ಉದ್ಯಮಿ ಕಾರಿಗೆ ಬೆಂಕಿ: ದಿ.ಮುತ್ತಪ್ಪ ರೈ ಪರ ವಕೀಲರು ಸೇರಿ ಮೂವರ ಸೆರೆ

By Kannadaprabha NewsFirst Published Oct 28, 2021, 9:53 AM IST
Highlights

*  ಹಣಕಾಸಿನ ವಿಷಯಕ್ಕೆ ಮನಸ್ತಾಪ ಹಿನ್ನೆಲೆಯಲ್ಲಿ ಕೃತ್ಯ
*  ಮುಖ್ಯ ಆರೋಪಿ ನಾಪತ್ತೆ
*  ಹಲವು ವರ್ಷಗಳಿಂದ ಮುತ್ತಪ್ಪ ರೈ ಜತೆ ಭೂ ವ್ಯವಹಾರ ನಡೆಸಿದ್ದ ಶ್ರೀನಿವಾಸ್‌ ನಾಯ್ಡು
 

ಬೆಂಗಳೂರು(ಅ.28):  ಇತ್ತೀಚೆಗೆ ರಿಯಲ್‌ ಎಸ್ಟೇಟ್‌(Real Estate) ಉದ್ಯಮಿ ಶ್ರೀನಿವಾಸ್‌ ನಾಯ್ಡು ಅವರ ರೇಂಜ್‌ ರೋವರ್‌ ಕಾರಿಗೆ ಬೆಂಕಿ(Fire) ಹಚ್ಚಿದ ಪ್ರಕರಣ ಸಂಬಂಧ ಮಾಜಿ ಭೂಗತ ದೊರೆ ದಿ.ಮುತ್ತಪ್ಪ ರೈ(Muttappa Rai) ಪರ ವಕೀಲರ ತಂಡದ ಮೂವರು ವಕೀಲರು ಸೇರಿದಂತೆ ಐವರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಕೀಲರಾದ(Advocate) ಜೆ.ಪಿ.ನಗರದ ಅಭಿನಂದನ್‌, ಶಶಾಂಕ್‌, ನಿರ್ಮಲ್‌, ವಕೀಲರ ಕಚೇರಿ ಸಹಾಯಕ ರಾಕೇಶ್‌ ಹಾಗೂ ಕಾರು ಚಾಲಕ ಗಣೇಶ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ಬುಲೆಟ್‌ ಜಪ್ತಿ ಮಾಡಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಮುತ್ತಪ್ಪ ರೈ ಅವರ ವಕೀಲ ನಾರಾಯಣಸ್ವಾಮಿ ಪತ್ತೆಗೆ ತನಿಖೆ ನಡೆದಿದೆ.

ಹಲವು ವರ್ಷಗಳಿಂದ ಮುತ್ತಪ್ಪ ರೈ ಅವರಿಗೆ ಸಂಬಂಧಿಸಿದ ನ್ಯಾಯಾಲಯಗಳಲ್ಲಿ(Court) ಪ್ರಕರಣಗಳನ್ನು ವಕೀಲ ನಾರಾಯಣಸ್ವಾಮಿ ನಿರ್ವಹಿಸುತ್ತಿದ್ದರು. ರೈ ನಿಧನ(Death) ಬಳಿಕವು ಸಹ ಅವರ ಪುತ್ರನಿಗೆ ನಾರಾಯಣಸ್ವಾಮಿ ಕಾನೂನು ಸಲಹೆಗಾರರಾಗಿದ್ದಾರೆ. ಅದೇ ರೀತಿ ರೈ ಕುಟುಂಬದ ಜತೆ ಶ್ರೀನಿವಾಸ್‌ ನಾಯ್ಡು ವ್ಯವಹಾರ ಸಂಬಂಧ ಹೊಂದಿದ್ದಾರೆ. ಇತ್ತೀಚೆಗೆ ವೈಯಕ್ತಿಕ ವಿಚಾರವಾಗಿ ನಾಯ್ಡು ಮತ್ತು ನಾರಾಯಣಸ್ವಾಮಿ ಮಧ್ಯೆ ಮನಸ್ತಾಪವಾಗಿತ್ತು. ಇದರಿಂದ ಕೋಪಗೊಂಡ ಅವರು, ತಮ್ಮ ಕಿರಿಯ ವಕೀಲರು, ಕಚೇರಿ ಸಹಾಯಕ ಹಾಗೂ ಕಾರು ಚಾಲಕನ ಮೂಲಕ ನಾಯ್ಡು ಅವರ ಕಾರಿಗೆ ಬೆಂಕಿ ಹಚ್ಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್ಸ್‌ ದಂಧೆ: ಪಂಚಭಾಷಾ ನಟಿ ಜತೆ ಮುತ್ತಪ್ಪ ರೈ ಪುತ್ರ ರಿಕ್ಕಿಗೆ ನಂಟು?

ಸದಾಶಿವನಗರದ ಸಪ್ತಗಿರಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಶ್ರೀನಿವಾಸ್‌ ನಾಯ್ಡು ಅವರ ಕಾರಿಗೆ ಅ.19ರಂದು ರಾತ್ರಿ 9.30ರ ಸುಮಾರಿಗೆ ಅವರ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು(Miscreants) ಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರೈ ಪುತ್ರನ ಕೈವಾಡ ಶಂಕೆ?

ಹಲವು ವರ್ಷಗಳಿಂದ ಮುತ್ತಪ್ಪ ರೈ ಜತೆ ಶ್ರೀನಿವಾಸ್‌ ನಾಯ್ಡು ಭೂ ವ್ಯವಹಾರ ನಡೆಸಿದ್ದರು. ಇತ್ತೀಚೆಗೆ ಹಣಕಾಸು(Finance) ವಿಚಾರವಾಗಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಜತೆ ನಾಯ್ಡು ಅವರಿಗೆ ಭಿನ್ನಾಭಿಪ್ರಾಯ ಮೂಡಿತ್ತು. ಈ ಹಿನ್ನೆಲೆಯಲ್ಲಿ ನಾಯ್ಡು ಅವರ ಕಾರಿಗೆ ಬೆಂಕಿ ಹಚ್ಚಿಸಿ ರೈ ಬೆದರಿಸಿರಬಹುದು ಎಂದು ಪೊಲೀಸರು(Police) ಶಂಕಿಸಿದ್ದಾರೆ.

ರಿಕ್ಕಿ ರೈ ಜತೆ ಮನಸ್ತಾಪದ ಬಗ್ಗೆ ದೂರುದಾರ ನಾಯ್ಡು ಯಾವುದೇ ಮಾಹಿತಿ ನೀಡುತ್ತಿಲ್ಲ. ಅಲ್ಲದೆ ಕೃತ್ಯದಲ್ಲಿ ರೈ ಪುತ್ರ ವಿರುದ್ಧ ಅವರು ಆರೋಪ ಮಾಡಿಲ್ಲ. ಹೀಗಾಗಿ ಕೃತ್ಯದಲ್ಲಿ ರಿಕ್ಕಿ ಪಾತ್ರ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಈ ಹಂತದಲ್ಲಿ ಹೇಳಲಾಗುವುದಿಲ್ಲ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!