Mumbai: 2 ಸಾವಿರ ರೂ. ಡಿಸ್ಕೌಂಟ್‌ ನೀಡದಿದ್ದಕ್ಕೆ 1 ಕೋಟಿ ರೂ. ಮೌಲ್ಯದ 2 ಕೆಜಿ ಚಿನ್ನ ಕದ್ದ ಕಳ್ಳ..!

By Kannadaprabha NewsFirst Published Sep 13, 2022, 12:48 PM IST
Highlights

ಆಭರಣ ಅಂಗಡಿಯ ಮಾಲೀಕ ಚಿನ್ನಕ್ಕೆ 2 ಸಾವಿರ ರೂ. ಡಿಸ್ಕೌಂಟ್‌ ಕೊಡಲು ನಿರಾಕರಿಸಿದ ಕಾರಣ, ಆ ಅಂಗಡಿಯಲ್ಲಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ. ಮುಂಬೈ ಪೊಲೀಸರು ಈ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿದ್ದಾರೆ. 

ಸಾಮಾನ್ಯವಾಗಿ ಕೆಲ ಅಂಗಡಿ ಮಾಲೀಕರು (Shop Owners) ರಿಯಾಯಿತಿ (Discount) ನೀಡದಿದ್ದಾಗ ನಾವು ಜಗಳವಾಡಿಯಾದರೂ ವಸ್ತು (Items) ಖರೀದಿಸುವುದನ್ನು ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ತನಗೆ ಚಿನ್ನದಂಗಡಿ ಮಾಲೀಕರು 2000 ರೂಪಾಯಿ ಡಿಸ್ಕೌಂಟ್‌ ನೀಡಲು ನಿರಾಕರಿಸಿದ್ದಕ್ಕೆ 1.2 ಕೋಟಿ ರೂ. ಬೆಲೆಬಾಳುವ 2 ಕೆಜಿ ಚಿನ್ನ ಕದ್ದಿದ್ದಾನೆ. 52 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಚಿನ್ನದ ಆಭರಣ (Jewellery) ಖರೀದಿಸಲೆಂದು ಚಿನ್ನದಂಗಡಿಗೆ ತೆರಳಿದಾಗ ಮಾಲೀಕ ರಿಯಾಯಿತಿ ನೀಡಲು ನಿರಾಕರಿಸಿದ. ಹೀಗಾಗಿ ತನ್ನ ಗೆಳೆಯನ ಜೊತೆ ಸೇರಿ ಕಳ್ಳತನ (Theft) ಮಾಡಿದ್ದಾಗಿ ವ್ಯಕ್ತಿ ಹೇಳಿದ್ದಾನೆ. ಬಳಿಕ ಮುಂಬೈ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

2,000 ರಿಯಾಯಿತಿ ನೀಡಲು ಆಭರಣ ವ್ಯಾಪಾರಿ ನಿರಾಕರಿಸಿದ್ದರಿಂದ ಕೋಪಗೊಂಡ 52 ವರ್ಷದ ಆರೋಪಿ (ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ) ತನ್ನ ಗೆಳತಿಗೆ ಚಿನ್ನಾಭರಣ ಖರೀದಿಸಲು ಇಚ್ಛಿಸಿದ್ದು, ಈ ಹಿನ್ನೆಲೆ ಆಭರಣದ ಅಂಗಡಿಗೆ ನುಗ್ಗಿ ಇಬ್ಬರು ಸಹಚರರು ಸೇರಿ ಸುಮಾರು 1.2 ಕೋಟಿ ರೂ. ಮೌಲ್ಯದ 2 ಕೆಜಿ ಚಿನ್ನಾಭರಣ ದೋಚಿದ್ದಾರೆ. ಅಪರಾಧ ವಿಭಾಗದ ಘಟಕ 5 (Crime Department Unit 5 ) ಶಿವಾಜಿ ಪಾರ್ಕ್ ಪೊಲೀಸ್ ಠಾಣೆ ಪ್ರಕರಣವನ್ನು ಭೇದಿಸಿದ್ದು, ಪ್ರಮುಖ ಆರೋಪಿ ವಿನೋದ್ ಸಿಂಗ್ ಮತ್ತು ಸಹಾಯಕರಲ್ಲಿ ಒಬ್ಬರಾದ ಪರಾಸ್ ಜೊಬಾಲಿಯಾ (50) ಅವರನ್ನು ಬಂಧಿಸಿದ್ದು, ಕಳ್ಳತನವಾದ ಬಹುತೇಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಕಾರಿನಲ್ಲಿ ಬಂದು ಬೈಕ್‌ ಕಸಿದು ಪರಾರಿಯಾದ ಖದೀಮರು

ವಿನೋದ್ ಸಿಂಗ್ ಅವಿವಾಹಿತರಾಗಿದ್ದು, ದೈನಂದಿನ ಮನರಂಜನೆಗಾಗಿ ವಿವಿಧ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ, ಈತ ತಮ್ಮ ಗೆಳತಿಗಾಗಿ ಕೆಲವು ಆಭರಣಗಳನ್ನು ಖರೀದಿಸಲು ದಾದರ್ (ಪಶ್ಚಿಮ) ನಲ್ಲಿರುವ ಪೆಡ್ನೇಕರ್ ಜ್ಯುವೆಲರ್ಸ್‌ಗೆ ಭೇಟಿ ನೀಡಿದ್ದರು. “ಆಭರಣಗಳನ್ನು ಆಯ್ಕೆ ಮಾಡಿದ ನಂತರ, ವಿನೋದ್‌ ಸಿಂಗ್ ವ್ಯಾಪಾರಿಯಿಂದ 2,000 ರೂ. ಡಿಸ್ಕೌಂಟ್‌ ಕೇಳಿದ್ದಾನೆ. ಆದರೆ, ವ್ಯಾಪಾರಿ ಅದನ್ನು ನೀಡಲು ನಿರಾಕರಿಸಿದ ನಂತರ ವಿನೋದ್‌ ಸಿಂಗ್ ಅಂಗಡಿಯಿಂದ ಹೊರಹೋಗಿದ್ದಾರೆ. 

ನಂತರ, ಆಗಸ್ಟ್ 24 ರಂದು, ಮಧ್ಯಾಹ್ನ 2 ರಿಂದ 4 ರ ನಡುವೆ 2 ಗಂಟೆಗಳ ಕಾಲ ಊಟದ ವಿರಾಮಕ್ಕಾಗಿ ಅಂಗಡಿಯನ್ನು ಮುಚ್ಚಿದಾಗ, ಆರೋಪಿಗಳು ಅಂಗಡಿಯ ಹಿಂಭಾಗದ ವಾಶ್ ರೂಂನ ಗ್ರಿಲ್ ಅನ್ನು ಮುರಿದು, ಆವರಣಕ್ಕೆ ಪ್ರವೇಶಿಸಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ, ”ಎಂದು ಅಪರಾಧ ವಿಭಾಗದ ಘಟಕ 5 ರ ಹಿರಿಯ ಇನ್ಸ್‌ಪೆಕ್ಟರ್ ಶ್ಯಾಮ್ ನಾಯರ್ ಹೇಳಿದ್ದಾರೆ. 
ಅಂಗಡಿಯ ಬಳಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ಪ್ರಕರಣ ಇನ್ನಷ್ಟು ಸವಾಲಿನದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ, ಡಿಜಿಟಲ್ ಆಸ್ತಿ ನಿರ್ವಹಣೆ (DAM) ಡೇಟಾ ಮತ್ತು ಇತರ ತಾಂತ್ರಿಕ ಸಹಾಯದ ಆಧಾರದ ಮೇಲೆ, ಪೊಲೀಸರು ವಿನೋದ್‌ ಸಿಂಗ್ ಅನ್ನು ಗುರುತಿಸಲು ಸಾಧ್ಯವಾಯಿತು. ನಂತರ ಅವರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. 

ವಿಚಾರಣೆಯ ಸಮಯದಲ್ಲಿ, ವಿನೋದ್‌ ಸಿಂಗ್ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಅಲ್ಲದೆ, ತಾನು ಕಳ್ಳತನ ನಡೆಸುತ್ತಿರುವಾಗ, ಕಣ್ಣಿಡಲು ಅಂಗಡಿಯ ಹೊರಗೆ ನಿಲ್ಲಿಸಿದ್ದ ವ್ಯಕ್ತಿಯ ಹೆಸರನ್ನು ಸಹ ಬಹಿರಂಗಪಡಿಸಿದನು. ಕಳ್ಳತನದ ಬಳಿಕ ಮನೆಗೆ ತೆರಳಿ ಚಿನ್ನಾಭರಣವನ್ನೆಲ್ಲ ಕರಗಿಸಿ ಅದರಲ್ಲಿ 4 ಬಿಸ್ಕತ್ತುಗಳನ್ನು ತಯಾರಿಸಿದ್ದಾಗಿಯೂ ವಿನೋದ್‌ ಸಿಂಗ್ ಹೇಳಿದ್ದಾರೆ. ನಂತರ ಅವರು ಬಿಸ್ಕೆಟ್‌ಗಳನ್ನು ಮಾರಾಟ ಮಾಡಲು ಜೋಬಾಲಿಯಾ ಎಂಬಾತನಿಗೆ ನೀಡಿದ್ದಾರೆ. 

ಬೇಕಿತ್ತಾ ಇಂಥಾ ಕೆಲ್ಸ ! ಮಹಿಳೆಯರ ಒಳಉಡುಪು ಕದಿಯೋಕೆ ಹೋಗಿ ಸಿಕ್ಕಿಬಿದ್ರು

ಬಳಿಕ ವಿನೋದ್‌ ಸಿಂಗ್ ನೀಡಿದ ವಿವರಗಳ ಆಧಾರದ ಮೇಲೆ ಪೊಲೀಸರು 2 ಕೆಜಿ ತೂಕದ 4 ಬಿಸ್ಕೆಟ್‌ಗಳನ್ನು ಮಾರಾಟ ಮಾಡಲು ಅಹಮದಾಬಾದ್‌ಗೆ ತೆರಳುತ್ತಿದ್ದಾಗ ಜೋಬಾಲಿಯಾ ಅವರನ್ನು ಬಂಧಿಸಿದ್ದಾರೆ. ಇನ್ನು, ವಿನೋದ್‌ ಸಿಂಗ್ ವಿರುದ್ಧ ಎಲ್ ಟಿ ಮಾರ್ಗ್ ಮತ್ತು ಕಲ್ಯಾಣ್ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಮನೆ ಕಳ್ಳತನ ಮತ್ತು ಕಳ್ಳತನದ ಅಪರಾಧಗಳು ದಾಖಲಾಗಿವೆ ಎಂದೂ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. 

click me!