
ಬೆಂಗಳೂರು(ಫೆ.09): ಪತಿ ಹೃದಯಾಘಾತದಿಂದ(Heart Attack) ಮೃತಪಟ್ಟಿದ್ದಾರೆ(Death) ಎಂದು ಮಹಿಳೆಯೊಬ್ಬರು(Woman) ಸುಳ್ಳು ದಾಖಲೆ ಸಲ್ಲಿಸಿ ಖಾಸಗಿ ವಿಮಾ ಕಂಪನಿಯಿಂದ ಬರೋಬ್ಬರಿ 3 ಕೋಟಿ ವಿಮೆ ಪಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಖಾಸಗಿ ವಿಮಾ ಕಂಪನಿ ಕಾನೂನು ವಿಭಾಗ ವ್ಯವಸ್ಥಾಪಕ ಪಿ.ಎಸ್.ಗಣಪತಿ ಎಂಬುವವರು ನೀಡಿದ ದೂರಿನ ಮೇರೆಗೆ ಕೋರಮಂಗಲ ಠಾಣೆ ಪೊಲೀಸರು(Police), ವಿಟ್ಟಸಂದ್ರ ನಿವಾಸಿ ಸುಪ್ರಿಯಾ ಲಕಾಕುಲಾ ಎಂಬುವವರ ವಿರುದ್ಧ ಎಫ್‌ಐಆರ್(FIR) ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
Bengaluru Crime: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಚಾಕು ಇರಿದವ ಅರೆಸ್ಟ್
ಏನಿದು ಪ್ರಕರಣ?:
ಆಂಧ್ರಪ್ರದೇಶ ಮೂಲದ ಕೃಷ್ಣಪ್ರಸಾದ್ ಗಾರಲಪಟ್ಟಿ(31) ನಗರದ ವಿಟ್ಟಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದರು. ನಗರದ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಎಂದು ಹೇಳಿಕೊಂಡು ಕೃಷ್ಣಪ್ರಸಾದ್ ಆನ್‌ಲೈನ್‌ನಲ್ಲಿ ವಿಮಾ ಕಂಪನಿಯನ್ನು(Insurance Company) ಸಂಪರ್ಕಿಸಿ, 2021ರ ಮಾರ್ಚ್ 3ರಂದು ಮಹಾ ರಕ್ಷ ಸುಪ್ರೀಂ ಪಾಲಿಸಿಗೆ ಅರ್ಜಿ ಸಲ್ಲಿಸಿ ಫೋಟೋ, ಪಾನ್, ಆಧಾರ್, ಮೂರು ತಿಂಗಳ ವೇತನ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ಮರು ದಿನ ವೈದ್ಯಕೀಯ ವರದಿಗಳನ್ನು ಸಲ್ಲಿಸಿದ್ದರು.
ಆನ್‌ಲೈನ್ ಮೂಲಕವೇ ಕೃಷ್ಣಪ್ರಸಾದ್ ಅವರ ದಾಖಲೆ ಪರಿಶೀಲನೆ ನಡೆಸಿದ ವಿಮಾ ಕಂಪನಿ, 2021ರ ಮಾರ್ಚ್ 5ರಂದು ಕೃಷ್ಣಪ್ರಸಾದ್‌ಗೆ ಪಾಲಿಸಿ ನೀಡಿತ್ತು. ಅದರಂತೆ ವಾರ್ಷಿಕ ಪ್ರೀಮಿಯಂ .51,777 ಆಗಿದ್ದು, ಪಾಲಿಸಿ ಮೊತ್ತ .3 ಕೋಟಿ ಆಗಿತ್ತು. ಈ ಪಾಲಿಸಿ ಅವಧಿ 28 ವರ್ಷ ಆಗಿದ್ದರೂ 12 ವರ್ಷ ಮಾತ್ರ ವಿಮೆ ಕಂತು ಪಾವತಿಸಬೇಕಿತ್ತು. ಕೃಷ್ಣಪ್ರಸಾದ್ ಅವರು ಈ ಪಾಲಿಸಿಗೆ ಪತ್ನಿ ಸುಪ್ರಿಯಾ ಅವರನ್ನೇ ನಾಮಿನಿ ಮಾಡಿದ್ದರು. ದುರಂತವೆಂದರೆ, ಈ ಪಾಲಿಸಿ ಮಾಡಿಸಿ 2 ತಿಂಗಳು 9 ದಿನಕ್ಕೆ (2021ರ ಮೇ 14) ಕೃಷ್ಣಪ್ರಸಾದ್ ಮೃತಪಟ್ಟಿದ್ದರು.
ಕಳೆದ 2021ರ ಜುಲೈ 19ರಂದು ಕೃಷ್ಣಪ್ರಸಾದ್ ಪತ್ನಿ ಸುಪ್ರಿಯಾ ವಿಮಾ ಕಂಪನಿ ಕಚೇರಿಗೆ ಬಂದು ನನ್ನ ಪತಿ ಹೃದಯಘಾತದಿಂದ ಮೃತಪಟ್ಟಿರುವುದಾಗಿ ದಾಖಲೆ ಸಲ್ಲಿಸಿದ್ದರು. ಅದರಂತೆ ದಾಖಲೆ ಪರಿಶೀಲಿಸಿದ್ದ ವಿಮೆ ಕಂಪನಿ ಅಧಿಕಾರಿಗಳು, ನಾಮಿನಿಯಾಗಿದ್ದ ಸುಪ್ರಿಯಾ ಅವರ ಬ್ಯಾಂಕ್ ಖಾತೆಗೆ 3.2 ಕೋಟಿಯನ್ನು ವರ್ಗಾವಣೆ ಮಾಡಿದ್ದರು.
Dharwad: ಕುಡಿದ ಮತ್ತಿನಲ್ಲಿ ಪೊಲೀಸರ ಜೀಪನ್ನೇ ಕಳವು ಮಾಡಿದ ಭೂಪ...!
ಹೃದಯಾಘಾತವಲ್ಲ, ಕ್ಯಾನ್ಸರ್!
ಈ ನಡುವೆ 2021ರ ಡಿ.24ರಂದು ರವಿ ಎಂಬುವವರು ವಿಮಾ ಕಂಪನಿಯನ್ನು ಸಂಪರ್ಕಿಸಿ, ಪತ್ರವೊಂದನ್ನು ನೀಡಿದ್ದರು. ಅದರಲ್ಲಿ ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿಲ್ಲ, ಬದಲಾಗಿ ಕ್ಯಾನ್ಸರ್ ಕಾಯಿಲೆಯಿಂದ(Cancer) ಮೃತಪಟ್ಟಿದ್ದಾರೆ. ಆದರೆ, ಕ್ಯಾನ್ಸರ್ ಕಾಯಿಲೆ ಬಗ್ಗೆ ಮುಚ್ಚಿಟ್ಟು ಪಾಲಿಸಿ ಮಾಡಿಸಿದ್ದಾರೆ. ಇದೀಗ ಅವರ ಪತ್ನಿ ಸುಪ್ರಿಯಾ ಅವರು ನಕಲಿ ದಾಖಲೆ ಸಲ್ಲಿಸಿ ವಿಮೆ ಪಡೆದಿದ್ದಾರೆ ಎಂದು ತಿಳಿಸಿದ್ದರು. ಜತೆಗೆ ಕೃಷ್ಣಪ್ರಸಾದ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ಬಗ್ಗೆ ದಾಖಲೆಯನ್ನೂ ಸಲ್ಲಿಸಿದ್ದರು. ಅಂತೆಯೆ ಅಜಿತ್‌ಕುಮಾರ್ ಮತ್ತು ಮಂಜುಳಾ ಎಂಬುವವರು ಸಹ ವಿಮಾ ಕಂಪನಿಗೆ ಕೃಷ್ಣ ಪ್ರಸಾದ್ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು ಇ-ಮೇಲ್(E-Mail) ಮುಖಾಂತರ ಮಾಹಿತಿ ನೀಡಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಸುಪ್ರಿಯಾ ಅವರು ಸುಳ್ಳು ದಾಖಲೆ ಸಲ್ಲಿಸಿ ವಿಮಾ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಾಸಗಿ ವಿಮಾ ಕಂಪನಿ ಕಾನೂನು ವಿಭಾಗ ವ್ಯವಸ್ಥಾಪಕ ಪಿ.ಎಸ್.ಗಣಪತಿ ದೂರಿನಲ್ಲಿ ಕೋರಿದ್ದಾರೆ.
ಮೃತ ವ್ಯಕ್ತಿ ಟೆಕ್ಕಿ ಅಲ್ಲ!
ಸುಪ್ರಿಯಾ ಅವರು ವಿಮೆ ಹಣ ಕ್ಲೈಂ ಮಾಡುವಾಗ ವಿಮಾ ಕಂಪನಿಗೆ ಸಲ್ಲಿಸಿದ್ದ ಕೃಷ್ಣಪ್ರಸಾದ್ ಅವರ ಕಂಪನಿ ಮಾಹಿತಿ, ರಜೆ ಚೀಟಿ, ವೇತನ ಪತ್ರ, ವೈದ್ಯಕೀಯ ಸೇವೆಗಳ ಮಾಹಿತಿಯೂ ಸುಳ್ಳು. ಸಾಫ್ಟ್‌ವೇರ್ ಕಂಪನಿಯಲ್ಲಿ ವಿಚಾರಿಸಿದಾಗ ಆತ ತಮ್ಮ ಉದ್ಯೋಗಿ ಅಲ್ಲ ಎಂಬುದು ಗೊತ್ತಾಗಿದೆ. ಕೃಷ್ಣಪ್ರಸಾದ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿರುವುದಕ್ಕೆ ದಾಖಲೆ ದೊರೆತಿವೆ ಎಂದು ವಿಮಾ ಕಂಪನಿ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ