ಅನಾಥ ಮಕ್ಕಳ ಹೆಸರಿನಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಂಚಿಸುತ್ತಿದ್ದ ಕಾಲ್ ಸೆಂಟರ್‌ವೊಂದರ ಮೇಲೆ ದಾಳಿ ನಡೆಸಿ, ಇಬ್ಬರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಏ.23): ಅನಾಥ ಮಕ್ಕಳ ಹೆಸರಿನಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಂಚಿಸುತ್ತಿದ್ದ ಕಾಲ್ ಸೆಂಟರ್‌ವೊಂದರ ಮೇಲೆ ದಾಳಿ ನಡೆಸಿ, ಇಬ್ಬರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೂಪೇನ ಅಗ್ರಹಾರದ ಎನ್‌ಜಿಆರ್ ಲೇಔಟ್‌ನಲ್ಲಿದ್ದ ಅಕ್ಯುಮೇನ್‌ಟ್ರಿಕ್ಸ್ ಕಾಲ್ ಸೆಂಟರ್ ಮುಖ್ಯಸ್ಥ ಎನ್.ವಿ.ಅಜಯ್ ಹಾಗೂ ಎನ್.ವೆಂಕಟಚಲಪತಿ ಬಂಧಿತರಾಗಿದ್ದು, ಆರೋಪಿಗಳಿಂದ 13 ಮೊಬೈಲ್‌ಗಳು, ಲ್ಯಾಪ್ ಟಾಪ್ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಇತ್ತೀಚಿಗೆ ಅನಾಥ ಮಕ್ಕಳ ಭಾವಚಿತ್ರವನ್ನು ಬಳಸಿಕೊಂಡು ತೆರಿಗೆ ಪಾವತಿದಾರರಿಂದ ಅಕ್ರಮವಾಗಿ ವಂತಿಕೆ ವಸೂಲಿ ಮಾಡಿದ ಬಗ್ಗೆ ಮಾಹಿತಿ ಪಡೆದು ಬೊಮ್ಮನಹಳ್ಳಿ ಠಾಣೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ದೂರಿನ ಅನ್ವಯ ಸಿಸಿಬಿ ಪೊಲೀಸರು, ಎರಡು ದಿನಗಳ ಹಿಂದೆ ಆರೋಪಿಗಳ ಕಚೇರಿ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆದಾರರಿಗೆ ರಿಯಾಯಿತಿ ಹೆಸರಿನಲ್ಲಿ ಗಾಳ: ಆರು ವರ್ಷಗಳ ಹಿಂದೆ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿ ಕಾಲ್ ಸೆಂಟರ್‌ನಲ್ಲಿ ಅಜಯ್ ಕೆಲಸ ಮಾಡುತ್ತಿದ್ದ. ಆ ಕಂಪನಿ ಸಹ ಹೀಗೆ ಅನಾಥ ಮಕ್ಕಳು ಹಾಗೂ ನಿರ್ಗತಿಕರ ಹೆಸರಿನಲ್ಲಿ ಚಂದಾ ವಸೂಲಿ ಮಾಡಿ ವಂಚಿಸುತ್ತಿತ್ತು. ಅಲ್ಲಿನ ಕಾರ್ಯವೈಖರಿ ನೋಡಿದ್ದ ಅಜಯ್, ಸುಲಭವಾಗಿ ಹಣ ಸಂಪಾದಿಸಲು ಹೈದರಾಬಾದ್ ಕಂಪನಿಯ ಕೆಲಸ ತೊರೆದು ಬೆಂಗಳೂರಿಗೆ ಮರಳಿ ಅಕ್ಯುಮೇನ್‌ಟ್ರಿಕ್ಸ್ ಹೆಸರಿನಲ್ಲಿ ಸ್ವಂತ ಕಂಪನಿ ಶುರು ಮಾಡಿದ್ದ. ನಾಲ್ಕು ವರ್ಷಗಳಿಂದ ಅನಾಥ ಮಕ್ಕಳ ಭಾವಚಿತ್ರ ಹಾಗೂ ವೃದ್ಧರ ಪೋಟೋಗಳನನ್ನು ಬಳಸಿ ಹಣ ಸಂಗ್ರಹಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕಾಲೇಜು ಪ್ರವೇಶ ನೆಪದಲ್ಲಿ 104 ವಿದೇಶಿಯರಿಗೆ ಟೋಪಿ: ಆರೋಪಿ ಬಂಧನ
ತನ್ನ ಕಾಲ್ ಸೆಂಟರ್‌ನಲ್ಲಿ 20 ಜನರನ್ನು ನೇಮಿಸಿಕೊಂಡಿದ್ದ ಅಜಯ್, ತನ್ನ ಸಿಬ್ಬಂದಿ ಮೂಲಕ ತೆರಿಗೆಪಾವತಿದಾರರಿಗೆ ಕರೆ ಮಾಡಿ ವಂತಿಕೆ ಸಂಗ್ರಹಿಸುತ್ತಿದ್ದ. ಆನ್‌ಲೈನ್‌ನಲ್ಲಿ ತೆರಿಗೆಪಾವತಿದಾರರ ವಿವರ ಸಂಗ್ರಹಿಸುತ್ತಿದ್ದ ಅಜಯ್, ತೆರಿಗೆ ಪಾವತಿಯಲ್ಲಿ ಶೇ.2 ರಷ್ಟುಹಣವನ್ನು ಸಾಮಾಜಿಕ ಸೇವೆಗೆ ನೀಡಲು ಅವಕಾಶವಿದೆ. ನಿಮ್ಮಿಂದ ಅನಾಥ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ನಾಜೂಕಿನ ಮಾತುಗಳ ಮೂಲಕ ಸೆಳೆಯುತ್ತಿದ್ದ. ಈತನ ಮಾತಿಗೆ ಮರುಳಾಗಿ ಸಾಫ್‌್ಟವೇರ್ ಉದ್ಯೋಗಿಗಳು ಸೇರಿದಂತೆ ಹಲವರು 2 ರಿಂದ 30 ಸಾವಿರ ರು.ವರೆಗೆ ವಂತಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಂಸ್ಥೆಗಳ ಹೆಸರು ದುರ್ಬಳಕೆ: ಬೆಂಗಳೂರಿನ ಆದರಣೆ ಸೇವಾ ಸಂಸ್ಥೆ, ಚೈಲ್ಡ್ ಲೈಫ್ ಫೌಂಡೇಷನ್, ಹೈದರಾಬಾದ್‌ನ ಕೇರ್ ಅಂಡ್ ಲವ್, ಆಶಾ ಕುಟೀರ ಫೌಂಡೇಷನ್ ಹಾಗೂ ವಿ4 ಎಂಬ ಸೇವಾ ಸಂಸ್ಥೆಗಳ ಹೆಸರನ್ನು ವಂತಿಕೆ ವಸೂಲಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಾವಿರಾರು ಅನಾಥ ಮಕ್ಕಳಿಗೆ ಊಟ, ವಸತಿ ಸೌಲಭ್ಯ, ವಿದ್ಯಾಭ್ಯಾಸ, ಆರೋಗ್ಯ, ಬಟ್ಟೆಇತ್ಯಾದಿಗಳನ್ನು ಒದಗಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಸುಳ್ಳು ಹೇಳಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಶೇ.40-50 ರಷ್ಟು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಸಂಸ್ಥೆ ಕಚೇರಿ ಮೇಲೆ ಸಿಸಿಬಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಂಟಿ ಕಾರ್ಯಾಚರಣೆ ನಡೆಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆಕ್ ಬೌನ್ಸ್ ಪ್ರಕರಣದ ಸಂಧಾನಕ್ಕೆ ಒಪ್ಪದ ವಕೀಲನಿಗೆ ಇರಿದ ಮಹಿಳೆ!
ತಿಂಗಳಿಗೆ 10-15 ಲಕ್ಷ ವಸೂಲಿ: ಅನಾಥ ಮಕ್ಕಳ ಹೆಸರಿನಲ್ಲಿ ತಿಂಗಳಿಗೆ 10-15 ಲಕ್ಷ ರು. ಹಣವನ್ನು ಆರೋಪಿಗಳು ಸಂಗ್ರಹಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಲಕ್ಷಾಂತರ ಹಣವನ್ನು ಆರೋಪಿಗಳು ವಸೂಲಿ ಮಾಡಿದ್ದಾರೆ. ಈ ಹಣದಲ್ಲೇ 1.5 ಕೋಟಿ ರು ಮೌಲ್ಯದ ಕಟ್ಟಡವನ್ನು ಅಜಯ್ ನಿರ್ಮಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.