ಪಾಲಕರೊಂದಿಗೆ ರಸ್ತೆ ದಾಟುತ್ತಿದ್ದ 10 ವರ್ಷದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ, ಬಾಲಕ ಸ್ಥಳದಲ್ಲಿಯೇ ಸಾವಿಗೀಡಾದ ದಾರುಣ ಘಟನೆ ಕಲಬುರ್ಗಿ ನಗರದ ಬಿದ್ದಾಪೂರ ಕಾಲೋನಿ ಸಮೀಪದ ಫ್ಲೈಓವರ್ ಬಳಿ ಇಂದು ನಡೆದಿದೆ.
ವರದಿ: ಶರಣಯ್ಯ ಹಿರೇಮಠ, ಕಲಬುರಗಿ
ಕಲಬುರಗಿ (ಮಾ.27): ಪಾಲಕರೊಂದಿಗೆ ರಸ್ತೆ ದಾಟುತ್ತಿದ್ದ 10 ವರ್ಷದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ, ಬಾಲಕ ಸ್ಥಳದಲ್ಲಿಯೇ ಸಾವಿಗೀಡಾದ ದಾರುಣ ಘಟನೆ ಕಲಬುರ್ಗಿ ನಗರದ ಬಿದ್ದಾಪೂರ ಕಾಲೋನಿ ಸಮೀಪದ ಫ್ಲೈಓವರ್ ಬಳಿ ಇಂದು ನಡೆದಿದೆ. ಟಿಪ್ಪರ್ ಹರಿದು ಹೋದ ಪರಿಣಾಮ ಬಾಲಕನ ದೇಹ ಛಿದ್ರವಾಗಿದೆ. ಇದನ್ನು ಕಂಡು ರೊಚ್ಚಿಗೆದ್ದ ಸ್ಥಳೀಯರು, ಮರಳು ಟಿಪ್ಪರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸ್ಥಳದಲ್ಲಿ ಉದ್ವೀಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮನೀಷ ಎನ್ನುವ ಹತ್ತು ವರ್ಷದ ಬಾಲಕ ಟಿಪ್ಪರನಡಿ ಸಿಲುಕಿ ಮೃತಪಟ್ಟ ನತದೃಷ್ಟ. ಈತ ತನ್ನ ಪೋಷಕರೊಂದಿಗೆ ರಸ್ತೆ ಕ್ರಾಸ್ ಮಾಡುವ ಸಂದರ್ಭದಲ್ಲಿ ಓಡಿಹೋಗಲು ಯತ್ನಿಸಿದ್ದಾನೆ. ಇದೇ ವೇಳೆ ಓವರ್ ಬ್ರಿಡ್ಜ್ ಮೇಲಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್, ಈ ಬಾಲಕನ ಮೇಲೆ ಹರಿದು ಹೋಗಿದೆ. ಟಿಪ್ಪರ್ ಟೈಯರ್‌ಗೆ ಸಿಲುಕಿ ಬಾಲಕನ ದೇಹ ಛಿದ್ರವಾಗಿದೆ. ಕಣ್ಮುಂದೆಯೇ ಮಗನಿಗಾದ ಘಟನೆಯಿಂದ ಪೋಷಕರು ಶಾಕ್‌ಗೊಳಗಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ.
Bengaluru: ಪೀಣ್ಯ ಫ್ಲೈಓವರ್ ಮೇಲೆ ಭೀಕರ ಅಪಘಾತ: ಇಬ್ಬರಿಗೆ ಗಂಭೀರ ಗಾಯ
ಅಪಘಾತದ ನಂತರ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು, ಬಾಲಕನ ಪರಿಸ್ಥಿತಿ ನೋಡಿ ಆಕ್ರೋಶಗೊಂಡಿದ್ದಾರೆ. ಮರಳು ಟಿಪ್ಪರ್‌ಗಳ ಮೇಲೆ ಕಲ್ಲುತೂರಾಟ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಇಷ್ಟಕ್ಕೂ ಉದ್ರೀಕ್ತರ ಕೋಪ ತಣ್ಣಗಾಗಿಲ್ಲ. ಬಾಲಕನ ಸಾವಿಗೆ ಕಾರಣವಾದ ಟಿಪ್ಪರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನ ಸಾವಿಗೆ ಕಾರಣವಾದ ಟಿಪ್ಪರ್ ಬಹುತೇಕ ಸುಟ್ಟು ಕರಕಲಾಗಿದೆ. ಮರಳು ಟಿಪ್ಪರ್‌ಗಳ ವೇಗದ ಬಗ್ಗೆ ಸಾರ್ವಜನಿಕರು ಪೊಲೀಸರ ಮುಂದೆಯೂ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದರು.
ಕಸದ ಲಾರಿಗೆ ಬಲಿಯಾದ ಬಾಲಕಿ ಕುಟುಂಬದಿಂದ ಪರಿಹಾರ ತಿರಸ್ಕಾರ
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳದವರು ಹೊತ್ತಿ ಉರಿಯುತ್ತಿದ್ದ ಟಿಪ್ಪರ್‌ನ ಬೆಂಕಿ ನಂದಿಸಿದರಾದರೂ ಟಿಪ್ಪರ್ ಬಹುತೇಕ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಉದ್ರೀಕ್ತರನ್ನು ಚದುರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲದೇ ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಈ ಕುರಿತು ಕಲಬುರಗಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.