ವಿದ್ಯುತ್‌ ಶುಲ್ಕ ಹೆಚ್ಚು ಬಂದಿದ್ದಕ್ಕೆ ಬಿಲ್‌ ಕಲೆಕ್ಟರ್‌ಗೆ ಚೂರಿ ಇರಿತ

By Kannadaprabha News  |  First Published Jul 14, 2023, 10:53 AM IST

ವಿದ್ಯುತ್‌ ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಬಿಲ್‌ ಕಲೆಕ್ಟರ್‌ಗೆ ಚಾಕು ಇರಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಮಾದಪುರದ ಜಂಬೂರಿನ ಕಾರ್ಯಪ್ಪ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದಿದೆ. 


ಮಡಿಕೇರಿ (ಜು.14): ವಿದ್ಯುತ್‌ ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಬಿಲ್‌ ಕಲೆಕ್ಟರ್‌ಗೆ ಚಾಕು ಇರಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಮಾದಪುರದ ಜಂಬೂರಿನ ಕಾರ್ಯಪ್ಪ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದಿದೆ. ಕಾರ್ಯಪ್ಪ ಬಡಾವಣೆಯ ನಿವಾಸಿ ರತೀಶ್‌ ಎಂಬಾತ ಬಿಲ್‌ ಕಲೆಕ್ಟರ್‌ ಪ್ರಶಾಂತ್‌ ಎಂಬವರಿಗೆ ಚೂರಿ ಇರಿದಿದ್ದು, ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯುತ್‌ ಬಿಲ್‌ ಹೆಚ್ಚು ಬಂದಿರುವ ಹಿನ್ನೆಲೆಯಲ್ಲಿ ರತೀಶ್‌ ಬಿಲ್‌ ಕಲೆಕ್ಟರ್‌ನೊಂದಿಗೆ ಆಕ್ರೋಶಗೊಂಡಿದ್ದಾನೆ. ಈ ಸಂದರ್ಭ ಬಿಲ್‌ ಕಲೆಕ್ಟರ್‌ ಪ್ರಶಾಂತ್‌ ಇದಕ್ಕೆ ನಮಗೆ ಸಂಬಂಧ ಇಲ್ಲ. 

ಕಚೇರಿಗೆ ಹೋಗಿ ವಿಚಾರಿಸಿ ಎಂದಿದ್ದಾರೆ.  ಈ ವೇಳೆ ಪಟ್ಟು ಹಿಡಿದು ನೀನೇ ಹೇಳಬೇಕೆಂದು ಹೇಳಿದ್ದಾನೆ. ಈ ಸಂದರ್ಭ ಬಿಲ್‌ ಕಲೆಕ್ಟರ್‌ ಸ್ಥಳೀಯ ಜೆಇಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ವಿದ್ಯುತ್‌ ರೀಡಿಂಗ್‌ ನಂಬರ್‌ ಫೋಟೋ ತೆಗೆದುಕೊಂಡು ಬನ್ನಿ ಎಂದು ಜೆಇ ಸೂಚಿಸಿದ್ದರು. ಅದರಂತೆ ಬಿಲ್‌ ಕಲೆಕ್ಟರ್‌ ಪ್ರಶಾಂತ್‌ ಮತ್ತೆ ಹಿಂತಿರುಗಿ ವಿದ್ಯುತ್‌ ಮೀಟರ್‌ನ ಫೋಟೋ ತೆಗೆಯುವ ಸಂದರ್ಭದಲ್ಲಿ ರತೀಶ್‌ ಹಾಗೂ ಬಿಲ್‌ ಕಲೆಕ್ಟರ್‌ ನಡುವೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾತುಗಳು ತಾರಕಕ್ಕೇರಿದ ಸಂದರ್ಭ ಬಿಲ್‌ ಕಲೆಕ್ಟರ್‌ ಪ್ರಶಾಂತ್‌ಗೆ ಚೂರಿಯಿಂದ ಇರಿಯಲಾಯಿತು. 

Tap to resize

Latest Videos

undefined

ಪೊಲೀಸರ ಸೋಗಿನಲ್ಲಿ ಕಿಡಿಗೇಡಿಗಳಿಂದ ದರೋಡೆ: ಇಬ್ಬರ ಬಂಧನ

ಗಂಭೀರ ಗಾಯಗೊಂಡ ಪ್ರಶಾಂತ್‌ನನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರತೀಶ್‌ ಎಂಬವರಿಗೆ 1400 ರುಪಾಯಿ ವಿದ್ಯುತ್‌ ಬಿಲ್‌ ಬಂದಿದೆ. ಈ ಹಿಂದೆ ಇದಕ್ಕಿಂತ ಕಡಿಮೆ ಬಂದಿತ್ತು. ಆದರೆ ಇದೀಗ ಹೆಚ್ಚು ಬಿಲ್‌ ಬಂದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿ ರತೀಶ್‌ ತಲೆಮರೆಸಿಕೊಂಡಿದ್ದು, ಮಾದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

ತಳ್ಳುಗಾಡಿಗೆ ಡಿಕ್ಕಿ ಹೊಡೆದದ್ದಕ್ಕೆ ಚಾಕು ಇರಿತ: ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆಯಿಂದ ಕಡೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಪಟ್ಟಣದ ಸಿಪಿಶಿ ಕಾಲೋನಿಯ ಮಂಜುನಾಥ್‌ರವರ ಪುತ್ರ ವಿಘ್ನೇಶ್‌ ಎಂಬುವರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವಕ ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದ್ದಾರೆ.

ಘಟನೆಯ ಹಿನ್ನೆಲೆ: ಕಳೆದ ಮಂಗಳವಾರ ಸಂಜೆ ಸುಮಾರು 7.30ರ ಸಮಯದಲ್ಲಿ ಕಡೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರಿನ ಮೊಬೈಲ್‌ ಟವರ್‌ನÜ ಮುಂಭಾಗದಲ್ಲಿ ಮಳೆಯಲ್ಲಿಯೇ ತನ್ನ ಬೈಕಿನಲ್ಲಿ ವಿಘ್ನೇಶ್‌ ಮನೆಗೆ ಹೋಗುತ್ತಿರುವಾಗ ಮುಂಭಾಗದಲ್ಲಿ ಹೋಗುತ್ತಿದ್ದ ರಿಯಾಜ್‌ ಎಂಬುವರ ತಳ್ಳುಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ವಿಘ್ನೇಶನ ಫೋನ್‌ ಒಡೆದು ಹೋಗಿದ್ದು, ಅಲ್ಲಿ ನೆರೆದಿದ್ದ ಎರಡು ಕೋಮಿನ ಜನರು ಸೇರಿ ಇಬ್ಬರಿಗೂ ಸಮಾಧಾನಪಡಿಸಿ ಕಳುಹಿಸಿ ಕೊಟ್ಟರು ಎನ್ನಲಾಗಿದೆ.

ಆದರೆ ರಾತ್ರಿ 9 ಗಂಟೆ ಸುಮಾರಿಗೆ ಫಾಜಿಲ್‌, ನವಾಜ್‌, ಸೈಯ್ಯದ್‌, ರುಮಾನ್‌, ಸುಹೀಲ್‌ ಸೇರಿದಂತೆ ಅನೇಕರು ಗುಂಪು ಸೇರಿ ಮತ್ತೆ ಮನೆ ಹತ್ತಿರ ಹೋಗಿ ಗಲಾಟೆ ನಡೆಸಿದ್ದು, ಫಾಜಿಲ್‌ಎಂಬುವನು ವಿಘ್ನೇಶ್‌ಗೆ ಚಾಕು ಹಾಕಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸಾಕಷ್ಟುಜನ ಸೇರುವ ಮೂಲಕ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿದೆ. ಚಾಕುವಿನಿಂದ ಇರಿದಿರುವ ಫಾಜಿಲ್‌ ಎಂಬುವನು ಶಿವಮೊಗ್ಗದವನಾಗಿದ್ದು, ಅಜ್ಜಂಪುರದಲ್ಲಿ ಡ್ರೈವರ್‌ ಕೆಲಸ ಮಾಡುತ್ತಿರುವ ಆತನು ಕಡೂರು ಪಟ್ಟಣದಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ಇದ್ದಾನೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಡಾ. ಉಮಾಪ್ರಶಾಂತ್‌ ತಿಳಿಸಿದರು.

ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ರಾತ್ರಿ ಸುಮಾರು 3 ಗಂಟೆವರೆಗೂ ಇದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಂಡಿದ್ದಾರೆ. ಈ ಕುರಿತು ಕ್ರಮ ವಹಿಸುವಂತೆಯೂ ಪೊಲೀಸರಿಗೆ ಸೂಚನೆ ನೀಡಿದರು ಎಂದು ಬುಧವಾರ ಬೆಳಿಗ್ಗೆ ಜಿಲ್ಲಾ ಸಹಾಯಕ ರಕ್ಷಣಾಧಿಕಾರಿ ಜಿ. ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

click me!