ಒಂದು ತಿಂಗಳ ಬಳಿಕ ಪ್ರಕರಣದ ಆರೋಪಿಗಳು ಪೊಲೀಸ್ ವಶಕ್ಕೆ, ಹಣ, ಆಶ್ರಯ ಕೊಟ್ಟಿದ್ದ ವೃದ್ಧೆ
ಬೆಳಗಾವಿ(ನ.16): ಕಷ್ಟ ಕಾಲದಲ್ಲಿ ಹಣ ಹಾಗೂ ಆಶ್ರಯ ನೀಡಿದ್ದ ವಯೋವೃದ್ದೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿ, ಜೈಲಿಗಟ್ಟಿದ್ದಾರೆ. ಹುಕ್ಕೇರಿ ತಾಲೂಕಿನ ಝಂಗಟಿಹಾಳ ಗ್ರಾಮದ ಶಂಕರ ರಾಮಪ್ಪಾ ಪಾಟೀಲ (38) ಹಾಗೂ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಮಹೇಶ ಸದಾಶಿವ ಕಬಾಡಗೆ (33) ಬಂಧಿತರು. ಹುಕ್ಕೇರಿ ತಾಲೂಕಿನ ಕಡಹಟ್ಟಿಸದ್ಯ ಬೆಲ್ಲದಬಾಗೇವಾಡಿ ನಿವಾಸಿ ಮಲ್ಲವ್ವ ಜೀವಪ್ಪಾ ಕಮತೆ (75) ಕೊಲೆಯಾದ ವಯೋವೃದ್ಧೆ. ಅ.7ರಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಮನೆಯೊಂದರ ಕೋಣೆಯಲ್ಲಿ ಮಲ್ಲವ್ವ ಕಮತೆ ಎಂಬ ವೃದ್ಧೆಯ ಶವ ಪತ್ತೆಯಾಗಿತ್ತು. ಆ ದಿನ ಅನೈಸರ್ಗಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಮಹಿಳೆಯ ಸಾವು ಕತ್ತು ಹಿಸುಕಿದ್ದರಿಂದ ಆಗಿತ್ತು ಎಂದು ವರದಿ ಬಂದಿದೆ. ತಕ್ಷಣ ಈ ಬಗ್ಗೆ ಅ.13ರಂದು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವೃದ್ದೆಯ ಹಿನ್ನೆಲೆ ವಿಚಾರಣೆ ನಡೆಸಿದ ಪೊಲೀಸರು, ಸುಮಾರು 10 ವರ್ಷದ ಹಿಂದೆ ಈಕೆಯೇ ಪತಿ ಜೀವಪ್ಪ ಕಮತೆ ನಿಧನರಾಗಿರುವ ಹಾಗೂ ಒಂದು ವರ್ಷದ ಹಿಂದೆ ಮೂರು ಜನ ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳ ಹಿಂದೆ ದೂರವಾಗಿ ಬೆಲ್ಲದ ಬಾಗೇವಾಡಿ ಗ್ರಾಮದ ಕೋಣೆಯಲ್ಲಿ ವಾಸವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಅಲ್ಲದೇ ಬೆಲ್ಲದಬಾಗೇವಾಡಿ ಗ್ರಾಮದ ಕೋಣೆಯಲ್ಲಿ ಒಬ್ಬಳೆ ವಾಸವಾಗಿದ್ದರಿಂದ ಪ್ರತಿದಿನ ಸಂಜೆ ಆಕೆಯ ಮೊಮ್ಮಗ ನಾಲ್ಕು ಕಿಮೀ ದೂರದಿಂದ ಬಂದು ಊಟವನ್ನು ಕೊಟ್ಟು ಹೋಗುತ್ತಿದ್ದ. ಎಂದಿನಂತೆ ಅ.7ರಂದು ಊಟ ಕೊಡಲು ಬಂದಿದ್ದ ವೇಳೆ ವೃದ್ಧೆ ಮಲ್ಲವ್ವನ ಶವ ಪತ್ತೆಯಾಗಿದೆ. ಈ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೊದಲಿಗೆ ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ವೃದ್ಧೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ವೇಳೆ ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಇದೊಂದು ಕೊಲೆ ಪ್ರಕರಣ ಎಂದು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಂಡತಿಯನ್ನು 72 ಪೀಸ್ ಮಾಡಿದ್ದ ಪತಿ, ಡೆಹ್ರಾಡೂನ್‌ನಲ್ಲಿ ಆಗಿತ್ತು ಶ್ರದ್ಧಾ ರೀತಿಯ ಘಟನೆ!
ಕೊಲೆ ಮಾಡಿ ಮೈಮೇಲಿನ ಒಡವೆ ದೋಚ್ಚಿದ್ದ ಹಂತಕರು:
ತನಗೆ ಕಷ್ಟಇದೇ ಎಂದು ವೃದ್ಧೆ ಮಲ್ಲವ್ವ ಕಮತೆ ಬಳಿ ಪ್ರಮುಖ ಆರೋಪಿ ಶಂಕರ ಪಾಟೀಲ ಎಂಬಾತ .50 ಸಾವಿರ ಹಣವನ್ನು ಸಾಲದ ರೂಪದಲ್ಲಿ ತೆಗೆದುಕೊಂಡಿದ್ದಾನೆ. ಇದೇ ರೀತಿ ಮತ್ತೋರ್ವ ಆರೋಪಿ ಮಹೇಶ ಕಬಾಡಗೆ ಕೂಡ ಅಜ್ಜಿ ಬಳಿ .10 ಸಾವಿರ ಹಣವನ್ನು ಪಡೆದುಕೊಂಡಿದ್ದನು. ಹಲವು ತಿಂಗಳು ಕಳೆದರೂ ಇಬ್ಬರೂ ಸಾಲ ತೆಗೆದುಕೊಂಡ ಹಣಕ್ಕೆ ಬಡ್ಡಿವೂ ಪಾವತಿಸದೇ ಹಾಗೂ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಅಜ್ಜಿ ಈ ಆರೋಪಿಗಳಿಬ್ಬರನ್ನು ಮೇಲಿಂದ ಮೇಲೆ ಹಣ ಕೊಡುವಂತೆ ಕೇಳಿದ್ದಾಳೆ. ಇದರಿಂದ ಅಸಮಾಧಾನಗೊಂಡ ಆರೋಪಿಗಳು, ಈ ಅಜ್ಜಿ ಹಲವು ಜನರಿಗೆ ಸಾಲ ಕೊಟ್ಟಿದ್ದು, ಈಕೆಯ ಮನೆಯಲ್ಲಿ ಬಹಳ ಹಣ ಇರಬಹುದು ಎಂದು ಭಾವಿಸಿ ಕೊಲೆಗೆ ಸಂಚು ರೂಪಿ ಮಳೆಯ ನೆಪವೊಡ್ಡಿ ಅಜ್ಜಿ ಮನೆಗೆ ತೆರಳಿದ್ದಾರೆ. ಈ ವೇಳೆ ಅಜ್ಜಿಯ ಮನೆಯಲ್ಲಿ ಅದೊಂದು ದಿನ ವಾಸ ಮಾಡಿದ್ದಾರೆ. ಈ ವೇಳೆ ಅಜ್ಜಿಯನ್ನು ಕೊಲೆ ಮಾಡಿದ್ದಾರೆ.
ಬಳಿಕ ಮನೆಯಲ್ಲಿ ಏನಾದರೂ ಸಿಗಬಹದು ಎಂದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಏನೂ ಸಿಗದ ಹಿನ್ನೆಲೆಯಲ್ಲಿ ಮೃತ ವೃದ್ಧೆಯ ಮೈ ಮೇಲೆ ಇದ್ದ ಸುಮಾರು 1 ಲಕ್ಷ ಮೌಲ್ಯದ 20 ಗ್ರಾಂ ಬಂಗಾರದ ಆರಭಣಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ಈ ವೃದ್ಧೆ ಹಾಗೂ ಇವರ ಮಕ್ಕಳ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪ ಇರುವ ಬಗ್ಗೆ ಮಾಹಿತಿ ಇದ್ದಿದ್ದರಿಂದ ಸಾಕ್ಷಿ ನಾಶ ಮಾಡುವುದು ಹಾಗೂ ಪ್ರಕರಣದ ದಾರಿ ತಪ್ಪಿಸುವುದರ ಜತೆಗೆ ಈ ಕೊಲೆ ಪ್ರಕರಣ ಅಜ್ಜಿಯ ಮಕ್ಕಳ ಮೇಲೆ ಬರಲಿ ಎಂಬ ದುರುದ್ದೇಶದಿಂದ ಮನೆಯಲ್ಲಿದ್ದ ಕಾಗದ ಪತ್ರಗಳ ಬ್ಯಾಗನ್ನು ಮಕ್ಕಳ ಮನೆ ಮುಂದೆ ಎಸೆದು ಪರಾರಿಯಾಗಿದ್ದರು.
ಟ್ಯಾಕ್ಸಿ ಚಾಲಕನಿಂದ ನಟಿಯ ಮೇಲೆ ಲೈಂಗಿಕ ದೌರ್ಜನ್ಯ; ದೂರು ದಾಖಲು
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ ಅವರು, ಗೋಕಾಕ ಡಿಎಸ್‌ಪಿ ಮನೋಜಕುಮಾರ ನಾಯಕ ನೇತೃತ್ವದಲ್ಲಿ ಹುಕ್ಕೇರಿ ಠಾಣೆಯ ಪೊಲೀಸ್ ಇನ್ಸೆ$್ಪಕ್ಟರ್ ರಫೀಕ್ ತಹಸೀಲ್ದಾರ್ ಹಾಗೂ ಇನ್ನೀತರ ಸಿಬ್ಬಂದಿ ತಂಡ ರಚಿಸಿದ್ದರು. ಕೊಲೆ ಮಾಡಿ ಸಿನಿಮಿಯ ರೀತಿಯಲ್ಲಿ ಕಥೆ ಕಟ್ಟಿದ್ದ ಹಂತಕರನ್ನು ಹೆಡೆಮುರಿ ಕಟ್ಟಿದ್ದ ಪೊಲೀಸರು, ಕೊಲೆಗೆ ಬಳಕೆ ಮಾಡಿದ್ದ ಹಗ್ಗ ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವೃದ್ಧೆ ಮೈ ಮೇಲೆ ಇದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ನಿರತಾಗಿದ್ದಾರೆ. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಿಯ ಮೊಮ್ಮಗ ನೀಡಿದ ದೂರಿನ ಮೇರೆಗೆ ಮೊದಲು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ ವೇಳೆ, ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ವರದಿ ಬಂದಿತ್ತು. ಈ ತಕ್ಷಣ ಈ ಪ್ರಕರಣವನ್ನು ಬೇಧಿಸಲು ತಂಡ ರಚಿಸಲಾಗಿತ್ತು. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಪ್ಪೋಪ್ಪಿಕೊಂಡಿದ್ದಾರೆ. ಈ ಪ್ರಕರಣ ಬೇಧಿಸುವಲ್ಲಿ ಶ್ರಮಿಸಿದ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಅಂತ ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.