ಬೆಂಗಳೂರು: ಹಣಕ್ಕಾಗಿ ಪ್ರಯಾಣಿಕಳನ್ನೇ ಕೊಂದ ಚಾಲಕನ ಸುಳಿವು ನೀಡಿದ ಚಪ್ಪಲಿ!

By Kannadaprabha NewsFirst Published Aug 19, 2022, 6:46 AM IST
Highlights

ವಿಚಾರಣೆ ವೇಳೆ ಹಣಕ್ಕಾಗಿ ಹಸೀನಾಳನ್ನು ಹತ್ಯೆಗೈದಿದ್ದಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿ 

ಬೆಂಗಳೂರು(ಆ.19):  ತನ್ನ ಆಟೋದಲ್ಲಿ ಬಾಡಿಗೆ ಬಂದ ಮಹಿಳಾ ಪ್ರಯಾಣಿಕೆಯನ್ನು ಕೇವಲ .3,500ಕ್ಕೆ ಕೊಲೆಗೈದು ಪರಾರಿಯಾಗಿದ್ದ ಆಟೋ ಚಾಲಕನೊಬ್ಬನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂಜನಾಪುರದ ಇಮ್ರಾನ್‌ ಬಂಧಿತನಾಗಿದ್ದು, ಆ.10ರಂದು ಗಾರ್ವೆಬಾವಿಪಾಳ್ಯದ ಹಸೀನಾ (38)ಳನ್ನು ಕೊಲೆ ಮಾಡಿ ಪರಾರಿಯಾಗಿದ್ದ. ತನಿಖೆ ಕೈಗೆತ್ತಿಕೊಂಡ ಮೈಕೋ ಲೇಔಟ್‌ ಎಸಿಪಿ ಎನ್‌.ಪ್ರತಾಪ್‌ ರೆಡ್ಡಿ ನೇತೃತ್ವದ ತಂಡವು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರಿಚಯಸ್ಥ ಆಟೋ ಚಾಲಕ:

ಗಾರ್ವೆಬಾವಿಪಾಳ್ಯದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ ಹಸೀನಾ, ಆಗಾಗ್ಗೆ ಜೆ.ಪಿ.ನಗರದ ಮಾರೇನಹಳ್ಳಿಗೆ ‘ಕೆಲವರ’ ಭೇಟಿಗಾಗಿ ಬರುತ್ತಿದ್ದಳು. ಕೆಲವು ಬಾರಿ ಇಮ್ರಾನ್‌ ಆಟೋದಲ್ಲೇ ಆಕೆ ಪ್ರಯಾಣಿಸಿದ್ದಳು. ಇದರಿಂದ ಪರಸ್ಪರ ಪರಿಚಿತರಾಗಿದ್ದರು. ಹೊರಗೆ ಕೆಲಸವಿದ್ದಾಗ ಇಮ್ರಾನ್‌ ಆಟೋದಲ್ಲಿ ಆಕೆ ತೆರಳುತ್ತಿದ್ದಳು.

Belagavi: ಸವದತ್ತಿಯಲ್ಲಿ ಕತ್ತು ಕೊಯ್ದು ಪತ್ನಿ ಹತ್ಯೆಗೈದ ಪಾಪಿ ಪತಿ!

ಹೀಗಿರುವಾಗ ಆ.10ರಂದು ಮಧ್ಯರಾತ್ರಿ ಜೆ.ಪಿ.ನಗರದ ಮಾರೇನಹಳ್ಳಿಯಲ್ಲಿ ಹಸೀನಾ ಆಟೋ ಹತ್ತಿದ್ದಾಳೆ. ಆಗ ಮಾರ್ಗ ಮಧ್ಯೆ ಹೋಟೆಲ್‌ನಲ್ಲಿ ಆಮ್ಲೆಟ್‌ ತರುವಂತೆ ಇಮ್ರಾನ್‌ಗೆ .500 ನೀಡಿದ್ದಾಳೆ. ಆ ವೇಳೆ ಆಕೆ ಕೈಯಲ್ಲಿದ್ದ ಪರ್ಸ್‌ನಲ್ಲಿ ಹಣ ನೋಡಿದ ಆರೋಪಿ, ಹಸೀನಾ ಬಳಿ ತುಂಬಾ ಹಣವಿದೆ ಎಂದು ಭಾವಿಸಿದ್ದಾನೆ. ಆಮ್ಲೆಟ್‌ ತಂದು ಕೊಟ್ಟನಂತರ ತನಗೆ ಹಣಕಾಸಿನ ಕಷ್ಟವಿದೆ. ಸಾಲ ಕೊಡುವಂತೆ ಆಕೆಯನ್ನು ಇಮ್ರಾನ್‌ ಕೇಳಿದ್ದಾನೆ. ಈ ಮಾತಿಗೆ ಹಸೀನಾ, ‘ನನ್ನ ಬಳಿ ಹಣವಿಲ್ಲ. ನನಗೆ ಮನೆ ಬಾಡಿಗೆ ಕಟ್ಟಲು ಕಷ್ಟವಾಗಿದೆ’ ಎಂದಿದ್ದಾಳೆ. ಬಳಿಕ ಮಡಿವಾಳ ಕೆರೆ ಬಳಿಗೆ ಕರೆತಂದ ಆರೋಪಿ, ಹಸೀನಾಳಿಂದ ಬಲವಂತವಾಗಿ ಹಣ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಭೀತಿಗೊಂಡ ಆಕೆ, ತಾನು ಪೊಲೀಸರಿಗೆ ದೂರು ಕೊಡುವುದಾಗಿ ಹೆದರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ, ಆಕೆಯನ್ನು ಜೋರಾಗಿ ದೂಡಿದ್ದಾನೆ. ಈ ಹಂತದಲ್ಲಿ ಕೆಳಗೆ ಬಿದ್ದ ಹಸೀನಾ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ. ಮರುದಿನ ಕೆರೆ ಬಳಿ ಅಪರಿಚಿತ ಮೃತದೇಹ ಕಂಡು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಚಪ್ಪಲಿಯ ಸುಳಿವು

ಹತ್ಯೆ ಎಸಗಿದ ಬಳಿಕ ತಪ್ಪಿಸಿಕೊಳ್ಳುವ ಭರದಲ್ಲಿ ಘಟನಾ ಸ್ಥಳದಲ್ಲೇ ಚಪ್ಪಲಿಗಳನ್ನು ಬಿಟ್ಟು ಆರೋಪಿ ಹೋಗಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಆಗ ಜೆ.ಪಿ.ನಗರ ಮಾರ್ಗದ ಹೋಟೆಲ್‌ ಹಾಗೂ ಬಾರ್‌ನಲ್ಲಿ ಸಿಕ್ಕಿದ ಸಿಸಿ ಟಿವಿ ಕ್ಯಾಮೆರಾದಲ್ಲಿ ವ್ಯಕ್ತಿಯೊಬ್ಬ ಧರಿಸಿದ್ದ ಚಪ್ಪಲಿಗಳಿಗೂ ಘಟನಾ ಸ್ಥಳದಲ್ಲಿ ಪತ್ತೆಯಾದ ಚಪ್ಪಲಿಗಳಿಗೂ ಸಾಮ್ಯತೆ ಕಂಡು ಬಂದಿತು. ಆ ಶೂ ರೀತಿಯ ಚಪ್ಪಲಿಗಳಾಗಿದ್ದರಿಂದ ಗಮನ ಸೆಳೆದವು. ಈ ಸುಳಿವು ಆಧರಿಸಿ ಬೆನ್ನಹತ್ತಿದ್ದಾಗ ಆರೋಪಿ ಸಿಕ್ಕಿಬಿದ್ದ

ಬಳಿಕ ವಿಚಾರಣೆ ವೇಳೆ ಹಣಕ್ಕಾಗಿ ಹಸೀನಾಳನ್ನು ಹತ್ಯೆಗೈದಿದ್ದಾಗಿ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದೆ. ಕೊಲೆ ಮಾಡಿದ ಬಳಿಕ ಮೃತಳ ಪರ್ಸ್‌ನಲ್ಲಿ 3500 ರು ಹಾಗೂ ಮೊಬೈಲ್‌ ಅನ್ನು ಆರೋಪಿ ತೆಗೆದುಕೊಂಡು ಹೋಗಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 

click me!