Bitcoin Scam| 4ನೇ ಕ್ಲಾಸ್‌ನಲ್ಲೇ ಹ್ಯಾಕಿಂಗ್‌ ಕಲಿತಿದ್ದ ಶ್ರೀಕಿ..!

By Kannadaprabha News  |  First Published Nov 12, 2021, 8:51 AM IST

*  ಶಾಲಾ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಸಹಪಾಠಿಗಳಿಗೆ ಅಂಕ, ಹಾಜರಾತಿ ನೀಡಿದ್ದೆ
*  ಪೇಪಾಲ್‌ ಹಣ ವರ್ಗಾವಣೆ ತಾಣದಲ್ಲಿ ಮೊದಲ ಹ್ಯಾಕ್‌ ಮಾಡಿ ಹಣ ಗಳಿಸಿದ್ದೆ
*  ಪೊಲೀಸರಿಗೆ ಬಿಟ್‌ಕಾಯಿನ್‌ ಶ್ರೀಕಿ 30 ಪುಟಗಳ ಹೇಳಿಕೆ
 


ಬೆಂಗಳೂರು(ನ.12): ಪ್ರಸ್ತುತ ರಾಜಕೀಯವಾಗಿ(Politics) ಭಾರಿ ಸದ್ದು ಮಾಡುತ್ತಿರುವ ಬಿಟ್‌ ಕಾಯಿನ್‌ ಹಗರಣದ(Bitcoin Scam) ಸೂತ್ರಧಾರ ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌(International Hacker) ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ(Shreeki) ಬಾಲ್ಯದಲ್ಲೇ ತಾನು ಹ್ಯಾಕರ್‌ ಆಗಿ ರೂಪುಗೊಂಡಿದ್ದೆ ಎಂಬ ಸಂಗತಿಯನ್ನು ಸಿಸಿಬಿ(CCB) ವಿಚಾರಣೆ ಮುಂದೆ ಸ್ವತಃ ಬಾಯ್ಬಿಟ್ಟಿದ್ದಾನೆ.

ನನಗೆ ಬಾಲ್ಯದಿಂದಲೇ ತಾಂತ್ರಿಕತೆ ಬಗ್ಗೆ ಹೆಚ್ಚಿನ ಒಲವಿತ್ತು. ಈ ಆಸಕ್ತಿಯಿಂದ 4ನೇ ತರಗತಿಯಲ್ಲಿದ್ದಾಗಲೇ ನಾನು ಹ್ಯಾಕರ್‌(Hacker) ತಂಡವನ್ನು ಸೇರಿದ್ದೆ. ಪ್ರೌಢ ಶಾಲೆಯಲ್ಲಿ ಶಾಲಾ ವೆಬ್‌ಸೈಟ್‌ ಹ್ಯಾಕ್‌(Website Hack) ಮಾಡಿ ಸಹಪಾಠಿಗಳಿಗೆ ಅಂಕಗಳು ಹಾಗೂ ಹಾಜರಾತಿ ನೀಡುತ್ತಿದ್ದೆ ಎಂದು 30 ಪುಟಗಳ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಶ್ರೀಕಿ ಉಲ್ಲೇಖಿಸಿದ್ದಾನೆ.

Latest Videos

undefined

Bitcoin Scam| ಶ್ರೀಕಿ ಜತೆ ಕಾಂಗ್ರೆಸ್‌ ನಾಯಕರ ಮಕ್ಕಳ ನಂಟು, ಡಿಕೆಶಿ ಮೊದಲ ಪ್ರತಿಕ್ರಿಯೆ

ಹೇಳಿಕೆ ಪೂರ್ಣ ವಿವರ ಹೀಗಿದೆ:

ಬೆಂಗಳೂರಿನ(Bengaluru) ಜಯನಗರದ ನಿವಾಸಿ, ಖಾಸಗಿ ಲೆಕ್ಕಪರಿಶೋಧಕ ಗೋಪಾಲ್‌ ರಮೇಶ್‌ ಮತ್ತು ಕೌಶಲ್ಯ ದಂಪತಿ ಪುತ್ರ ನಾನು. ಕಮಲಾ ಗಾರ್ಡನ್‌ನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕುಮಾರನ್ಸ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ ಓದಿದ್ದೇನೆ. ನನಗೆ ಮೊದಲಿನಿಂದಲೂ ತಾಂತ್ರಿಕತೆ ಬಗ್ಗೆ ಕುತೂಹಲ ಹಾಗೂ ಸೆಳೆತ ಇತ್ತು. 4ನೇ ತರಗತಿ ಓದುವಾಗಲೇ ನನಗೆ ವೆಬ್‌ ತಂತ್ರಜ್ಞಾನ, ಜಾವಾ, ರಿವರ್ಸ್‌ ಎಂಜಿನಿಯರಿಂಗ್‌ ಹಾಗೂ ಗೇಮ್‌ ಅಭಿವೃದ್ಧಿ ಹೀಗೆ ತಂತ್ರಜ್ಞಾನದ ಕುರಿತು ತಿಳಿದುಕೊಂಡಿದ್ದೆ. ಆಗಲೇ ನನಗೆ ಇಂಟರ್‌ನೆಟ್‌ ರೆಲೇ ಚಾಟ್‌ (IRS) ಪ್ರೋಗ್ರಾಮ್‌ ಮೂಲಕ ಪರಿಣತ ಹ್ಯಾಕರ್‌ಗಳ ಸಂಪರ್ಕ ಬೆಳೆಯಿತು ಎಂದು ಶ್ರೀಕಿ ಹೇಳಿಕೊಂಡಿದ್ದಾನೆ.

ತರುವಾಯ ಅಂತಾರಾಷ್ಟ್ರೀಯ ಹ್ಯಾಕರ್‌ಗಳು(International Hackers) ಒಗ್ಗೂಡಿ ಕಟ್ಟಿದ್ದ ‘ಬ್ಲ್ಯಾಕ್‌ ಹ್ಯಾಟ್‌’(Black Hat) ತಂಡದ ಸದಸ್ಯನಾಗಿದ್ದೆ. 4ನೇ ತರಗತಿಯಿಂದ 10ನೇ ತರಗತಿವರೆಗೂ ಆ ತಂಡದಲ್ಲಿದ್ದೆ. ಅಲ್ಲಿ ಸ್ಕ್ರಿಪ್ಟ್‌ ಕಿಡ್ಡೈ, ಡಾಟಾ ಬೇಸಸ್‌, ಎಸ್‌ಕ್ಯೂಎಲ್‌ ಇಂಜೆಕ್ಷನ್‌, ರಿಮೋಟಿ ಆಕ್ಸಸ್‌, ಸೋರ್ಸ್‌ ಕೋಡ್‌ ವಿಶ್ಲೇಷಣೆ(Source code Analysis)ಬಗ್ಗೆ ಕಲಿತುಕೊಂಡೆ. ನನಗೆ 8ನೇ ತರಗತಿಯಲ್ಲಿದ್ದಾಗಲೇ ಐಆರ್‌ಸಿಯ ‘ಬ್ಲ್ಯಾಕ್‌ ಹ್ಯಾಟ್‌’ ತಂಡದ ಆಡ್ಮಿನಿಸ್ಪ್ರೇಟರ್‌ ಆಗಿ ಬಡ್ತಿ ಸಿಕ್ಕಿತು. ಆಗ ನಾನು ರೋಸ್‌/ಬಿಗ್‌ ಬಾಸ್‌ ಎಂಬ ಅನಾಮಧೇಯ ಹೆಸರಿನಲ್ಲಿ ತಂಡವನ್ನು ನಿರ್ವಹಿಸಿದೆ. ಆದರೆ ತಂಡದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ತಂಡ ಬರ್ಕಾಸ್ತುಗೊಂಡಿತು. ಕೊನೆಗೆ ನಾನೇ ಸ್ವತಂತ್ರ ಹ್ಯಾಕಿಂಗ್‌ ಶುರು ಮಾಡಿದೆ ಎಂದು ತಿಳಿಸಿದ್ದಾನೆ.

ನನ್ನ ಆಸ್ಟ್ರೇಲಿಯಾದ(Australia) ಸ್ನೇಹಿತ ಶಾನೆ ಡುಪೈ ಜೊತೆ ಸೇರಿ ಪೇಪಾಲ್‌(Paypal) ಹಣ ವರ್ಗಾವಣೆ ಜಾಲತಾಣದ ಖಾತೆಯೊಂದನ್ನು ಹ್ಯಾಕ್‌ ಮಾಡಿದ್ದು ನನ್ನ ಪ್ರಥಮ ಸ್ವತಂತ್ರ ಹ್ಯಾಕಿಂಗ್‌ ಕೃತ್ಯವಾಗಿತ್ತು. ಇದಾದ ಬಳಿಕ ಆನ್‌ಲೈನ್‌ ಗೇಮಿಂಗ್‌(Online Gaming) ಆ್ಯಪ್‌ಗಳನ್ನು ಹ್ಯಾಕ್‌ ಮಾಡಿ ಹಣ ಕದ್ದು ಪೇಪಾಲ್‌ ಖಾತೆಗೆ ವರ್ಗಾಯಿಸುತ್ತಿದ್ದೆ. ವಿವಿ ಪುರ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದಾಗಲೂ ಹ್ಯಾಕಿಂಗ್‌ ನಡೆಸಿ ಹಣ ಸಂಪಾದಿಸಿ ಮೋಜು- ಮಸ್ತಿ ಮಾಡುತ್ತಿದ್ದೆ. ಆಗಲೇ ನನಗೆ ಮದ್ಯ ಹಾಗೂ ಮಾದಕ ವಸ್ತು ಚಟ ಬೆಳೆಯಿತು. ಇದೇ ವೇಳೆಯಲ್ಲೇ ಡಾರ್ಕ್ನೆಟ್‌(Darknet) ಮೂಲಕ ಬಿಟ್‌ ಕಾಯಿನ್‌ ವ್ಯವಹಾರದ ತಿಳಿಯಿತು. ಆಗ ಹಣ ವಿನಿಮಯ ಏಜೆನ್ಸಿಗಳ ಜಾಲತಾಣಗಳನ್ನೇ ಹ್ಯಾಕ್‌ ಮಾಡಿ ಅಪಾರ ಪ್ರಮಾಣದ ಬಿಟ್‌ ಕಾಯಿನ್‌ ಕದಿಯಲಾರಂಭಿಸಿದೆ ಎಂದು ಹೇಳಿದ್ದಾನೆ.

ಬಿಟ್‌ ಕಾಯಿನ್‌ ಶ್ರೀಕಿ ಭಾರೀ ಐಷಾರಾಮಿ ಜೀವನ!

ಯುಬಿ ಸಿಟಿ ಗಲಾಟೆಗೂ ಬಿಟ್ ಕಾಯಿನ್ ಮೂಲ ಕಾರಣ

ದೊಡ್ಡ ಸುದ್ದಿಗೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣ (Bitcoin Scam) ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ ಸಮರಕ್ಕೆ ವೇದಿಕೆಯಾಗಿದೆ.  ಕಾಂಗ್ರೆಸ್ ನಾಯಕರು ಕಾರಣವಿಲ್ಲದೆ ಬಿಜೆಪಿ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಯಾರೇ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಾಂಗ್ರೆಸ್ಸಿಗರು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
 

click me!