Bengaluru Crime: ‘ಅದೃಷ್ಟದ ಚೊಂಬು’ ತೋರಿಸಿ ಕೋಟಿಗಟ್ಟಲೇ ಟೋಪಿ..!

By Kannadaprabha NewsFirst Published Feb 6, 2022, 4:28 AM IST
Highlights

*  1 ಕೋಟಿ ಹೂಡಿದರೆ 5 ಕೋಟಿ ಲಾಭ ಎಂದು ನಂಬಿಸಿದ್ದ ಆರೋಪಿಗಳು 
*  ಖಾಸಗಿ ಕಂಪನಿ ಉದ್ಯೋಗಿಗಳಿಂದ ಹಣ ಪಡೆದು ವಂಚನೆ
*  ಇಬ್ಬರು ಆರೋಪಿಗಳನ್ನ ಬಂಧಿಸಿದ ಪೊಲೀಸರು
 

ಬೆಂಗಳೂರು(ಫೆ.06): ಜಪಾನ್‌ ದೇಶದ ವೈಮಾನಿಕ ಮತ್ತು ಅಂತರಿಕ್ಷ ಸಂಶೋಧನಾ(JAXA) ಸಂಸ್ಥೆ ಖರೀದಿಸಲಿರುವ ‘ಅದೃಷ್ಟದ ಚೊಂಬು’ ಎಂದು ತೋರಿಸಿ ಸಿನಿಮೀಯ ಶೈಲಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳಿಂದ 78.89 ಲಕ್ಷ ಪಡೆದು ಟೋಪಿ ಹಾಕಿದ್ದ ಇಬ್ಬರು ಚಾಲಾಕಿಗಳು ಬ್ಯಾಟರಾಯನಪುರ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.

ನಾಗರಬಾವಿಯ ವಿಘ್ನೇಶ್‌ ಹಾಗೂ ಕೋಲಾರ(Kolar) ಜಿಲ್ಲೆ ಮುಳಬಾಗಿಲು ತಾಲೂಕಿನ ನಾಗರಾಜ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 15 ಲಕ್ಷ ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಸುರೇಶ್‌, ಸಂತೋಷ್‌ಗೌಡ ಹಾಗೂ ವೆಂಕಟೇಶ್‌ ಪತ್ತೆಗೆ ತನಿಖೆ ನಡೆದಿದೆ. ಕೆಲ ತಿಂಗಳ ಹಿಂದೆ ಹಣ ಹೂಡಿಕೆ ನೆಪದಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳಾದ ನಿತಿನ್‌ರಾಜ್‌ ಮತ್ತು ಗೋಪಿ ಕಾರ್ತಿಕ್‌ ಅವರನ್ನು ಪರಿಚಯಿಸಿಕೊಂಡು ಆರೋಪಿಗಳು ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Latest Videos

Bengaluru Crime: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಚಾಕು ಇರಿದವ ಅರೆಸ್ಟ್‌

5 ಕೋಟಿ ಲಾಭ ಆಸೆ ತೋರಿಸಿ ನಾಮ:

ವಿಘ್ನೇಶ್‌, ನಾಗರಾಜ್‌, ಸಂತೋಷ್‌, ಸುರೇಶ್‌ ಹಾಗೂ ವೆಂಕಟೇಶ್‌ ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳಾಗಿದ್ದು, ನಾಜೂಕಿನ ಮಾತಿನಿಂದ ಜನರನ್ನು ಮರಳು ಮಾಡಿ ವಂಚಿಸಿ ಹಣ ಸಂಪಾದಿಸುವುದೇ ಇವರ ವೃತ್ತಿಯಾಗಿತ್ತು. ರೈಸ್‌ಪುಲ್ಲಿಂಗ್‌ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಿ ಹಣ ಗಳಿಸಲು ಆರೋಪಿಗಳು ಯೋಜಿಸಿದ್ದರು. 2021ರಲ್ಲಿ ಆರೋಪಿಗಳಿಗೆ ಗೌರಮ್ಮ ಎಂಬಾಕೆಯ ಮೂಲಕ ಖಾಸಗಿ ಕಂಪನಿ ಉದ್ಯೋಗಿಗಳಾಗ ನಿತಿನ್‌ ರಾಜ್‌ ಹಾಗೂ ಗೋಪಿ ಕಾರ್ತಿಕ್‌ ಪರಿಚಯವಾಗಿದ್ದರು. ಆಗ ‘ನಮ್ಮ ಬಳಿ ಅದೃಷ್ಟದ ಚೊಂಬು ಇದೆ. ಇದರಲ್ಲಿ ಐಸೋಟೋಪ್‌ ರೇಡಿಯೇಷನ್‌ ಇದ್ದು, ಈ ಚೊಂಬನ್ನು ಜಪಾನ್‌(Japan) ಹಾಗೂ ಅಮೆರಿಕ(America) ದೇಶಗಳ ವೈಮಾನಿಕ ಸಂಶೋಧನೆಗೆ ನೀಡುವಂತೆ ಬೇಡಿಕೆ ಬಂದಿದೆ. ಅಂತಿಮವಾಗಿ ಮಾತುಕತೆ ನಡೆದು ಜಪಾನ್‌ ದೇಶದ ಜಾಕ್ಸಾ ಸಂಸ್ಥೆ ಚೊಂಬು ಖರೀದಿಗೆ ಮಾತುಕತೆ ನಡೆದಿದೆ. ಆದರೆ ಚೊಂಬು ಖರೀದಿಗೂ ಮುನ್ನ ಬಹುರಾಷ್ಟ್ರೀಯ ಕಂಪನಿಯೊಂದರ ಜತೆ ಸಹಭಾಗಿತ್ವ ಪಡೆಯಬೇಕಿದೆ. ಈ ಯೋಜನೆಗೆ .1 ಕೋಟಿ ಹೂಡಿದರೆ .5 ಕೋಟಿ ಲಾಭ ಸಿಗಲಿದೆ’ ಎಂದು ಆರೋಪಿ ಸುರೇಶ್‌ ಹೇಳಿದ್ದ.

ಹಣ ಹೂಡಿಕೆ ವಿಚಾರವಾಗಿ ಯೋಚಿಸುವುದಾಗಿ ನಿತಿನ್‌ ಮತ್ತು ಗೋಪಿ ತಿಳಿಸಿದ್ದರು. ಕೆಲ ದಿನಗಳ ಬಳಿಕ ಮೈಸೂರು ರಸ್ತೆಯ ಸ್ಯಾಟ್‌ಲೈಟ್‌ ನಿಲ್ದಾಣ ಸಮೀಪ ಮತ್ತೆ ಇಬ್ಬರನ್ನು ಆರೋಪಿಗಳು ಭೇಟಿಯಾಗಿದ್ದರು. ಆಗ ಸುರೇಶ್‌, ‘ನಾನು ಈ ಯೋಜನೆಗೆ .25 ಲಕ್ಷ ತೊಡಗಿಸುತ್ತೇನೆ’ ಎಂದು ಹೇಳಿ ಸ್ಥಳದಲ್ಲೇ ನಗದು ಹಣ ಕೊಟ್ಟಿದ್ದಾನೆ. ಬಳಿಕ ನೀವು ಇನ್ನುಳಿದ ಹಣ ತೊಡಗಿಸುವಂತೆ ನಿತಿನ್‌ ಮತ್ತು ಗೋಪಿಗೆ ಆತ ಹೇಳಿದ್ದ. ಒಮ್ಮೆಗೆ ಸುರೇಶ್‌ 25 ಲಕ್ಷ ಕೊಟ್ಟಿದ್ದರಿಂದ ಆರೋಪಿಗಳ ಮಾತಿನ ಮೇಲೆ ದೂರುದಾರರಿಗೆ ವಿಶ್ವಾಸ ಮೂಡಿದೆ.

ತರುವಾಯ ಐದು ಹಂತದಲ್ಲಿ ನಿತಿನ್‌ ಮತ್ತು ಗೋಪಿ ಆರೋಪಿಗಳಿಗೆ 78.89 ಲಕ್ಷ ನೀಡಿದ್ದಾರೆ. ಈ ಹಣ ಸ್ವೀಕರಿಸಿದ ನಂತರ ಆರೋಪಿಗಳು, ದೂರುದಾರರ ಸಂಪರ್ಕ ಸ್ಥಗಿತಗೊಳಿಸಿದ್ದರು. ಕೊನೆಗೆ ತಾವು ಮೋಸ ಹೋಗಿರುವುದಾಗಿ ಅರಿತು ಜ.3ರಂದು ಬ್ಯಾಟರಾಯನಪುರ ಠಾಣೆಗೆ ಅವರು ಸಲ್ಲಿಸಿದರು. ಈ ಬಗ್ಗೆ ತನಿಖೆ(Investigation) ನಡೆಸಿದ ಇನ್‌ಸ್ಪೆಕ್ಟರ್‌ ಶಂಕರ್‌ ನಾಯಕ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಸಂಜೀವ್‌ ನಾಯ್ಕ ತಂಡ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಜ್‌ ಕಾರು, ಐಷರಾಮಿ ಕಚೇರಿ ತೋರಿಸಿ ವಂಚನೆ

ಹಣ ಹೂಡಿಕೆಗೆ ಒಲವು ತೋರಿದ ಬಳಿಕ ನಿತಿನ್‌ ಹಾಗೂ ಗೋಪಿ ಅವರಿಗೆ ನಂಬಿಕೆ ಮೂಡಿಸುವ ಸಲುವಾಗಿ ರಾಜಾಜಿನಗರ ಡಬ್ಲ್ಯುಟಿಓ(WTO) ಕಟ್ಟಡದ ತಮ್ಮ ಕಚೇರಿಗೆ ಆರೋಪಿಗಳು ಆಹ್ವಾನಿಸಿದ್ದರು. ಡಬ್ಲ್ಯುಟಿಓ ಕಟ್ಟಡದಲ್ಲಿ 4 ದಿನಗಳ ಮಟ್ಟಿಗೆ ಕೊಠಡಿ ಬಾಡಿಗೆ ಪಡೆದು ಕಚೇರಿಯಂತೆ ಬಿಂಬಿಸಿದ್ದರು. ಅಲ್ಲದೆ ದಿನಕ್ಕೆ .10 ಸಾವಿರಕ್ಕೆ ಬೆಂಜ್‌ ಕಾರನ್ನು ಬಾಡಿಗೆ ಪಡೆದ ವಿಘ್ನೇಶ್‌, ತಾನು ಕಂಪನಿ ನಿರ್ದೇಶಕ ಎನ್ನುವಂತೆ ತೋರಿಸಿಕೊಂಡಿದ್ದ. ಅಲ್ಲದೆ ಪಂಚಾತಾರಾ ಹೋಟೆಲ್‌ನಲ್ಲೇ ಭೋಜನ ಕೂಟ ನಡೆಸಿದ್ದರು. ಈ ರಂಗು ರಂಗಿನ ಜೀವನ ಶೈಲಿ ಕಂಡ ದೂರುದಾರರಿಗೆ ವಂಚಕರ ತಂಡದ ಮೇಲೆ ವಿಶ್ವಾಸ ಗಾಢವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Dharwad: ಕುಡಿದ ಮತ್ತಿನಲ್ಲಿ ಪೊಲೀಸರ ಜೀಪನ್ನೇ ಕಳವು ಮಾಡಿದ ಭೂಪ...!

ಇನ್ನೂ ಮೂವರಿಗೆ ‘ಚೊಂಬು’ ಕೊಟ್ರು

ಅದೃಷ್ಟದ ಚೊಂಬು ತೋರಿಸಿ ಮತ್ತೆ ಮೂವರಿಗೆ ನಾಮ ಹಾಕಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಆರೋಪಿಗಳು ವಂಚಿಸಿರುವ(Fraud) ಸಂಗತಿ ಬೆಳಕಿಗೆ ಬಂದಿದೆ.

ಕಾಮಾಕ್ಷಿಪಾಳ್ಯದ ಶಿವಮ್ಮ ಅವರು, ತಮ್ಮ ಆಭರಣ ಅಡಮಾನವಿಟ್ಟು .98 ಲಕ್ಷ, ಕಾವ್ಯಾ ಎಂಬುವವರು ನಿವೇಶನ ಮಾರಾಟ ಮಾಡಿ .48 ಲಕ್ಷ ಹಾಗೂ ಉದ್ಯಮಿ ಶ್ರೀನಿವಾಸ್‌ ಅವರು .62 ಲಕ್ಷವನ್ನು ‘ಚೊಂಬು’ ವಂಚಕರ ತಂಡಕ್ಕೆ ನೀಡಿ ಮೋಸ ಹೋಗಿದ್ದಾರೆ. ಆರೋಪಿಗಳ ಬಂಧನ ವಿಚಾರ ತಿಳಿದ ಈ ಮೂವರು, ಬ್ಯಾಟರಾಯನಪುರ ಠಾಣೆ ಪೊಲೀಸರನ್ನು ಸಂಪರ್ಕಿಸಿ ದೂರು(Complaint) ನೀಡಿದ್ದಾರೆ ಎಂದು ತಿಳಿದು ಬಂದಿದೆ.
 

click me!