
ಬೆಂಗಳೂರು (ಏಪ್ರಿಲ್ 9, 2023): ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ಗೆ ಬೆದರಿಕೆ ಪ್ರಕರಣ ಸಂಬಂಧ ಸಿಸಿಬಿ ತನ್ನ ತನಿಖೆ ಮುಂದುವರಿಸಿದ್ದು, ಕೇಸ್‌ನಲ್ಲಿ ಒಂದೊಂದೇ ಸುಳಿವುಗಳು ದೊರೆಯುತ್ತಿವೆ. ನಟ ಸುದೀಪ್‌ಗೆ ಬೆದರಿಕೆ ಪತ್ರ ನೀಡಲು ಸ್ವಿಫ್ಟ್ ಕಾರು ಬಳಕೆ ಮಾಡಲಾಗಿದೆ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಕಾರಿನ ನಂಬರ್ ಪ್ಲೇಟ್ ಅನ್ನು ದುಷ್ಕರ್ಮಿಗಳು ಬದಲಿಸಿದ್ದಾರೆ ಎಂದೂ ತಿಳಿದುಬಂದಿದೆ.
ಬೆಂಗಳೂರಿನ ದೊಮ್ಮಲೂರು ಪೋಸ್ಟ್ ಆಫೀಸ್‌ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬಂದು ಪೋಸ್ಟ್ ಬಾಕ್ಸ್‌ಗೆ ಪತ್ರ ಹಾಕಲಾಗಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ: ಸಿಸಿಬಿಗೆ ಸಿಕ್ಕಿದೆ ಪ್ರಮುಖ ಸುಳಿವು..!
ಆದರೆ, ಸಿಸಿ ಕ್ಯಾಮೆರಾ ದೃಶ್ಯವನ್ನು ಆಧರಿಸಿ ತನಿಖೆ ನಡೆಸಲು ಹೋದ ಸಿಸಿಬಿ ಪೊಲೀಸರಿಗೆ ಶಾಕ್ ಕಾದಿದೆ. ಏಕೆಂದರೆ, ಸ್ವಿಫ್ಟ್ ಕಾರು ಬೆಂಗಳೂರಿನ ಕೆಂಗೇರಿ ಬಳಿಯ ವ್ಯಕ್ತಿಗೆ ಸೇರಿದೆ ಎಂಬುದು ಪತ್ತೆಯಾಗಿದೆ. ಆದರೆ, ಆ ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತನಿಗೂ ಪತ್ರಕ್ಕೂ ಸಂಬಂಧವಿಲ್ಲ ಅನ್ನೋದು ಪತ್ತೆಯಾಗಿದೆ.
ಈ ಹಿನ್ನೆಲೆ ಆರೋಪಿಗಳು ಸ್ವಿಫ್ಟ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ನಟ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪೋಸ್ಟ್ ಮಾಡಲು ಬಳಸಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಸದ್ಯ, ಈ ಸುಳಿವು ದೊರೆತಿದ್ದು, ಆರೋಪಿಗಳು ಯಾರು ಎನ್ನುವುದು ಇನ್ನಷ್ಟೇ ಪತ್ತೆಯಾಗಬೇಕಿದೆ.
ಇದನ್ನು ಓದಿ: ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ
ನಟ ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಬೊಮ್ಮಾಯಿ ಅವರಿಗೆ ಹಾಗೂ ಸಿಎಂ ಹೇಳಿದ ಕಡೆ ಪ್ರಚಾರ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ, ಈ ಭೇಟಿ ನಡೆಯುವ ಮುನ್ನವೇ ನಟ ಸುದೀಪ್‌ಗೆ ಬೆದರಿಕೆ ಪತ್ರವನ್ನು ಕಳಿಸಲಾಗಿತ್ತು. ನಟ ಕಿಚ್ಚ ಸುದೀಪ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹರಡಿದ ಹಿನ್ನೆಲೆ ಈ ಬೆದರಿಕೆ ಪತ್ರ ಕಳಿಸಲಾಗಿದೆ.
ಇನ್ನೊಂದೆಡೆ, ಈ ಬೆದರಿಕೆ ಪತ್ರದ ಬಗ್ಗೆ ಮಾತನಾಡಿದ್ದ ನಟ ಕಿಚ್ಚ ಸುದೀಪ್, ಚಿತ್ರರಂಗದವರಿಂದಲೇ ಈ ರೀತಿ ಬೆದರಿಕೆ ಪತ್ರ ಬಂದಿದೆ. ಅವರು ಯಾರು ಎನ್ನುವುದೂ ನನಗೆ ಗೊತ್ತಿದೆ ಎಂದು ಹೇಳಿಕೆ ನೀಡಿದ್ದರು. ಹಾಗೂ, ನಟನ ಬಳಿಯಿದ್ದ ಮಾಜಿ ಕಾರು ಚಾಲಕ ಇತರರೆ ನೆರವು ಬಳಸಿಕೊಂಡು ಈ ಕೃತ್ಯ ನಡೆಸಿರಬಹುದು ಎಂಬ ಶಂಕೆಯೂ ಪೊಲೀಸರಿಗೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಮಾಡ್ತೀವಿ; ರಾಜಕೀಯಕ್ಕೆ ಕಾಲಿಡುವ ಮುನ್ನ ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ