ಎಂಜಿನೀಯರ್ ಅಥವಾ ಡಾಕ್ಟರ್ ಆಗಬೇಕು, ಅಮೆರಿಕದಲ್ಲಿ ಸೆಟಲ್ ಆಗಬೇಕೆಂಬ ಕನಸು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಆದರೆ, ಎಲ್ಲಿಯೋ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ, ಸಾತ್ವಿಕ್ ಎಂಬ ಈ ಯುವಕ ಅಮೆರಿಕದಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದ. ಆದರೆ, ಇದೀಗ ಸೇರಿದ್ದು ಮಾತ್ರ ಭಾರತೀಯ ಸೇನೆಗೆ!
ಮಂಗಳೂರು (ಜೂ.14): ಸಾಮಾನ್ಯವಾಗಿ ಇಂದಿನ ಯುವಕರು ಹಾಗೂ ಪೋಷಕರಿಗೆ ಮಕ್ಕಳು ಬಿಇ (BE) ಓದಬೇಕು, ಎಂಜಿನಿಯರ್ (Engineer) ಆಗಬೇಕು. ಫಾರಿನ್‌ಗೆ ಕೆಲಸಕ್ಕೆ ಹೋಗಬೇಕೆಂಬ ಕನಸು (Dream) ಕಾಮನ್. ಇಲ್ಲವೇ ಮಕ್ಕಳು ಡಾಕ್ಟರ್ ಆಗಲಿ ಎಂಬುದನ್ನು ಬಯಸುತ್ತಾರೆ. ಅಬ್ಬಾ ಮಕ್ಕಳು ಫಾರಿನ್ ಫ್ಲೈಟ್ ಹತ್ತಿದ ಕೂಡಲೇ ಲೈಫ್ ಸೆಟಲ್ ಆಯಿತು ಅಂತ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ, ಈ ಎಲ್ಲವಕ್ಕೂ ವಿಭಿನ್ನವೆಂಬಂತೆ ದಕ್ಷಿಣ ಕನ್ನಡದ (Dakshina Kannada) ಯುವಕನೊಬ್ಬ ಎಲೆಕ್ಟ್ರಿಕ್ ಎಂಜಿನೀಯರಿಂಗ್‌ನಲ್ಲಿ (Electric Engineering) ಎಂಎಸ್ ಪದವಿ ಪಡೆದು, ಅಮೆರಿಕದಲ್ಲಿ ಕೆಲಸದಲ್ಲಿದ್ದರೂ, ಭಾರತಕ್ಕೆ ಮರಳಿ ತಕ್ಕ ತರಬೇತಿ ಪಡೆದು, ಭಾರತೀಯ ಸೇನೆಗೆ ನಿಯೋಜನೆಗೊಂಡಿದ್ದಾರೆ.
ಬೆಳ್ತಂಗಡಿಯ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ ಸಾತ್ವಿಕ ಕುಳಮರ್ವ (Sathvik Kulamarva) ಭಾರತೀಯ ಸೇನಾಪಡೆಯ ಟೆಲಿಕಮ್ಯುನಿಕೇಶನ್ (Telecommunication) ವಿಭಾಗದಲ್ಲಿ ಲೆಪ್ಟಿನೆಂಟ್ ಆಗಿ ಆಯ್ಕೆ ಆಗಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಮತ್ತು ಪಿಯು ಕಾಲೇಜು ಉಪನ್ಯಾಸಕಿ ಪಿ. ವಸಂತಿ ದಂಪತಿ ಪುತ್ರರಾದ ಸಾತ್ವಕ್ ಜಮ್ಮುವಿನ ಸಾತ್ವಾರಿಯಲ್ಲಿ 26 ಐಡಿಎಸ್‌ಆರ್ (ಇನ್‌ಫೆಂಟ್ರಿ ಡಿವಿಶನ್ ಸಿಗ್ನಲ್ಸ್ ರೆಜಿಮೆಂಟ್) ನಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನಿಯೋಜನೆಗೊಂಡಿದ್ದಾರೆ.
ಅಮೆರಿಕಾ ಸೇನೆ ಸೇರಿದ ತಮಿಳುನಟಿ ಅಖಿಲಾ ನಾರಾಯಣನ್
ಶುಕ್ರವಾರ ಡೆಹ್ರಾಡೂನ್‌ನಲ್ಲಿ ನಡೆದ ಇಂಡಿಯನ್ ಮಿಲಿಟರಿ ಅಕಾಡೆಮಿಯ (Indian Military Academy) ಪಾಸಿಂಗ್ ಔಟ್ ಡೇ ಪರೇಡ್ (Passing Out parade)ನಲ್ಲಿ ಪಾಲ್ಗೊಂಡ 288 ಯುವಕರಲ್ಲಿ ಸಾತ್ವಿಕ್ ಸಹ ಒಬ್ಬರು. ಎಲ್ಲಾ ಕೆಡೆಟ್‌ಗಳಿಗೆ ಮೂರು ವಾರ ವಿಶ್ರಾಂತಿ ನೀಡಿದ್ದು, ಬಳಿಕ ತಾವು ನಿಯೋಜನೆಗೊಂಡ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸಾತ್ವಿಕ್ ಶಿಕ್ಷಣ ಪೂರೈಸಿದ್ದು ಎಲ್ಲಿ?
ಬೆಳ್ತಂಗಡಿಯ ಸಂತ ತೆರೆಸಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಸ್‌ಡಿಎಂ ಕಾಲೇಜು (SDM College, Ujire)ಉಜಿರೆಯಲ್ಲಿ ಪಿಯುಸಿ, ಅನಂತರ ಬೆಂಗಳೂರಿನಲ್ಲಿ ಟೆಲಿಕಮ್ಯುನಿಕೇಶನ್‌ನಲ್ಲಿ ಎಂಜಿನಿಯರಿಂಗ್ ಪದವಿ (BE) ಪಡೆದಿದ್ದಾರೆ. ಎಂಎಸ್ ಪದವಿಯನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಡೆದಿದ್ದು, ಅಮೆರಿಕದ (America) ಅರಿಝೋನಾ ಸ್ಟೇಟ್ ಯುನಿವರ್ಸಿಟಿ (ಎಎಸ್‌ಯು) ಯಲ್ಲಿ ಸ್ನಾತಕೋತ್ತರ ಅಧ್ಯಯನ ಮುಗಿಸಿ, ಅಲ್ಲಿ ಸ್ವಲ್ಪ ಕಾಲ ಉದ್ಯೋಗದಲ್ಲಿ ಇದ್ದರು.
ಭಾರತದಲ್ಲಿ ರಿಸರ್ವೇಶನ್ (Reservation), ಅದು ಸರಿ ಇಲ್ಲ, ಇದೂ ಸರಿ ಇಲ್ಲವೆಂದು ದೂಷಿಸುತ್ತಾ ಅಮೆರಿಕದಲ್ಲಿಯೇ ಉಳಿಯುವ ಯುವಕರಿಗೆ ತದ್ವಿರುದ್ಧ ಎಂಬಂತೆ ಸಾತ್ವಿಕ್ ಭಾರತಕ್ಕೆ ಮರಳಿದ್ದಾರೆ. ಅವರ ವಿದ್ಯಾರ್ಹತೆಗೆ ಅಮೆರಿಕಾದಲ್ಲಿಯೂ ಬೇಕಾದ್ದು ಮಾಡಬಹುದಿತ್ತು. ಒಳ್ಳೆ ಕೆಲಸವೂ ಸಿಗುತ್ತಿತ್ತು. ಆದರೂ, ಮಾತೃಭೂಮಿಗೆ ಸೇವ ಸಲ್ಲಿಸಬೇಕೆಂಬ ಆಶಯದಿಂದ ಭಾರತೀಯ ಸೇನೆ ಸೇರಿದ್ದಾರೆ. ಹಾಗಂಥ ಈ ಹುದ್ದೆಯನ್ನು ಅಲಂಕರಿಸುವುದು ಸಾತ್ವಿಕ್‌ಗೆ ಹೂವಿನ ಹಾಸಿಗೆಯಾಗಿರಲಿಲ್ಲ. ಎರಡು ವರ್ಷಗಳ ಕಾಲ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಅಧ್ಯಯನ ನಡೆಸಿ, ಪರೀಕ್ಷೆಗೆ ಹಾಜರಾಗಿದ್ದರು. ಎರಡನೇ ಪ್ರಯತ್ನದಲ್ಲಿ ತಮ್ಮ ಕನಸಿನಂತೆ ಸೇನೆಗೆ ಆಯ್ಕೆಯಾದರು.. ಕಳೆದ ಸೆಪ್ಟೆಂಬರ್‌ನಲ್ಲಿ ಡೆಹ್ರಾಡೂನ್‌ನ ಇಂಡಿಯನ್ ಮಿಟಲಿರಿ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಳ್ಳುವಂತೆ ಭಾರತೀಯ ಸೇನೆಯಿಂದ ನೇಮಕಾತಿ ಪತ್ರ ಬಂದಿತ್ತು. ಒಂದು ವರ್ಷದ ಕಠಿಣ ತರಬೇತಿ ನಂತರ ಇದೀಗ ಕರ್ತವ್ಯ ಸಲ್ಲಿಸಲು ನಿಯೋಜನೆಗೊಂಡಿದ್ದಾರೆ.
Indian Army: ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಮೇಜರ್ ದೀಪಕ್ ನೈನ್ವಾಲ್ ಪತ್ನಿ ಸೇನೆ ಸೇರ್ಪಡೆ!
ಪಾಸಿಂಗ್ ಔಟ್ (Passing out Parade) ಕಾರ್ಯಕ್ರಮದಲ್ಲಿ ಯೋಧರ ಹೆತ್ತವರಿಗೆ ಮತ್ತು ಕುಟುಂಬದ ಸದಸ್ಯರಿಗೆ ಪಾಲ್ಕೊಳ್ಳಲು ಅನುಮತಿ ಇತ್ತು. ತಮ್ಮ ಮಕ್ಕಳು ಜೀವನವನ್ನು ದೇಶ ಸೇವೆಗೆ ಮುಡಿಪಾಗಿಟ್ಟ ಆ ಕ್ಷಣ ಎಲ್ಲ ಹೆತ್ತವರಿಗೂ ಹೃದಯಸ್ಪರ್ಶಿಯಾಗಿತ್ತು. ಸಾತ್ವಿಕ್ ಪೋಷಕರೂ ಇಂಥ ಕಾರ್ಯಕ್ರಮದಲ್ಲಿ ಪಾಲ್ಕೊಂಡಿದ್ದರು. ಒಟ್ಟಿನಲ್ಲಿ ಸಾತ್ವಿಕ್ ಶ್ರಮ, ಆಶಯ, ತೆಗೆದುಕೊಂಡ ತೀರ್ಮಾನಗಳು ಭಾರತೀಯ ಅನೇಕ ಯುವಕರಿಗೆ ಮಾದರಿಯಾಗಿರುವುದು ಸುಳ್ಳಲ್ಲ. ಇಂಥವರ ಸಂಖ್ಯೆ ವೃದ್ಧಿಸಲಿ. ಸೇನೆಗೆ ಸೇರುವ ಯುವಕರ ಸಂಖ್ಯೆ ವೃದ್ಧಿಸಲಿ. ಸಾತ್ವಿಕ್‌ಗೆ ಒಳ್ಳೆಯದಾಗಲೆಂದು ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್ ಆಶಯಿಸುತ್ತದೆ.