ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಸಾವಿನ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ ಶಿಕ್ಷೆಗೆ ತಡೆ ನೀಡುವಂತೆ ಆರೋಪಿ ಕಿರಣ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಸುಪ್ರೀಂಕೋರ್ಟ್ ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿಸ್ಮಯ 2021 ಜೂನ್‌ನಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಳು.
ದೆಹಲಿ: ಕೇರಳದ ಗೃಹಿಣಿ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ವಿಚಾರಣಾ ನ್ಯಾಯಾಲಯ ವಿಧಿಸಿದ 10 ವರ್ಷಗಳ ಶಿಕ್ಷೆಗೆ ತಡೆ ನೀಡುವಂತೆ ವಿಸ್ಮಯ ಪತಿ ಆರೋಪಿ ಕಿರಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ಕಿರಣ್ ಕುಮಾರ್ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈಗ ಕೇರಳ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಸುಪ್ರೀಂ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ರಾಜೇಶ್ ಬಿಂದಾಲ್ ಅವರ ಪೀಠವು ಈ ನೋಟಿಸ್ ಜಾರಿ ಮಾಡಿದೆ.
ಕೇರಳದ ವಿಚಾರಣಾ ನ್ಯಾಯಾಲಯ ವಿಧಿಸಿದ ಹತ್ತು ವರ್ಷಗಳ ಜೈಲು ಶಿಕ್ಷೆಯ ತೀರ್ಪಿನ ವಿರುದ್ಧ ಆರೋಪಿ ಕಿರಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ. ಕಳೆದ ಬಾರಿ ಸುಪ್ರೀಂಕೋರ್ಟ್ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡರೂ ವಿಸ್ತಾರವಾದ ವಾದಗಳಿಗೆ ಹೋಗಲಿಲ್ಲ. ಆರೋಪಿ ಕಿರಣ್ ಇದೇ ಬೇಡಿಕೆಯೊಂದಿಗೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರೂ ಇಲ್ಲಿಯವರೆಗೆ ಯಾವುದೇ ನಿರ್ಧಾರವಾಗದ ಕಾರಣ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾನೆ. ವಿಸ್ಮಯ ಆತ್ಮಹತ್ಯೆಗೆ ತನ್ನನ್ನು ನೇರವಾಗಿ ತಳುಕು ಹಾಕಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕಿರಣ್ ಪರ ವಕೀಲ ದೀಪಕ್ ಪ್ರಕಾಶ್ ವಾದ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕೇರಳ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಲಾಗಿದೆ.
ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿಸ್ಮಯ 2021 ಜೂನ್‌ನಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಳು. ಗಂಡನ ಕಿರುಕುಳದಿಂದಲೇ ವಿಸ್ಮಯ ಸಾವಿಗೆ ಶರಣಾಗಿದ್ದಾಳೆ ಎಂದು ಆರಂಭದಿಂದಲೂ ಆಕೆಯ ಸಂಬಂಧಿಕರು ಆರೋಪಿಸಿದ್ದರು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದುಬಾರಿ ವರದಕ್ಷಿಣೆ ನೀಡಿದ್ದ ವಿಸ್ಮಯ ಕುಟುಂಬ
ಮದುವೆಯ ವೇಳೆ ವಿಸ್ಮಯ ಕುಟುಂಬದವರು 100 ಪವನ್ ಚಿನ್ನ, ಒಂದೂವರೆ ಎಕರೆ ಭೂಮಿ ಮತ್ತು 10 ಲಕ್ಷ ರೂಪಾಯಿ ಬೆಲೆಬಾಳುವ ಕಾರನ್ನು ವರದಕ್ಷಿಣೆಯಾಗಿ ನೀಡಿ ಕಿರಣ್ ಕುಮಾರ್‌ಗೆ ಮಗಳು ವಿಸ್ಮಯಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ ನಂತರ ಕಿರಣ್‌ನ ನಿಜವಾದ ಮುಖ ಬಯಲಾಗಿದೆ. ವರದಕ್ಷಿಣೆಯಾಗಿ ನೀಡಿದ ಕಾರಿನ ವಿಚಾರದಲ್ಲಿ ಆತನಿಗೆ ಅಸಮಾಧಾನವಿದ್ದು, ಅದೇ ವಿಚಾರವಾಗಿ ಕಿರುಕುಳ ಪ್ರಾರಂಭವಾಯಿತು ಎಂದು ಕುಟುಂಬಸ್ಥರು ಹೇಳಿದ್ದರು. ತನಗೆ ಇಷ್ಟವಿಲ್ಲದ ಕಾರನ್ನು ವಿಸ್ಮಯ ಮನೆಯವರು ನೀಡಿದ್ದಾರೆ ಎಂದು ದೂರವಾಣಿ ಸಂಭಾಷಣೆಯಲ್ಲಿ ಆತ ಹೇಳಿರುವುದು ಬಹಿರಂಗವಾಗಿತ್ತು. ತನಗೆ ಹೋಂಡಾ ಸಿಟಿ ಕಾರು ಬೇಕಿತ್ತು ಎಂದು ಕಿರಣ್ ಕುಮಾರ್ ಹೇಳಿಕೊಂಡಿದ್ದ.
ಖರೀದಿಸಿದ ಕಾರಿಗೆ ಹತ್ತು ಲಕ್ಷ ರೂಪಾಯಿ ಬೆಲೆ ಇಲ್ಲವೆಂದು ಕಿರಣ್, ವಿಸ್ಮಯಾಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಕಿರಣ್, ಪತ್ನಿ ವಿಸ್ಮಯ ಮತ್ತು ಆಕೆಯ ಸಹೋದರ ವಿಜಿತ್‌ನನ್ನು ಥಳಿಸಿದ್ದನು. ಮದುವೆಯಾದ ಮೊದಲ ದಿನದಿಂದಲೇ ಆರಂಭವಾದ ಹಲ್ಲೆಯ ಬಗ್ಗೆ ವಿಸ್ಮಯ ಮೊದ ಮೊದಲು ಮನೆಯವರಿಂದ ವಿಚಾರ ಮುಚ್ಚಿಟ್ಟಿದ್ದಳು. ನಂತರ ಇದು ಸಹಿಸಿಕೊಳ್ಳಲಾಗದ ಹಂತ ತಲುಪಿದಾಗ ಮನೆಯಲ್ಲಿ ವಿಷಯ ತಿಳಿಸಿದಳು. ನನ್ನನ್ನು ಕಿರಣ್ ಮನೆಯಲ್ಲೇ ಬಿಟ್ಟರೆ ನಿಮಗೆ ಮತ್ತೆ ನನ್ನನ್ನು ನೋಡಲು ಸಾಧ್ಯವಿಲ್ಲ ಎಂದು ಆಕೆ ಅಳುತ್ತಾ ಹೇಳುವ ಆಡಿಯೋ ಕೂಡಾ ಇತ್ತೀಚೆಗೆ ಹೊರ ಬಂದಿತ್ತು. ಕಿರುಕುಳ ತಾಳಲಾರದೆ ತನ್ನ ಮನೆಗೆ ಹೋದ ವಿಸ್ಮಯಳನ್ನು ಆರೋಪಿ ಕಿರಣ್ ಕಾಲೇಜಿನಿಂದ ಮತ್ತೆ ಆತನ ಮನೆಗೆ ಕರೆದುಕೊಂಡು ಹೋಗಿದ್ದ. ಇದಾದ ನಂತರ ವಿಸ್ಮಯ ಶವವಾಗಿ ಪತ್ತೆಯಾಗಿದ್ದಳು.