ಕುಂಚಾವರಮ್ ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ್, ಕಂಪ್ಯೂಟರ್ ಆಪರೇಟರ್ ಅರೆಸ್ಟ್
ಕಲಬುರಗಿ/ಚಿಂಚೋಳಿ(ಸೆ.13): ಜಿಲ್ಲೆಯ ಚಿಂಚೋಳಿ ತಾಲೂಕಿನ ತೆಲಂಗಾಣ ಗಡಿಯಲ್ಲಿರುವ ಕುಂಚಾವರಂ ಗ್ರಾಮದ ಅಂಬೇಡ್ಕರ್ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಇಲ್ಲಿರುವ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಶಾಲೆಯ ಪ್ರಾಚಾರ್ಯ, ಕಂಪ್ಯೂಟರ್ ಆಪರೇಟರ್ ಲೈಂಗಿಕವಾಗಿ ಕಿರುಕುಳ ನೀಡುವ ವರ್ತನೆ ತೋರಿದ್ದಾರೆಂದು ವಿದ್ಯಾರ್ಥಿನಿಯರು ದೂರಿದ್ದಾರೆ. ಇಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಪಡೆದಿರುವ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪಭುಲಿಂಗ ಬುಳ್ಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದು ಪ್ರಾಚಾರ್ಯ ಚೇತನ ರೆಡ್ಡಿ, ಕಂಪ್ಯೂಟರ್ ಆಪರೇಟರ್ ಸಂಗಮೇಶ ಇವರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಈ ಶಾಲೆಯ ಕೆಲವು ವಿದ್ಯಾರ್ಥಿನಿಯರು ಅನಾರೋಗ್ಯವೆಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ವಿದ್ಯಾರ್ಥಿನಿಯರ ದಿನಚರಿ ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿನಿಯರು ತಮಗೆ ಕಳೆದ ಕೆಲವು ದಿನದಿಂದ ತುಂಬ ಕಿರಿಕಿರಿಯಾಗುತ್ತಿದೆ, ಶಾಲೆಯ ಪ್ರಾಚಾರ್ಯ, ಕಂಪ್ಯೂಟರ್ ಆಪರೇಟರ್ ಇಬ್ಬರು ರಾತ್ರಿ ಬಂದು ತಮ್ಮ ಮುಟ್ಟುವ ಮೂಲಕ ಕಿರಿಕಿರಿ ಮಾಡುತ್ತಿದ್ದಾರೆಂದು ಹೇಳುತ್ತ ಇದರಿಂದಲೇ ಮೈಕೈ ನೋವು, ಅನಾರೋಗ್ಯ ಅನ್ನಿಸುತ್ತಿದೆ ಎಂದಾಗ ಇದರಿಂದ ಚಕಿತಗೊಂಡ ವೈದ್ಯರು ತಕ್ಷಣ ಸದರಿ ವಿಚಾರ ಪೊಲೀಸರ ಗಮನಕ್ಕೆ ತಂದಿದ್ದಾರೆ.
ನೇಣು ಹಾಕೋದನ್ನ ತಪ್ಪಿಸೋದು ಬಿಟ್ಟು ವಿಡಿಯೋ ಮಾಡಿದ ಭೂಪರು: ಮಾನವೀಯತೆ ಮರೆತು ಬಿಟ್ರಾ ಜನ?
ಇದಾದ ನಂತರ ಸಮಾಜ ಕಲ್ಯಾಣಾಧಿಕಾರಿ ಬುಳ್ಳಾ ಇವರು ವಿದ್ಯಾರ್ಥಿನಿಯರನ್ನು ಕಂಡು ಮಾತನಾಡಿಸಿ ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಇವರೂ ಲಿಖಿತವಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರಿಂದ ಕುಂಚಾವರಂ ಠಾಣೆಯಲ್ಲಿ ಶಾಲೆಯ ಪ್ರಾಚಾರ್ಯ ಹಾಗೂ ಕಂಪ್ಯೂಟರ್ ಆಪರೇಟರ್ ವಿರುದ್ಧ ಪೋಕ್ಸೋ ಕಾಯ್ದೆಉಡಿ ಪ್ರಕರಣ ದಾಖಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಅಂಬೇಡ್ಕರ್ ವಸತಿ ಶಾಲೆಯಂಗಳದಲ್ಲಿ ಪೋಷಕರು ಜಮಾಯಿಸಿದ್ದಾರೆ. ತಹಸೀಲ್ದಾರ್ ಅಂಜುಮ್ ತಬಸುಮ್, ಡಿವೈಎಸ್ಪಿ ಬಸವರಾಜ, ಚಿಂಚೋಳಿ ಸಿಪಿಐ, ಪಿಎಸ್‌ಐ ಉದ್ಧಂಡಪ್ಪ ಸೇರಿದಂತೆ ಅನೇಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿನ ಮಕ್ಕಳು ಶಾಲಾ ಆವರಣದಲ್ಲೇ ಪ್ರತಿಭಟನೆ ಮಾಡಿ ತಮಗೆ ನ್ಯಾಯಬೇಕು ಎಂದು ಬೇಡಿಕೆ ಇಟ್ಟು ಗಮನ ಸೆಳೆದಿದ್ದಾರೆ. ಸದ್ಯ ಶಾಲೆ ಇರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಕಂಡಿದೆ.
ಕುಂಚಾವಂ ಗ್ರಾಮಸ್ಥರಾದ ಡಾ. ಅಂಜನೇಯ ಸೇರಿದಂತೆ ಅನೇಕರು ಶಾಳೆಯಲ್ಲಿನ ಈ ಬೆಳವಣಿಗೆಯನ್ನು ಉಗ್ರವಾಗಿ ಖಂಡಿಸಿದ್ದು ತಕ್ಷಣ ತಪ್ಪಿತಸ್ಥರ ವಿರುದ್ಧ ವಿಚಾರಣೆ ನಡೆದು ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.