
ಬೆಂಗಳೂರು(ಜೂ.22): ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪರಿಚಿತರಾದ ವೃದ್ಧರೊಬ್ಬರನ್ನು ಯುವತಿಯೊಬ್ಬಳು ಸಿನಿಮಾ ನೋಡಲು ಮಂತ್ರಿಮಾಲ್‌ಗೆ ಕರೆದೊಯ್ದು ಬಳಿಕ ಮತ್ತು ಬರುವ ಔಷಧಿ ಮಿಶ್ರಿತ ತಂಪುಪಾನಿಯ ಕುಡಿಸಿ ಸುಮಾರು ಮೂರು ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಬಿಚ್ಚಿಕೊಂಡು ಪರಾರಿಯಾಗಿರುವ ಘಟನೆ ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗಾನಗರ ನಿವಾಸಿ ನಾಗರಾಜು(68) ಆಭರಣ ಕಳೆದುಕೊಂಡವರು. ಜೂ.12ರಂದು ಈ ಘಟನೆ ನಡೆದಿದೆ. ನಾಗರಾಜು ನೀಡಿದ ದೂರಿನ ಮೇರೆಗೆ ಮಾಧವಿ ಎಂಬ ಯುವತಿ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಭೀಕರ ದಾಳಿ, ಚಾಕು ಇರಿತದಿಂದ ಪರಿಸ್ಥಿತಿ ಚಿಂತಾಜನಕ!
ಏನಿದು ಘಟನೆ?
ದೂರುದಾರ ನಾಗರಾಜು ಅವರು ಜೂ.12ರಂದು ಮಧ್ಯಾಹ್ನ 12.30ಕ್ಕೆ ಗಾಂಧಿನಗರಕ್ಕೆ ಬಂದು ಪರಿಚಿತ ವಕೀಲರೊಬ್ಬರನ್ನು ಭೇಟಿಯಾಗಿದ್ದರು. ಬಳಿಕ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಚೇರ್ ಮೇಲೆ ಕುಳಿತಿರುವಾಗ, ಪಕ್ಕದ ಚೇರ್‌ನಲ್ಲಿ ಸುಮಾರು 19 ವರ್ಷದ ಯುವಕ ಮತ್ತು ಸುಮಾರು 25 ವರ್ಷದ ಯುವತಿ ಕುಳಿತು ಮಾತನಾಡುತ್ತಿದ್ದರು. ಹೊಟ್ಟೆಹಸಿವಾಗುತ್ತಿದ್ದು, ತಿನ್ನಲು ಹಣವಿಲ್ಲ ಎಂದು ಪರಸ್ಪರ ಮಾತನಾಡುತ್ತಿರುವುದನ್ನು ನಾಗರಾಜು ಕೇಳಿಸಿಕೊಂಡಿದ್ದಾರೆ. ಬಳಿಕ ಇಬ್ಬರನ್ನು ಮಾತನಾಡಿಸಿ ಊಟ ಕೊಡಿಸಲು ಕದಂಬ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆ ಇಬ್ಬರು ಊಟ ಬೇಡ ಎಂದಿದ್ದಾರೆ.
ಹೋಮ್ ವರ್ಕ್ ಮಾಡಿಸದ ಗಂಡನ ಮೇಲಿನ ಕೋಪಕ್ಕೆ, ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ
ಸಿನಿಮಾ ಮಧ್ಯಂತರದಲ್ಲಿ ಪರಾರಿ!
ಈ ವೇಳೆ ಆ ಯುವಕ ಸ್ಥಳದಿಂದ ತೆರಳಿದ್ದಾನೆ. ಬಳಿಕ ಮಾಧವಿ ಹೆಸರಿನ ಆ ಯುವತಿ, ನಾಗರಾಜು ಅವರನ್ನು ಮಲ್ಲೇಶ್ವರದ ಮಂತ್ರಿಮಾಲ್‌ಗೆ ಕರೆದೊಯ್ದಿದ್ದಾಳೆ. ಈ ವೇಳೆ ತನ್ನ ಬ್ಯಾಗ್‌ನಲ್ಲಿದ್ದ ಎರಡು ಜ್ಯೂಸ್ ಪೊಟ್ಟಣಗಳನ್ನು ನಾಗರಾಜುಗೆ ಕುಡಿಸಿದ್ದಾಳೆ. ಬಳಿಕ ಮಲ್ಟಿಫ್ಲೆಕ್ಸ್‌ನಲ್ಲಿ ಡೇರ್‌ಡೆವಿಲ್ ಮುಸ್ತಾಫಾ ಸಿನಿಮಾ ನೋಡಲು ಹೋಗಿದ್ದಾರೆ. ಸಿನಿಮಾ ಮಧ್ಯಂತರದಲ್ಲಿ ಇಬ್ಬರು ಹೊರಗೆ ಬಂದಿದ್ದಾರೆ.
ಈ ವೇಳೆ ಮಾಧವಿ, ನಾಗರಾಜು ಅವರ ಗಮನ ಬೇರೆಡೆ ಸೆಳೆದು ಸ್ಥಳದಿಂದ ಪರಾರಿಯಾಗಿದ್ದಾಳೆ. ಮಂಪರಲ್ಲಿದ್ದ ನಾಗರಾಜು ಅವರಿಗೆ ಕೆಲ ಹೊತ್ತಿನ ಬಳಿಕ ತಮ್ಮ 54 ಗ್ರಾಂ ತೂಕದ ಚಿನ್ನದ ಬ್ರಾಸ್ ಲೇಟ್, ಕತ್ತಿನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರ, 3 ಗ್ರಾಂ ತೂಕದ ಉಂಗುರ, ಮೊಬೈಲ್, ಪರ್ಸ್ ಇಲ್ಲದಿರುವುದು ಅರಿವಿಗೆ ಬಂದಿದೆ. ಕಳ್ಳತನ ಮಾಡುವ ಉದ್ದೇಶದಿಂದಲೇ ಮಾಧವಿ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬರೆಸಿ ಕುಡಿಸಿರುವುದು ಗೊತ್ತಾಗಿದೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಮಾಧವಿಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ