* ಬೆಳಗಾವಿಯಲ್ಲಿ ತಲೆಮರೆಸಿಕೊಂಡಿದ್ದ ಕಾರ್ಪೋರೆಟರ್
* ಜಯಲಕ್ಷ್ಮೀ ಅಸ್ವಸ್ಥ, ಕಿಮ್ಸ್‌ಗೆ ದಾಖಲು
* ಪಾಲಿಕೆ ಸಾಮಾನ್ಯ ಸಭೆಗೂ ಸದಸ್ಯ ಗೈರಾಗಿದ್ದ ಚೇತನ್
ಹುಬ್ಬಳ್ಳಿ(ಜು.03): ನವವಿವಾಹಿತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಬಂಧಿತ ಮಹಿಳೆ ಅಸ್ವಸ್ಥಳಾಗಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ.
ಚೇತನ್ ಸೇರಿದಂತೆ ಪಾಲಿಕೆ ಮಾಜಿ ಸದಸ್ಯ ಶಿವು ಹಿರೇಕೆರೂರ, ಜಯಲಕ್ಷ್ಮೀ ಹಿರೇಕೆರೂರ ಬಂಧಿತರು. ಬಂಧನ ಭೀತಿಯಲ್ಲಿ ಚೇತನ್ ತಲೆಮರೆಸಿಕೊಂಡು ಬೆಳಗಾವಿಯ ಹಿರೇಬಾಗೆವಾಡಿಗೆ ತೆರಳಿದ್ದ ಎನ್ನಲಾಗಿದ್ದು, ಆತನನ್ನು ಶುಕ್ರವಾರ ರಾತ್ರಿ ಪತ್ತೆ ಮಾಡಿದ ಪೊಲೀಸರು ಕರೆದು ತಂದಿದ್ದಾರೆ.
undefined
ಶನಿವಾರ ಇಲ್ಲಿನ ಸಿಎಆರ್ ಮೈದಾನ ಹಾಗೂ ಉಪನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸದ್ಯ ಆರೋಪಿಗೆ ನ್ಯಾಯಾಂಗ ಬಂಧನವಾಗಿದೆ. ಆರೋಪಿ ಜಯಲಕ್ಷ್ಮೇ ಅವರಿಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆ ಹೆಚ್ಚಾದ ಕಾರಣ ನಿತ್ರಾಣಗೊಂಡರು ಎಂದು ಮೂಲಗಳು ತಿಳಿಸಿವೆ. ಕಿಮ್ಸ್‌ನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಕಿಡ್ನಾಪ್: ಹುಬ್ಬಳ್ಳಿ-ಧಾರವಾಡ ಪಾಲಿಕೆ ಸದಸ್ಯ ಚೇತನ ವಶಕ್ಕೆ ಪಡೆದಿದ್ದಕ್ಕೆ ಹೈಡ್ರಾಮಾ..!
ಘಟನೆ ಹಿನ್ನೆಲೆ:
ತನ್ನ ಪತ್ನಿ ಸಹನಾಳನ್ನು ಆಕೆಯ ತಂದೆ ಶಿವು ಹಿರೇಕೆರೂರ, ತಾಯಿ ಜಯಲಕ್ಷ್ಮೇ ಹಾಗೂ ಅವಳ ಸಹೋದರ ಸಂಬಂಧಿ ಆಗಿರುವ ಪಾಲಿಕೆ ಸದಸ್ಯ ಚೇತನ್ ಅಪಹರಿಸಿದ್ದಾರೆ ಎಂದು ನಿಖಿಲ್ ದಾಂಡೇಲಿ ಗೋಕುಲ ಠಾಣೆಯಲ್ಲಿ ಜೂ. 24ರಂದು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸಹನಾ ಅವರನ್ನು ಗೋವಾದಲ್ಲಿ ಪತ್ತೆ ಮಾಡಿ ಹುಬ್ಬಳ್ಳಿಗೆ ಕರೆತಂದಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಅಪಹರಣ ಪ್ರಕರಣದಲ್ಲಿ ಅಪ್ಪ-ಅಮ್ಮನ ಪಾತ್ರವಿಲ್ಲ, ಚೇತನ ಹಿರೇಕೆರೂರ ಹಾಗೂ ಆತನ ಕಡೆಯವರು ಅಪಹರಣಕ್ಕೆ ಕಾರಣ ಎಂದು ಸಹನಾ ತಿಳಿಸಿದ್ದರು. ಜತೆಗೆ ಕಾರ್ಪೊರೇಟರ್ ಆಗಿರುವ ಕಾರಣಕ್ಕೆ ಚೇತನನ್ನು ಪೊಲೀಸರು ಬಂಧಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದರು.
ಈ ನಡುವೆ ಚೇತನ್‌ನನ್ನು ಗೋಕುಲ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಿಟ್ಟಿದ್ದರು. ಅದಾದ ಬಳಿಕ ಆತ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ. ಈಚೆಗೆ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೂ ಸದಸ್ಯ ಚೇತನ್ ಗೈರಾಗಿದ್ದ.