* 2013ರಲ್ಲಿ ಚೂರಿ ಇರಿದು ಪ್ರಾಧ್ಯಾಪಕಿ ಕೊಲೆ
* ಆರೋಪಿಗೆ ಶಿಕ್ಷೆಯೊಂದಿಗೆ 55 ಸಾವಿರ ದಂಡ
* ಪತ್ನಿ ಸುಂದರವಾಗಿಲ್ಲ, ದಪ್ಪವಾಗಿದ್ದಾಳೆ ಎಂಬ ಕಾರಣ ಹೇಳಿ ವಿಚ್ಛೇದನಕ್ಕಾಗಿ ಬಲವಂತ ಮಾಡುತ್ತಿದ್ದ ಗಂಡ
ಹುಬ್ಬಳ್ಳಿ(ಜು.03): ಪತ್ನಿ ಸುಂದರವಾಗಿಲ್ಲ, ದಪ್ಪವಾಗಿದ್ದಾಳೆ ಎಂಬ ಕಾರಣಕ್ಕೆ 9 ವರ್ಷದ ಹಿಂದೆ ಚೂರಿ ಇರಿದು ಕೊಲೆ ಮಾಡಿದ್ದ ಪ್ರಾಧ್ಯಾಪಕನಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ . 55 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ನಿವಾಸಿ ಉದಯಕುಮಾರ ಕಾಂಬಳೆ ಶಿಕ್ಷೆಗೆ ಒಳಗಾದವರು. ಪತ್ನಿ ಶ್ರೀಸಿಮಾ ಬಾವಿತಾಳ ಎಂಬುವವರನ್ನು ಈತ ಚೂರಿ ಇರಿದು ಹತ್ಯೆ ಮಾಡಿದ್ದ. ಶನಿವಾರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ತೀರ್ಪು ಪ್ರಕಟಿಸಿದ್ದಾರೆ.
ಮೋಸ ಮಾಡಿ ಮದುವೆ ಆದವಳ ಕೊಂದವನ ಜೀವಾವಧಿ ಶಿಕ್ಷೆ ರದ್ದು
ಆಗಿದ್ದೇನು?
ಉದಯಕುಮಾರ ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ ಮಾಡುವ ವೇಳೆ ಶ್ರೀಸಿಮಾ ಎಂಬುವರನ್ನು ಪ್ರೀತಿಸಿದ್ದ. ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದ. ಬಳಿಕ ಹುಬ್ಬಳ್ಳಿಯ ಶಿವಗಿರಿಯಲ್ಲಿ ವಕೀಲ ಅನಿಲಕುಮಾರ ಯಾವಗಲ್ ಅವರ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಉದಯಕುಮಾರ ನಗರದ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಮತ್ತು ಶ್ರೀಸಿಮಾ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.
ಮದುವೆಯಾಗಿ ಮೂರು ತಿಂಗಳ ಬಳಿಕ ಪತ್ನಿ ತನಗೆ ಹೊಂದಾಣಿಕೆ ಆಗುತ್ತಿಲ್ಲ. ಸುಂದರವಾಗಿಲ್ಲ, ದಪ್ಪವಾಗಿದ್ದಾಳೆ ಎಂಬ ಕಾರಣ ಹೇಳಿ ವಿಚ್ಛೇದನಕ್ಕಾಗಿ ಬಲವಂತ ಮಾಡುತ್ತಿದ್ದ. ಹೀಗಾಗಿ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿತ್ತು. ಇದೇ ವಿಚಾರಕ್ಕೆ 2013 ಏ. 18ರಂದು ಬೆಳಿಗ್ಗೆ ಇಬ್ಬರ ನಡುವೆ ಹೆಚ್ಚಿನ ಗಲಾಟೆಯಾಗಿದೆ. ಆರೋಪಿ ಉದಯಕುಮಾರ ಪತ್ನಿಯನ್ನು ಚಾಕುವಿನಿಂದ ಇರಿದು ಬಳಿಕ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ. ಸಂಶಯಗೊಂಡ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡುವಷ್ಟರಲ್ಲಿ ಶ್ರೀಸಿಮಾ ಮೃತಪಟ್ಟಿದ್ದರು.
ಸಾಕ್ಷ್ಯ ಇಲ್ಲದಿದ್ರೂ ಕೊಲೆ ಕೇಸಲ್ಲಿ 13 ವರ್ಷ ಜೈಲಲ್ಲಿದ್ದವನಿಗೆ ಬಿಡುಗಡೆ ಭಾಗ್ಯ
ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾನಗರದ ಠಾಣಾಧಿಕಾರಿ ಗಿರೀಶ ರೂಢಕರ ತನಿಖೆ ಕೈಗೊಂಡಿದ್ದರು. ಸಿಸಿ ಕ್ಯಾಮೆರಾ ಚಿತ್ರಾವಳಿ ಆಧಾರದ ಮೇಲೆ ಸಾಕ್ಷ್ಯ ಲಭಿಸಿತ್ತು. ಕೊಲೆಗೈದ ಬಳಿಕ ಆರೋಪಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಇಲ್ಲಿಂದಲೆ ಆತನಿಗೆ ನೋಟಿಸ್ ಕಳಿಸಲಾಗಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎನಿಸಿದಾಗ ಮೂರು ವರ್ಷದ ಬಳಿಕ 2016ರಲ್ಲಿ ಉದಯಕುಮಾರ ಸ್ವತಃ ತಾನೇ ಬಂದು ನ್ಯಾಯಾಲಯಕ್ಕೆ ಶರಣಾಗಿದ್ದ.
ಅಲ್ಲಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ. 55 ಸಾವಿರ ದಂಡದಲ್ಲಿ ಮೃತ ಮಹಿಳೆ ತಂದೆಗೆ 50 ಸಾವಿರ ಹಾಗೂ 5 ಸಾವಿರ ರಾಜ್ಯ ಸರ್ಕಾರಕ್ಕೆ ನೀಡಲು ಕೋರ್ಟ್ ತಿಳಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.