Cyber Crime: ಮೈಸೂರಿನಲ್ಲೊಬ್ಬ ಕೆಲಸ ಪಡೆಯುವ ಆಸೆಯಲ್ಲಿ ಬರೋಬ್ಬರಿ 49 ಲಕ್ಷ ಕಳೆದುಕೊಂಡಿದ್ದು, ಹಣ ಪೀಕಿದ್ದ ಆಸಾಮಿಗಳ ಹೆಡೆಮುರಿ ಕಟ್ಟಲಾಗಿದೆ.
ವರದಿ: ಮಧುಸೂದನ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮೈಸೂರು
ಮೈಸೂರು (ಜು. 08): ಅದೇನು ಸರ್ಕಾರಿ ಕೆಲಸವೂ ಆಗಿರಲಿಲ್ಲ. ವರ್ಷಕ್ಕೆ ಕೋಟಿ ಸಂಪಾದನೆ ಮಾಡುವ ಜಾಗವೂ ಅಲ್ಲ. ತಕ್ಕಮಟ್ಟಗಿನ ಕೆಲಸ ತೆಗೆದುಕೊಳ್ಳಲು ಹಾಕಿದ್ದ ಅರ್ಜಿ ಅದು. ಸರಿಯಾದ ವೆಬ್‌ಸೈಟ್‌ಗೇ ಅರ್ಜಿ ಹಾಕಿದ್ರೂ ಆತನಿಗೆ ಮೋಸ ಆಗಿತ್ತು. ಅದು ಒಂದೆರಡು ಅಲ್ಲ, ಸರಿ ಸುಮಾರು ಅರ್ಧ ಕೋಟಿ ಹಣ ಸುಲಿಗೆ ಆಗಿತ್ತು. ಅದೇನೆ ಆದ್ರು ಉಪ್ಪು ತಿಂದವನು ನೀರು ಕುಡಿಲೇ ಬೇಕಲ್ವ. ಕಳ್ಳರ ಹೆಡೆಮುರಿ ಕಟ್ಟಲಾಗಿದೆ. ಆದರೆ ಆನ್‌ಲೈನ್ ದೋಖಾದ ಕಹಾನಿಯೇ ರೋಚಕವಾಗಿದೆ.
ಕೆಲಸಕ್ಕೆಂದು ಆನ್‌ಲೈನ್ ಸರ್ಚ್ ಮಾಡೋ ಮುನ್ನ ಹುಷಾರ್!: ಕೆಲಸ ಕೊಡಿಸುವ ನೆಪದಲ್ಲಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ ಜಾಲ ಪತ್ತೆಯಾಗಿದೆ. ಮೈಸೂರಿನಲ್ಲೊಬ್ಬ ಕೆಲಸ ಪಡೆಯುವ ಆಸೆಯಲ್ಲಿ ಬರೋಬ್ಬರಿ 49 ಲಕ್ಷ ಕಳೆದುಕೊಂಡಿದ್ದು, ಹಣ ಪೀಕಿದ್ದ ಆಸಾಮಿಗಳ ಹೆಡೆಮುರಿ ಕಟ್ಟಲಾಗಿದೆ. ದೇಶವ್ಯಾಪಿ ಆನ್‌ಲೈನ್ ದೋಖಾ ಮಾಡುತ್ತಿದ್ದ 3 ಆರೋಪಿಗಳನ್ನು ಮೈಸೂರಿನ ಸೈಬರ್ ಪೊಲೀಸರು (Cyber Police) ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಹಣವನ್ನೂ ಕಕ್ಕಿಸಲಾಗುತ್ತಿದೆ.
ಪ್ರಕರಣ ಏನು?: ಮೈಸೂರು ಜಿಲ್ಲಾ ಸಿ.ಇ.ಎನ್ ಕೈಂ ಪೊಲೀಸ್ ಠಾಣೆಗೆ ದಿನಾಂಕ 29.06.2022 ರಂದು ಮೈಸೂರು ಮೂಲಕ ವ್ಯಕ್ತಿಯೊಬ್ಬ ತಾನು ಆನ್‌ಲೈನ್ ವೆಬ್‌ಸೈಟ್‌ನಿಂದ (Online Website) ಮೋಸ ಹೋಗಿದ್ದಾಗಿ ದೂರು ನೀಡಿದ್ದ. ಆತ ನೀಡಿದ ದೂರಿನ ಸಾರಾಂಶ ಈ ರೀತಿ ಇದೆ.
ಆತ ಕರೋನದಿಂದಾಗಿ ಕೆಲಸ ಕಳೆದುಕೊಂಡಿದ್ದು, ಬೇರೆ ಕೆಲಸ ಪಡೆಯುವ ಸಲುವಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಎಮಿನೆಂಟ್ ಮೈಂಡ್ ಎಂಬ ಕಂಪನಿಯ ವೆಬ್ ಸೈಟ್ ಬಗ್ಗೆ ತಿಳಿದುಕೊಂಡ. ಅಲ್ಲಿರುವ ಮಾಹಿತಿ ಮೇರೆಗೆ ಕೆಲಸಕ್ಕೆ ಅರ್ಜಿ ಹಾಕಿದ. ಆತ ಅವರು ನೀಡಿದ ಮಾಹಿತಿಯಿಂದ 05.11.2020 ರಿಂದ ದಿನಾಂಕ 04.04.2022 ರವರೆಗೆ 48,80,200/- ರೂ ಹಣವನ್ನು ಎಮಿನೆಂಟ್ ಮೈಂಡ್ ವಿ ಸೋರ್ಸ್ ಹಾಗೂ ವಿವಿಧ ಖಾತೆಗಳಿಗೆ ಕಳುಹಿಸಿದ್ದಾನೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!
ಆದರೆ ಸದರಿ ಕಂಪನಿಯು ಯಾವುದೇ ಕೆಲಸ ಕೊಡಿಸದೇ ಇದ್ದಾಗ ಹಣವನ್ನು ವಾಪಸ್ಸು ಕೊಡುವಂತೆ ಕೇಳಿದಾಗ, ಕಂಪನಿಯು ಹಣವನ್ನು ವಾಪಸ್ಸು ಕೊಡುವುದಾಗಿ ಹೇಳಿ, ಇಲ್ಲಿಯವರೆಗೂ ಕೊಡದೆ ಇದ್ದುದರಿಂದ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಆಗ ಮೈಸೂರು ಜಿಲ್ಲಾ ಸಿ.ಇ.ಎನ್
ಕೈಂ ಪೊಲೀಸರಿಗೆ ದೂರು ನೀಡಿದ್ದಾನೆ.
ದೂರಿನ ಆದಾರದಲ್ಲಿ ಸೈಬರ್ ಠಾಣೆ ಪೊಲೀಸರು ಕಲಂ 66(ಸಿ), 66(ಬಿ) ಐ.ಟಿ. ಕಾಯಿದೆ ಮತ್ತು 420 ಐ.ಪಿ.ಸಿ. ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಬೆಂಗಳೂರು ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಒಂದು ಸಾವಿರದಿಂದ ಆರಂಭವಾದ ಸುಲಿಗೆ ಅರ್ಧ ಕೋಟಿಗೆ ಮುಟ್ಟಿದ್ದೇ ರೋಚಕ: ಆರೋಪಿಗಳೆಲ್ಲ ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಹಾಗೂ ಪಿಯುಸಿ ಮಾಡಿದವರು. ಒಂದಷ್ಟು ಕಂಪ್ಯೂಟರ್ ಜ್ಞಾನ ಇಟ್ಟುಕೊಂಡು ವೆಬ್‌ಸೈಟ್ ಸರ್ಚ್ ಮಾಡುವ ಇವರು ಅಲ್ಲಿ ಸಿಗುವ ಮಾಹಿತಿಗಳಿಂದ ಜನರನ್ನ ವಂಚಿಸುತ್ತಾ ಬಂದಿದ್ದಾರೆ.
ಈ ಪ್ರಕರಣದಲ್ಲೂ ಮೈಸೂರು ಮೂಲದ ವ್ಯಕ್ತಿ ಕೆಲಸಕ್ಕೆ ಅರ್ಜಿ ಹಾಕಿದ್ದಾಗ ಆತನ ಮೊಬೈಲ್ ನಂಬರ್ ಹಾಗೂ ಖಾಸಗಿ ಮಾಹಿತಿ ಪಡೆದುಕೊಂಡಿದ್ದಾರೆ. ಮೊದಲು ಅರ್ಜಿ ಹಾಕಲು 1 ಸಾವಿರ ಕಟ್ಟಿಸಿಕೊಂಡ ಆಸಾಮಿಗಳು ನಂತರ ಇಂಟರ್ವ್ಯೂ ಅಟೆಂಡ್ ಮಾಡಲು 25 ಸಾವಿರ ಕಟ್ಟಿಸಿದ್ದಾರೆ.
ಇದನ್ನೂ ಓದಿ: 'ಅಶ್ಲೀಲ ವಿಡಿಯೋ ಡಿಲೀಟ್ ಮಾಡ್ತೀವಿ, ₹50 ಸಾವಿರ ಕೊಡಿ ': ಸಿಬಿಐ ಹೆಸರಲ್ಲಿ ವಂಚನೆಗೆ ಯತ್ನ
ಒಂದು ಬಾರಿ ಇಂಟರ್ವ್ಯೂ ಅಟೆಂಡ್ ಮಾಡದೇ ಹೋದರೆ ಮತ್ತೆ ಹಣ ಕಟ್ಟಬೇಕು ಎಂದು ಕಟ್ಟಿಸಿದ್ದಾರೆ. ಇದೇ ರೀತಿ ವರ್ಷದಿಂದ ಪದೇ ಪದೇ ದುಡ್ಡು ಕಟ್ಟಿಸಿ ಬರೋಬ್ಬರಿ 48,80,200 ರೂಪಾಯಿ ಪೀಕಿದ್ದಾರೆ.
ಸ್ವಲ್ಪ ಹಣ ಕಟ್ಟಿ ಕೆಲಸ ಸಿಕ್ಕದಿದ್ದಾಗ ತನ್ನ ಹಣ ವಾಪಸ್ ಕೊಡಬೇಕೆಂದು ಸಂತ್ರಸ್ತ ಕೇಳಿದಾಗ ಆ ಹಣ ವಾಪಸ್ ಕೊಡಲು ಟ್ಯಾಕ್ಸ್ ರೂಪದಲ್ಲಿ ಮತ್ತೆ ಹಣ ಸುಲಿದಿದ್ದಾರೆ ಈ ಖದೀಮರು. ಕೊನೆಗೆ ದಾರಿ ಕಾಣದ ಈತ ಪೊಲೀಸರ ಬಳಿ ದೂರು ನೀಡಿದ್ದಾನೆ
ಆರೋಪಿಗಳು ಅರೆಸ್ಟ್: ಪ್ರಕರಣದ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕ ಆರ್.ಚೇತನ್ ಸೂಚನೆಯಂತೆ ಸೈಬರ್ ಠಾಣೆ ಇನ್ಸ್‌ಪೆಕ್ಟರ್ ಶಬೀರ್ ಹುಸೇನ್ ನೇತೃತ್ವದ ತಂಡ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ, ನಾಲ್ಕು ಜನ ಆರೋಪಿಗಳ ಪೈಕಿ ಮೂರು ಜನ ಆರೋಪಿಗಳನ್ನು ದಿನಾಂಕ 05.07.2022 ರಂದು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 7 ಸ್ಯಾಮ್ ಸಂಗ್ ಕೀಪ್ಯಾಡ್ ಮೊಬೈಲ್‌ಗಳು, 4 ಸ್ಮಾರ್ಟ್ ಮೊಬೈಲ್‌ಗಳು, 11 ಸಿಮ್ ಕಾರ್ಡ್‌ಗಳು, 2 ಲ್ಯಾಪ್‌ಟ್ಯಾಪ್‌ಗಳು, 3 ಕಛೇರಿಯ ಸೀಲುಗಳು ಹಾಗೂ 24 ಲಕ್ಷ ರೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Online ವಂಚನೆ, Virtual ಜಗತ್ತಿನ ಬಣ್ಣದ ಮಾತಿಗೆ ಮರಳಾಗೋ ಮುನ್ನ ಇರಲಿ ಎಚ್ಚರ!
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಮುಖ ಆರೋಪಿ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗಳಿಗೆ ಪ್ರಶಂಸಿಸಿ, ಬಹುಮಾನ ಘೋಷಿಸಲಾಗಿದೆ.
ಇಡೀ ಪ್ರಕರಣದಲ್ಲಿ ಆರೋಪಿಗಳು ದೇಶಾದ್ಯಂತ ಇನ್ನೂ ಹಲವರಿಗೆ ಮೋಸ ಮಾಡಿರೋದು ಗೊತ್ತಾಗಿ ತನಿಖೆ ಮುಂದುವರಿದಿದೆ. ಇತ್ತ ಮೈಸೂರಿನ ವ್ಯಕ್ತಿ ಕೂಡ ಕೆಲಸಕ್ಕಾಗಿ ಆನ್‌ಲೈನ್ ವೆಬ್‌ಸೈಟ್ ನಂಬಿಕೊಂಡು ಕೈಲಿದ್ದ ಹಣ, ಅಮ್ಮನ ಒಡವೆಗಳು, ಕ್ರೆಡಿಟ್ ಕಾರ್ಡ್ ದುಡ್ಡು ಎಲ್ಲವನ್ನೂ ಕಳೆದುಕೊಂಡು ಸಾಲ ಮಾಡಿಕೊಂಡಿದ್ದಾನೆ.