ಬೆಂಗಳೂರಿನಲ್ಲಿ ಪ್ಲೇ ಹೋಂ ಮುಖ್ಯಸ್ಥೆಯೊಬ್ಬರು ಉದ್ಯಮಿಯನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ₹2.5 ಲಕ್ಷ ಸುಲಿಗೆ ಮಾಡಿದ್ದಾರೆ. ಈ ಸಂಬಂಧ ಖಾಸಗಿ ಪ್ಲೇ ಹೋಂ ಮುಖ್ಯಸ್ಥೆ ಹಾಗೂ ಆಕೆಯ ಇಬ್ಬರು ಸ್ನೇಹಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ತನ್ನ ಶಾಲೆಗೆ ಮಕ್ಕಳನ್ನು ಬಿಡಲು ಬಂದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ₹2.5 ಲಕ್ಷ ಸುಲಿಗೆ ಮಾಡಿದ್ದ ಖಾಸಗಿ ಪ್ಲೇ ಹೋಂ ಮುಖ್ಯಸ್ಥೆ ಹಾಗೂ ಆಕೆಯ ಇಬ್ಬರು ಸ್ನೇಹಿತರನ್ನು ಸಿಸಿಬಿ ಬಂಧಿಸಿದೆ.
ಮಹಾಲಕ್ಷ್ಮೀ ಲೇಔಟ್‌ನ ಶ್ರೀದೇವಿ ರುಡಗಿ, ವಿಜಯಪುರದ ರೌಡಿ ಸಾಗರ್ ಮೋರೆ ಹಾಗೂ ಆತನ ಸಂಬಂಧಿ ಗಣೇಶ್ ಕಾಳೆ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ನಿವಾಸಿಯಾದ ಉದ್ಯಮಿಗೆ ಶ್ರೀದೇವಿ ಗ್ಯಾಂಗ್ ವಂಚಿಸಿತ್ತು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸಿಸಿಬಿ ಸೆರೆ ಹಿಡಿದಿದೆ.
₹50 ಸಾವಿರಕ್ಕೆ ಮುತ್ತುಕೊಟ್ಟು ₹20 ಲಕ್ಷಕ್ಕೆ ಬ್ಲ್ಯಾಕ್‌ಮೇಲ್:
ಕಲಾಸಿಪಾಳ್ಯದ ಜಾಲಿ ಮೊಹಲ್ಲಾದಲ್ಲಿ ಗುಜರಾತ್ ಮೂಲದ ಉದ್ಯಮಿಯು ಟ್ರೇಡಿಂಗ್ ಕಂಪನಿ ಹೊಂದಿದ್ದು, ತಮ್ಮ ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿ ಜತೆ ಮಹಾಲಕ್ಷ್ಮೀ ಲೇಔಟ್ 3ನೇ ಮುಖ್ಯರಸ್ತೆಯಲ್ಲಿ ಅವರು ನೆಲೆಸಿದ್ದಾರೆ. ಆ ಉದ್ಯಮಿ ಮನೆ ಸಮೀಪ ‘ಬಾಲವಾಟಿಕಾ ಪ್ರೀ ಸ್ಕೂಲ್’ ಪ್ಲೇ ಹೋಂ ಅನ್ನು ಶ್ರೀದೇವಿ ನಡೆಸುತ್ತಿದ್ದಳು.
ಎರಡು ವರ್ಷಗಳ ಹಿಂದೆ ತಮ್ಮ ಕಿರಿಯ ಪುತ್ರಿಯನ್ನು ಶ್ರೀದೇವಿ ಪ್ಲೇ ಹೋಂಗೆ ಅವರು ದಾಖಲಿಸಿದ್ದರು. ಅಲ್ಲದೆ ನೃತ್ಯ ತರಬೇತಿ ಸಹ ನೀಡುತ್ತಿದ್ದ ಕಾರಣಕ್ಕೆ ತಮ್ಮ ಇನ್ನಿಬ್ಬರು ಮಕ್ಕಳನ್ನು ಕೂಡ ಆಕೆ ಬಳಿ ನೃತ್ಯ ತರಬೇತಿಗೆ ಅವರು ಕಳುಹಿಸುತ್ತಿದ್ದರು. ಆ ವೇಳೆ ಆಕೆಯ ಪರಿಚಯವಾಗಿ ಆತ್ಮೀಯತೆ ಮೂಡಿದೆ. ಈ ಸಲುಗೆಯಲ್ಲಿ ಚಾಟಿಂಗ್, ಕಾಲಿಂಗ್ ನಡೆದಿದ್ದು, ಆಗಾಗ್ಗೆ ಸುತ್ತಾಟಕ್ಕೆ ಹೋಗಿ ಊಟ-ತಿಂಡಿ ಜೊತೆಯಲ್ಲಿ ‘ಸವಿ’ದಿದ್ದರು. ಗೆಳತಿ ಜತೆ ಮಾತುಕತೆಗೆ ಅವರು ಪ್ರತ್ಯೇಕ ಸಿಮ್ ಇಟ್ಟಿದ್ದರು.
ಕದ್ದು ಮುಚ್ಚಿ ವ್ಯಾಟ್ಸಾಪ್ ಖಾತೆ ನೋಡಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ
ಇದೇ ಸ್ನೇಹದಲ್ಲಿ ಶಾಲೆ ನಡೆಸಲು ಕಷ್ಟವಾಗುತ್ತಿದೆ ಎಂದು ಹೇಳಿ ₹2 ಲಕ್ಷ ಸಾಲವನ್ನು ಉದ್ಯಮಿಯಿಂದ ಶ್ರೀದೇವಿ ಪಡೆದಿದ್ದಳು. ಆದರೆ ಆರು ತಿಂಗಳಲ್ಲೇ ಕೊಡುವುದಾಗಿ ಹೇಳಿದರು ಆಕೆ ಕೊಡಲಿಲ್ಲ. ಇದಾದ ಬಳಿಕ ತಮ್ಮ ತಂದೆಗೆ ಅನಾರೋಗ್ಯವೆಂದು ಹೇಳಿ ಸಹ ಗೆಳೆಯನಿಂದ ಮತ್ತೆ ₹2 ಲಕ್ಷವನ್ನು ಆಕೆ ವಸೂಲಿ ಮಾಡಿದ್ದಳು. ಇದಾದ ಬಳಿಕ ‘ನಾನು ನಿನ್ನ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ನಿನ್ನೊಂದಿಗೆ ರಿಲೇಷನ್‌ಶಿಷ್‌ನಲ್ಲಿರುತ್ತೇನೆ. ನಿನ್ನೊಂದಿಗೆ ಸೆಕ್ಸ್‌ಗೆ ಸಹಕರಿಸುತ್ತೇನೆ. ನಾನು ಕೇಳಿದಾಗಲೆಲ್ಲ ಹಣ ಕೊಟ್ಟು ಸಂಬಂಧ ಮುಂದುವರೆಸಬಹುದು’ ಎಂದು ಶ್ರೀದೇವಿ ಆಫರ್ ಕೊಟ್ಟಿದ್ದಳು. ಈ ಆಫರ್‌ಗೆ ಉದ್ಯಮಿ ತಿರಸ್ಕರಿಸಿದ್ದರು. ಕೊನೆಗೆ ಉದ್ಯಮಿ ಕುಟುಂಬದವರು ರಾಜಸ್ಥಾನಕ್ಕೆ ತೆರಳಿದ್ದಾಗ ಅವರ ಮನೆಗೆ ಹೋಗಿದ್ದ ಶ್ರೀದೇವಿ, ಉದ್ಯಮಿಗೆ ಒಂದು ಮುತ್ತು ಕೊಟ್ಟು ₹50 ಸಾವಿರ ಪಡೆದು ಬಂದಿದ್ದಳು ಎಂದು ದೂರಿನಲ್ಲೇ ಹೇಳಿದ್ದಾರೆ.
ಈ ಮುತ್ತಿನ ಪ್ರಸಂಗ ಮುಗಿದ ಬಳಿಕ ಉದ್ಯಮಿ ಬಳಿ ಪದೇ ಪದೇ ಆಕೆ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಈ ಬೇಡಿಕೆ ಬೇಸತ್ತು ಆಕೆಯ ಸಂಪರ್ಕ ಕಡಿತಗೊಳ್ಳಲು ದೂರುದಾರರು ಮುಂದಾಗಿದ್ದರು. ಆಗ ಮಾ.12ರಂದು ಸಂತ್ರಸ್ತನ ಪತ್ನಿ ಕರೆ ಮಾಡಿ ನಿಮ್ಮ ಮಗಳ ಟಿಸಿ ಕೊಡುತ್ತೇವೆ. ಪತಿಯನ್ನು ಶಾಲೆಗೆ ಕಳುಹಿಸಿ ಎಂದು ಶ್ರೀದೇವಿ ತಿಳಿಸಿದ್ದಳು. ಅಂತೆಯೇ ಪ್ಲೇ ಹೋಂಗೆ ಹೋಗಿದ್ದಾಗ ಶ್ರೀದೇವಿ ಜತೆ ಆಕೆಯ ಸ್ನೇಹಿತರಾದ ಗಣೇಶ್ ಹಾಗೂ ಸಾಗರ್ ಸಹ ಇದ್ದರು. ಆಗ ಸಾಗರ್‌ನನ್ನು ಶ್ರೀದೇವಿ ಮದುವೆಯಾಗಲಿರುವ ಹುಡುಗ ಎಂದು ಪರಿಚಯಿಸಿದ್ದ ಗಣೇಶ್, ‘ನೀನು ಆಕೆಯೊಂದಿಗೆ ಸಲುಗೆ ಬೆಳೆಸಿ ಮೋಸ ಮಾಡುತ್ತಿದ್ದೀಯಾ. ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೇವೆ’ ಎಂದು ಗಲಾಟೆ ಮಾಡಿದ್ದ. ಅಲ್ಲದೆ ಮುರುಳಿ ಎಂಬ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯ ವಾಟ್ಸಾಪ್ ಡಿಪಿ ತೋರಿಸಿ ಉದ್ಯಮಿಗೆ ಬೆದರಿಸಿದ್ದರು.
ಈ ಸಂಬಂಧದ ಬಗ್ಗೆ ನಿನ್ನ ಪತ್ನಿಗೂ ಹೇಳುತ್ತೇವೆ ಎಂದಿದ್ದರು. ಆಗ ತಾನು ಶ್ರೀದೇವಿ ಜತೆ ಊಟ ತಿಂಡಿಗೆ ಹೋಗಿದ್ದನಷ್ಟೇ ಎಂದಿದ್ದರು.ಈ ಮಾತಿಗೆ ಬಗ್ಗದ ಆರೋಪಿಗಳು, ತಮ್ಮ ಕಾರಿಗೆ ಬಲವಂತವಾಗಿ ಕೂರಿಸಿಕೊಂಡು ಗೊರಗುಂಟೆಪಾಳ್ಯಕ್ಕೆ ಕರೆದೊಯ್ದು ₹1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಚೌಕಾಸಿ ನಡೆದು ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಆರೋಪಿಗಳಿಗೆ ₹90 ಸಾವಿರ ಕೊಟ್ಟು ಮರಳಿದ್ದರು. ಇದಾದ ನಂತರ ಮತ್ತೆ ಉದ್ಯಮಿಗೆ ಕರೆ ಮಾಡಿ ₹15 ಲಕ್ಷ ಕೊಟ್ಟರೆ ತನ್ನಲ್ಲಿರುವ ಅಶ್ಲೀಲ ಚಾಟಿಂಗ್ ಮೆಸೇಜ್ ಹಾಗೂ ಫೋಟೋ ಡಿಲೀಟ್ ಮಾಡುವುದಾಗಿ ಶ್ರೀದೇವಿ ಬ್ಲ್ಯಾಕ್‌ಮೇಲ್ ಮಾಡಿದ್ದಳು. ಕೊನೆಗೆ ಈ ಬ್ಲ್ಟಾಕ್‌ಮೇಲ್ ಬೇಸತ್ತು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಡಾ। ಚಂದ್ರಗುಪ್ತ ಅವರಿಗೆ ಉದ್ಯಮಿ ದೂರು ಕೊಟ್ಟಿದ್ದರು. ಅದರಂತೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಗಿಳಿದ ಇನ್‌ಸ್ಪೆಕ್ಟರ್ ಮಹದೇವಯ್ಯ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ಕೆಲಸದ ಕೊಡಿಸುವ ಆಮಿಷವೊಡ್ಡಿ ಬಲತ್ಕಾರ: ಪಾದ್ರಿಗೆ ಜೀವಾವಧಿ ಶಿಕ್ಷೆ
ಸಹಪಾಠಿಗಳ ಜತೆ ಹನಿಟ್ರ್ಯಾಪ್
ಮಹಾಲಕ್ಷ್ಮೀ ಲೇಔಟ್‌ನಲ್ಲಿ ಎರಡು ವರ್ಷಗಳಿಂದ ವಿಜಯಪುರದ ಶ್ರೀದೇವಿ ಪ್ಲೇ ಹೋಂ ನಡೆಸುತ್ತಿದ್ದು, ಅದೇ ಕಟ್ಟಡದಲ್ಲೇ ಆಕೆ ನೆಲೆಸಿದ್ದಳು. ಸುಲಭವಾಗಿ ಹಣ ಸಂಪಾದನೆಗೆ ತನ್ನ ಕಾಲೇಜಿನ ಸಹಪಾಠಿಗಳಾಗಿದ್ದ ಸಾಗರ್ ಹಾಗೂ ಗಣೇಶ್ ಜತೆ ಸೇರಿ ಆಕೆ ಹನಿಟ್ರ್ಯಾಪ್ ಗ್ಯಾಂಗ್ ಕಟ್ಟಿದ್ದಳು. ಇದೇ ರೀತಿ ಬೇರೆಯವರಿಗೆ ವಂಚಿಸಿರುವ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.