ಸಚಿವ ಜೈನ್‌ಗೆ ಜೈಲಲ್ಲಿ ಮಸಾಜ್‌ ಮಾಡಿದ್ದು ರೇಪ್‌ ಆರೋಪಿ!

By Kannadaprabha NewsFirst Published Nov 23, 2022, 1:03 AM IST
Highlights
  • ಸಚಿವ ಜೈನ್‌ಗೆ ಜೈಲಲ್ಲಿ ಮಸಾಜ್‌ ಮಾಡಿದ್ದು ರೇಪ್‌ ಆರೋಪಿ!
  • 10 ವರ್ಷದ ಮಗಳ ರೇಪ್‌ ಮಾಡಿದವನಿಂದ ಮಸಾಜ್‌: ಮೂಲಗಳು
  • ಫಿಸಿಯೋಥೆರಪಿಸ್ಟ್‌ನಿಂದ ಮಸಾಜ್‌ ಎಂದಿದ್ದ ಆಪ್‌ಗೆ ಹಿನ್ನಡೆ
  • ಜೈನ್‌ ವಜಾ ಮಾಡಿ, ಕೇಜ್ರಿ ದೇಶದ ಜನರ ಕ್ಷಮೆ ಕೇಳಬೇಕು: ಬಿಜೆಪಿ

ನವದೆಹಲಿ (ನ.23): ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ತಿಹಾರ್‌ ಜೈಲ್ಲಿನಲ್ಲಿರುವ ಆಮ್‌ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‌ ಅವರಿಗೆ ಮಸಾಜ್‌ ಮಾಡಿದ್ದು ಫಿಸಿಯೋಥೆರಪಿಸ್ಟ್‌ ಅಲ್ಲ. ಬದಲಾಗಿ ತನ್ನ 10 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಆರೋಪದಲ್ಲಿ ಜೈಲು ಸೇರಿರುವ ರಿಂಕು ಎಂಬ ಕೈದಿ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಇದರೊಂದಿಗೆ ಬೆನ್ನುನೋವಿನಿಂದ ನರಳುತ್ತಿರುವ ಕಾರಣ ಜೈನ್‌ ಅವರು ಫಿಸಿಯೋಥೆರಪಿಸ್ಟ್‌ ನೆರವಿನಿಂದ ಮಸಾಜ್‌ ಮಾಡಿಸಿಕೊಂಡಿದ್ದರು ಎಂದಿದ್ದ ಆಪ್‌ಗೆ ಹಿನ್ನಡೆಯಾಗಿದೆ.. ಇದರ ಬೆನ್ನಲ್ಲೇ, ವೈರಲ್‌ ಆಗಿರುವ ವಿಡಿಯೋ ಘಟನೆ ಸಂಬಂಧ ಸಚಿವ ಜೈನ್‌ರನ್ನು ಸಂಪುಟದಿಂದ ವಜಾ ಮಾಡಬೇಕು ಮತ್ತು ಸುಳ್ಳು ಹೇಳಿದ್ದಕ್ಕಾಗಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

 

ದೆಹಲಿಯ ತಿಹಾರ್ ಜೈಲಿನಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್: ವಿಡಿಯೋ ವೈರಲ್..!

ಮಸಾಜ್‌ ಮಾಡಿದ್ದು ರೇಪ್‌ ಆರೋಪಿ- ಮೂಲಗಳು:

ಜೈಲಿನ ಕೋಣೆಯಲ್ಲಿ ಬೆಡ್‌ ಮೇಲೆ ಮಲಗಿಕೊಂಡಿರುವ ಜೈನ್‌ ತಲೆ, ಕಾಲು, ಬೆನ್ನಿಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ಸಿಸಿಟೀವಿ ವಿಡಿಯೋದ ದೃಶ್ಯವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಆಪ್‌ ನಾಯಕರು, ಜೈನ್‌ ಬೆನ್ನಿನ ಸಮಸ್ಯೆ ಹೊಂದಿರುವ ಕಾರಣ ಫಿಸಿಯೋಥೆರಪಿಸ್ಟ್‌ ನೆರವಿನಿಂದ ಮಸಾಜ್‌ ಮಾಡಿಸಿಕೊಂಡಿದ್ದಾರೆ ಎಂದು ಹೇಳಿತ್ತು. ಆದರೆ ಈ ವಾದವನ್ನು ಅಲ್ಲಗಳೆದಿರುವ ತಿಹಾರ್‌ ಜೈಲಿನ ಮೂಲಗಳು, ‘ವಾಸ್ತವವಾಗಿ ಮಸಾಜ್‌ ಮಾಡಿದ್ದು 10 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಬಂಧಿತ ರಿಂಕು ಎಂಬ ಕೈದಿ ’ಎಂದು ಹೇಳಿವೆ.

ಇಲ್ಲಸಲ್ಲದ ಆರೋಪ- ಆಪ್‌:

ಈ ವಿಷಯದಲ್ಲಿ ಪಕ್ಷದ ಬಣ್ಣ ಬಯಲಾದ ಬೆನ್ನಲ್ಲೇ ಮತ್ತೆ ಪ್ರತಿಕ್ರಿಯೆ ನೀಡಿರುವ ಆಪ್‌ ನಾಯಕ ಗೋಪಾಲ್‌ ರಾಯ್‌, ‘ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಪ್ರಸ್ತಾಪ ಮಾಡಲು ಏನೂ ವಿಷಯ ಇಲ್ಲದ ಕಾರಣ ಬಿಜೆಪಿ ಮನೀಶ್‌ ಸಿಸೋಡಿಯಾ ಮತ್ತು ಜೈನ್‌ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಹಿಂದೆ ಅಮಿತ್‌ ಶಾ ಕೂಡಾ ಗುಜರಾತ್‌ ಜೈಲಿನಲ್ಲಿದ್ದರು. ಅವರಿಗೆ ಸಿಕ್ಕಂತ ಆತಿಥ್ಯ ಯಾರಿಗೂ ಸಿಕ್ಕಿರಲಿಲ್ಲ. ಇದನ್ನು ಜೈಲಿನ ದಾಖಲೆಗಳೇ ಹೇಳುತ್ತವೆ. ಇಲ್ಲಿ ಜೈನ್‌ ಏನು ಟ್ರೀಟ್‌ಮೆಂಟ್‌ ತೆಗೆದುಕೊಂಡಿದ್ದಾರೆ ಎಂಬುದು ವಿಷಯವೇ ಅಲ್ಲ, ಇಲ್ಲಿರುವ ಅಸಲಿ ವಿಷಯ, ದೆಹಲಿ ಜನತೆ ಬಿಜೆಪಿ ನಾಯಕರಿಗೆ ಡಿ.4ರಂದು (ದಿಲ್ಲಿ ಪಾಲಿಕೆ ಚುನಾವಣಾ ಫಲಿತಾಂಶ ಪ್ರಕಟ) ಏನು ಟ್ರೀಟ್‌ಮೆಂಟ್‌ ನೀಡ್ತಾರೆ ಎಂಬುದಷ್ಟೇ’ ಎಂದು ಟಾಂಗ್‌ ನೀಡಿದ್ದಾರೆ.

ಜೈಲಲ್ಲಿ ಯಾವುದೇ ಸವಲತ್ತು ಇಲ್ಲ: ಆಪ್‌ ಸಚಿವ ಜೈನ್‌

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಆಪ್‌ ಸಚಿವ ಸತ್ಯೇಂದ್ರ ಜೈನ್‌ ಅವರಿಗೆ ತಿಹಾರ್‌ ಜೈಲಿನಲ್ಲೂ ವಿಐಪಿ ಸೌಲಭ್ಯ ಸಿಗುತ್ತಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಜೈನ್‌ ತಮಗೆ ನ್ಯಾಯಯುತ ವಿಚಾರಣೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಜೈಲಿನಲ್ಲಿ ಸುರಕ್ಷಿತವಾಗಿರಲು AAP ನಾಯಕ ಸತ್ಯೇಂದ್ರ ಜೈನ್‌ಗೆ 10 ಕೋಟಿ ನೀಡಿದ್ದೆ: ಸುಖೇಶ್‌ ಚಂದ್ರಶೇಖರ್‌

ಜೈನ್‌ ಇರುವ ವಿಡಿಯೋವನ್ನು ಕೋರ್ಟಿನ ಅನುಮತಿ ಪಡೆಯದೇ ಜಾರಿ ನಿರ್ದೇಶನಾಲಯ (ಇ.ಡಿ) ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿದ ಜೈನ್‌ ಪರ ವಕೀಲ, ‘ಜೈಲಿನಲ್ಲಿ ವಿಐಪಿ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಜೈನ್‌ ಅವರಿಗೆ ಜೈಲಿನಲ್ಲಿ ಸರಿಯಾದ ಆಹಾರ ಹಾಗೂ ವೈದ್ಯಕೀಯ ಚೆಕ್‌ಅಪ್‌ ಕೂಡಾ ಸಿಗುತ್ತಿಲ್ಲ. ಜೈಲಿನಲ್ಲಿದ್ದು ಅವರ 28 ಕೇಜಿ ತೂಕ ಇಳಿದಿದೆ. 26/11 ಮುಂಬೈ ದಾಳಿ ಪ್ರಕರಣದ ದೋಷಿ ಕಸಬ್‌ಗೂ ನ್ಯಾಯಯುತ ವಿಚಾರಣೆ ಅವಕಾಶ ನೀಡಲಾಗಿತ್ತು. ಆದರೆ ಸತ್ಯೇಂದ್ರ ಜೈನ್‌ ಅವರಿಗೆ ಅದು ಸಿಗುತ್ತಿಲ್ಲ. ಚಿಕಿತ್ಸೆಯ ಭಾಗವಾಗಿ ಆರೋಪಿ ತಮ್ಮ ಕೈಕಾಲು ಒತ್ತಿಸಿಕೊಂಡರೆ ಅದು ಜೈಲು ನಿಯಮಗಳ ಉಲ್ಲಂಘನೆಯಾಗುವುದಿಲ್ಲ’ ಎಂದು ವಾದಿಸಿದ್ದಾರೆ. ಇ.ಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ನ್ಯಾಯಾಲಯದಲ್ಲಿ ಹಾಜರಾಗದ ಕಾರಣ ವಿಚಾರಣೆಯನ್ನು ನ.28ಕ್ಕೆ ಮುಂದೂಡಲಾಗಿದೆ.

click me!