
ಬೆಂಗಳೂರು(ಜು.05): ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿಗೆ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೌಕರನಿಗೆ ಪಿಸ್ತೂಲ್ ತೋರಿಸಿ ಕೈ ಕಾಲು ಕಟ್ಟಿ ನಗದು ಸೇರಿದಂತೆ 1.58 ಕೋಟಿ ರು. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೈಲಸಂದ್ರದ ‘ರಾಮದೇವ್ ಬ್ಯಾಂಕರ್ಸ್ ಆ್ಯಂಡ್ ಜ್ಯೂವೆಲರಿ’ ಮಳಿಗೆಯಲ್ಲಿ ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಕರಣ ಭೇದಿಸಲು ರಚಿಸಿರುವ ಪೊಲೀಸರ ನಾಲ್ಕು ತಂಡಗಳು ದುಷ್ಕರ್ಮಿಗಳ ಪತ್ತೆಗೆ ಕಾರ್ಯ ಪ್ರವೃತ್ತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನು ವಿವಾದ: ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿ ಚಿತ್ರೀಕರಿಸಿದ ದುರುಳರು: ವಿಡಿಯೋ ವೈರಲ್
ಘಟನೆ ವಿವರ
ಭವಾರಿಲಾಲ್ ಎಂಬುವವರಿಗೆ ಸೇರಿದ ಈ ಮಳಿಗೆಯಲ್ಲಿ ಚಿನ್ನಾಭರಣಗಳನ್ನು ಅಡಮಾನ ಇರಿಸಿಕೊಳ್ಳುವುದು ಹಾಗೂ ಚಿನ್ನ ಹಾಗೂ ಬೆಳ್ಳಿ ಆಭರಣ ಮಾರಾಟ ಮಾಡಲಾಗುತ್ತದೆ. ಸೋಮವಾರ ಬೆಳಗ್ಗೆ 7.30ಕ್ಕೆ ನೌಕರರ ಧರ್ಮಸೇನಾ ಎಂದಿನಂತೆ ಮಳಿಗೆ ಬಾಗಿಲು ತೆರೆದು ಆಭರಣಗಳನ್ನು ಜೋಡಿಸಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರು ಅಪರಿಚಿತರು ಗ್ರಾಹಕರ ಸೋಗಿನಲ್ಲಿ ಮಳಿಗೆ ಪ್ರವೇಶಿಸಿ, ಆಭರಣಗಳ ಬಗ್ಗೆ ವಿಚಾರಿಸಿದ್ದಾರೆ.
ಪತಿಯೊಂದಿಗೆ ಕ್ಷುಲ್ಲಕ ಜಗಳ: 7 ತಿಂಗಳ ಮಗನನ್ನು ಕೊಂದು ಮಹಿಳೆ ಆತ್ಮಹತ್ಯೆ
ಅಷ್ಟರಲ್ಲಿ ಮತ್ತಿಬ್ಬರು ಏಕಾಏಕಿ ಮಳಿಗೆ ಪ್ರವೇಶಿಸಿ ನೌಕರ ಧರ್ಮಸೇನಾಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಬಳಿಕ ನಾಲ್ವರು ಸೇರಿಕೊಂಡು ಆತನ ಕೈ ಕಾಲು ಕಟ್ಟಿಹಾಕಿ ಲಾಕರ್ ತೆರೆದು ಸುಮಾರು 3.5 ಕೆ.ಜಿ. ಚಿನ್ನಾಭರಣ, 30 ಕೆ.ಜಿ. ಬೆಳ್ಳಿ ಆಭರಣ ಹಾಗೂ .80 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳು ಪರಾರಿಯಾಗುವ ವೇಳೆ ಧರ್ಮಸೇನಾ ಅವರ ಮೊಬೈಲ್ ಕಸಿದುಕೊಂಡು ಸ್ವಿಚ್‌್ಡಆಫ್ ಮಾಡಿ ಜತೆಯಲ್ಲೇ ತೆಗೆದುಕೊಂಡು ಹೋಗಿದ್ದಾರೆ.
ಬಳಿಕ ಕಟ್ಟನ್ನು ಬಿಚ್ಚಿಕೊಂಡಿರುವ ನೌಕರ ಧರ್ಮಸೇನಾ ಕೂಡಲೇ ಮಾಲಿಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಮಾಲಿಕ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮಳಿಗೆಯ ಸಿಸಿಟಿವಿ ಕ್ಯಾಮರಾ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ