
ನವದೆಹಲಿ (ಆ.9): ಸರ್ಕಾರಿ ಸೌಲಭ್ಯಕ್ಕಾಗಿ ಜನ ಏನೇನೆಲ್ಲಾ ಮಾಡೋದನ್ನು ನೋಡ್ತೇವೆ. ಈಗಲೂ ಕೂಡ ಎಂಥೆಂತಾ ಸರ್ಕಾರಿ ಕುಳಗಳು ಕೂಡ ಬಡ ಜನರಿಗಾಗಿಯೇ ಇರುವ ಬಿಪಿಎಲ್ ಕಾರ್ಡ್‌ಗಳನ್ನು ಹಿಡಿದುಕೊಂಡಿರೋದನ್ನ ಕಾಣುತ್ತೇವೆ. ಸರ್ಕಾರ ಅದೆಷ್ಟೇ ನಿಯಮಗಳನ್ನು ಮಾಡಿದರೂ, ನಿಯಮಗಳಲ್ಲಿನ ಲೋಪದೋಷ ಕಂಡುಹಿಡಿದು ಅದ ಲಾಭ ಪಡೆಯೋದನ್ನ ನೋಡ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಸರ್ಕಾರ ನೀಡುವ ಪಿಂಚಣಿ ಸಲುವಾಗಿ ಮಾಡಿರುವ ಮಹಾಪ್ಲ್ಯಾನ್ ಕೇಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತ.
ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮೃತ ತಂದೆಯ ಪತ್ನಿ ಎಂದು ಹೇಳಿಕೊಂಡು ಕಳೆದ 10 ವರ್ಷದಿಂದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 10 ವರ್ಷಗಳಲ್ಲಿ ಸರ್ಕಾರದಿಂದ ಬರೋಬ್ಬರಿ 12 ಲಕ್ಷ ರೂಪಾಯಿ ಪಿಂಚಣಿ ಹಣ ಪಡೆದಿದ್ದ ಮೊಹ್ಸಿನಾ ಪರ್ವೇಜ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ಪೊಲೀಸರಿಗೆ ಇದರ ಕುರಿತಾದ ಮಾಹಿತಿ ನೀಡಿದ್ದು ಮೊಹ್ಸಿನಾ ಪರ್ವೇಜ್ ಪತಿ. ಆತ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಮೊಹ್ಸಿನಾ ಪರ್ವೇಜ್‌ರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ದಂಪತಿಗಳಿಬ್ಬರು ಯಾವುದೋ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಪತಿಗೆ ಪತ್ನಿಯ ಮಹಾವಂಚನೆ ಗೊತ್ತಾಗಿದೆ. ತಕ್ಷಣವೇ ಅವರು ಈ ಕುರಿತಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಲಿಗಂಜ್ ನಿವಾಸಿಯಾಗಿದ್ದ ವಿಜರತ್ ಉಲ್ಲಾ ಖಾನ್ 1987ರ ನವೆಂಬರ್ 30 ರಂದು ಲೇಖಪಾಲ್ (ಸರ್ವೇಯರ್) ಹುದ್ದೆಯಿಂದ ನಿವೃತ್ತರಾಗಿದ್ದರು. 2013ರ ಜನವರಿ 2ರವರೆಗೂ ಅವರು ಸರ್ಕಾರದಿಂದ ನಿವೃತ್ತಿ ವೇತನ ಪಡೆದುಕೊಳ್ಳುತ್ತಿದ್ದರು. ಇವರ ಪತ್ನಿ ಸವಿಯಾ ಬೇಗಂ ಇದಕ್ಕೂ ಮುನ್ನವೇ ನಿಧನರಾಗಿದ್ದರು.
ತನ್ನ ತಂದೆ ವಿಜರತ್ ಉಲ್ಲಾ ಖಾನ್ ಮರಣದ ನಂತರ, ಮಗಳು ಮೊಹ್ಸಿನಾ ಪರ್ವೇಜ್ ತನ್ನ ತಂದೆಯ ಹೆಂಡತಿ ಎಂದು ತೋರಿಸಲು ದಾಖಲೆಗಳನ್ನು ನಿರ್ಮಿಸಿ ಪಿಂಚಣಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಆರಂಭಿಸಿದ್ದ ಮೊಹ್ಸಿನಾ, ಕಳೆದ 10 ವರ್ಷದ ಅವಧಿಯಲ್ಲಿ ಸರ್ಕಾರದಿಂದ 2 ಲಕ್ಷ ರೂಪಾಯಿ ಪಿಂಚಣಿ ಹಣ ಪಡೆದುಕೊಂಡಿದ್ದಾರೆ.
ಎಲ್ಲಾ ವ್ಯವಸ್ಥೆ ಫೇಲ್ ಆದರೂ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋದು ಖಂಡಿತ: ಇಸ್ರೋ ಚೀಫ್
ಪೊಲೀಸರ ಮಾಹಿತಿಯ ಪ್ರಕಾರ, ಈ ವಂಚನೆಯ ಬಗ್ಗೆ ಪತಿಗೆ ಈ ಮೊದಲೇ ಗೊತ್ತಿತ್ತು. ಹಾಗಿದ್ದರೂ ದಂಪತಿಗಳು ಜಗಳವಾಡಿದ ನಂತರ ಪೊಲೀಸರಿಗೆ ಇದರ ಮಾಹಿತಿ ನೀಡಿದ ಹೆಂಡತಿ ಬಂಧನಕ್ಕೆ ಒಳಗಾಗುವತೆ ಮಾಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಹ್ಸಿನಾಳನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Chandrayaan 3: ಬಾಹ್ಯಾಕಾಶ ನೌಕೆಗೆ ನಾಳೆ ಬಹುದೊಡ್ಡ ಅಗ್ನಿಪರೀಕ್ಷೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ