಾಸರು ಮಾಡಿತ್ತು. ಈ ವರದಿ ಜಿಲುಮೊಳ್ ಸಂತಸ ಇಮ್ಮಡಿಗೊಳಿಸಿತ್ತು.
2018ರ ಮಾರುತಿ ಸುಜಿಕಿ ಸೆಲೆರಿಯೋ ಕಾರು ಖರೀದಿಸಿದ ಜಿಲುಮೊಳ್ ತನಗೆ ಬೇಕಾದ ರೀತಿ ಮಾಡಿಫಿಕೇಶ್ ಮಾಡಿಸಿಕೊಂಡಿದ್ದಾಳೆ. ಒಂದು ಕಾಲಿನಿಂದ ಸ್ಟೀರಿಂಗ್, ಮತ್ತೊಂದು ಕಾಲಿನಿಂದ ಎಕ್ಸಲೇಟರ್ ಹಾಗೂ ಬ್ರೇಕ್ ಬಳಕೆ ಮಾಡುವಂತೆ ಮಾಡಿಫಿಕೇಶ್ ಮಾಡಲಾಗಿದೆ. ಇನ್ನು ವಾಯ್ಸ್ ಕಮಾಂಡ್ ನೆರವು ಕೂಡ ನೀಡಲಾಗಿದೆ. ಪ್ರತಿ ದಿನ ಕಾರು ಡ್ರೈವಿಂಗ್ ಕಲಿಯಲು ಆರಂಭಿಸಿದ್ದಾಳೆ.
ಈ ಮೂಲಕ ಕಳೆದ 5 ವರ್ಷಗಳಿಂದ ಮಾಡಿದ ಪರಿಶ್ರಮಕ್ಕೆ ಇದೀಗ ಫಲ ಸಿಕ್ಕಿದೆ. ವಿಶೇಷ ಪ್ರಕರಣ ಎಂದು ಪರಿಗಣಿಸಿ ಜಿಲುಮೊಳ್ ಅರ್ಜಿಯನ್ನು ಪುರಸ್ಕರಿಸಿದೆ. ಬಳಿಕ ಖುದ್ದು ಟ್ರಾನ್ಸ್‌ಫೋರ್ಟ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಜಿಲುಮೊಳ್ ಡ್ರೈವಿಂಗ್ ಪರಿಶೀಲಿಸಿದ್ದಾರೆ. ಜಿಲುಮೊಳ್ ಜೊತೆ ಕಾರಿನಲ್ಲಿ ಕುಳಿತು ನಗರದಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಹಲವು ಸುತ್ತಿನ ಪರೀಕ್ಷೆಯಲ್ಲಿ ಯಶಸ್ವಿಯಾದ ಜಿಲುಮೊಳಗೆ ಇದೀಗ ಸರ್ಕಾರ ಅಧಿಕೃತ ಡ್ರೈವಿಂಗ್ ಲಸೆನ್ಸ್ ನೀಡಿದೆ.