ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ 55 ಬಾರಿ ನಿಯಮ ಉಲ್ಲಂಘಿಸಿದ ಭೂಪ..!

By Kannadaprabha NewsFirst Published Jul 5, 2022, 9:34 AM IST
Highlights

*   ವಾಹನದ ಚಿತ್ರ ಸೆರೆ ಹಿಡಿಯಲು ಮುಂದಾದ ಪೊಲೀಸ್‌
*  ವಾಹನ ಅಲ್ಲೇ ಬಿಟ್ಟು ಚಾಲಕ ಪರಾರಿ
*  28,500 ದಂಡ ಪಾವತಿ ಬಾಕಿ 
 

ಬೆಂಗಳೂರು(ಜು.05):  ನಕಲಿ ನೋಂದಣಿ ಫಲಕ ಅಳವಡಿಸಿಕೊಂಡು ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ ದ್ವಿಚಕ್ರ ವಾಹನ ಮಾಲಿಕನ ವಿರುದ್ಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪಟ್ಟೇಗಾರಪಾಳ್ಯ ನಿವಾಸಿ ದ್ವಿಚಕ್ರ ವಾಹನದ ಮಾಲಿಕ ನಿಖಿಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ವಿಜಯ ನಗರ ಸಂಚಾರ ಪೊಲೀಸ್‌ ಠಾಣೆಯ ಸಂಚಾರ ಪೇದೆ ಎನ್‌.ಆರ್‌.ಹರೀಶ್‌ ಅವರು ಜು.3ರಂದು ಬೆಳಗ್ಗೆ ಮಾರೇನಹಳ್ಳಿ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಿಜಯನಗರ ಕ್ಲಬ್‌ ಕಡೆಯಿಂದ ಸವಾರ ದ್ವಿಚಕ್ರ ವಾಹನವನ್ನು ವೇಗ ಹಾಗೂ ಅಜಾಗರೂಕವಾಗಿ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಈ ವೇಳೆ ಪೇದೆ ಹರೀಶ್‌ ಅವರು ಎಫ್‌ಟಿವಿಆರ್‌ ಮೊಬೈಲ್‌ ಆ್ಯಪ್‌ನಲ್ಲಿ ದ್ವಿಚಕ್ರ ವಾಹನದ ಚಿತ್ರ ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಸವಾರ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪೇದೆ ಹರೀಶ್‌ ಅವರನ್ನು ನೂಕಿ ಪರಾರಿಯಾಗಿದ್ದಾನೆ.

Latest Videos

ಜಮೀನು ವಿವಾದ: ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿ ಚಿತ್ರೀಕರಿಸಿದ ದುರುಳರು: ವಿಡಿಯೋ ವೈರಲ್

ವಾಹನದ ನೋಂದಣಿ ಫಲಕ ಪರಿಶೀಲಿಸಿದಾಗ ಕೆಎ-02 ಜೆ 938 ಎಂದು ನಮೂದಿಸಲಾಗಿತ್ತು. ಈ ಸಂಖ್ಯೆ ಬಗ್ಗೆ ಅನುಮಾನಗೊಂಡು ದ್ವಿಚಕ್ರ ವಾಹನದ ಎಂಜಿನ್‌ ಹಾಗೂ ಚಾಸಿ ಸಂಖ್ಯೆ ಪರಿಶೀಲಿಸಿದಾಗ ದ್ವಿಚಕ್ರ ವಾಹನದ ಅಸಲಿ ನೋಂದಣಿ ಸಂಖ್ಯೆ ಕೆಎ-02 ಜೆಜಿ 9381 ಎಂಬುದು ತಿಳಿದು ಬಂದಿದೆ. ಹೀಗಾಗಿ ವಾಹನದ ಮಾಲಿಕ ಹಾಗೂ ಸವಾರನ ವಿರುದ್ಧ ಕ್ರಮ ಕೈಗೊಳ್ಳವಂತೆ ಪೇದೆ ಹರೀಶ್‌ ನೀಡಿದ ದೂರಿನ ಮೇರೆಗೆ ವಿಜಯನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

28,500 ದಂಡ ಪಾವತಿ ಬಾಕಿ!

ಈ ದ್ವಿಚಕ್ರ ವಾಹನದ ವಿರುದ್ಧ 55 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ದಂಡದ ಮೊತ್ತ .28,500 ಬಾಕಿಯಿದೆ. ಈ ರೀತಿ ನಕಲಿ ನೋಂದಣಿ ಫಲಕ ಅಳವಡಿಸಿಕೊಂಡು ಸಂಚರಿಸುವ ವಾಹನಗಳ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಇಂತಹ ವಾಹನಗಳ ವಿರುದ್ಧ ಎಎನ್‌ಪಿಆರ್‌ ಕ್ಯಾಮರಾಗಳ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ನಕಲಿ ನೋಂದಣಿ ಫಲಕ ಅಳವಡಿಸುವ ವಾಹನ ಮಾಲಿಕನ ವಿರುದ್ಧ ವಂಚನೆ ಪ್ರಕರಣ ದಾಖಲಿಸುವುದಾಗಿ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ. ಬಿ.ಆರ್‌.ರವಿಕಾಂತೇಗೌಡ ಎಚ್ಚರಿಸಿದ್ದಾರೆ.
 

click me!