SC ಮಕ್ಕಳಿಗೆ ತಿಂಡಿ, ಚಾಕಲೇಟ್‌ ಮಾರಾಟ ನಿಷೇಧ: ಅಂಗಡಿಯವ ಸೇರಿ ಇಬ್ಬರ ಬಂಧನ: ವಿಡಿಯೋ ವೈರಲ್

By Suvarna NewsFirst Published Sep 20, 2022, 7:45 PM IST
Highlights

Crime News: ಪರಿಶಿಷ್ಟ ಜಾತಿಗೆ ಸೇರಿದ ಕೆಲವು ಶಾಲಾ ಮಕ್ಕಳನ್ನು ಅಂಗಡಿಗೆ ಭೇಟಿ ನೀಡದಂತೆ ಕೇಳಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ 

ತಮಿಳುನಾಡು (ಸೆ. 20): ಪರಿಶಿಷ್ಟ ಜಾತಿಗೆ ಸೇರಿದ ಕೆಲವು ಶಾಲಾ ಮಕ್ಕಳನ್ನು ಅಂಗಡಿಗೆ ಭೇಟಿ ನೀಡದಂತೆ ಕೇಳಿದ ಆರೋಪದ ಮೇಲೆ ಅಂಗಡಿ ಮಾಲೀಕ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಘಟನೆ ತಮಿಳುನಾಡಿನ (Tamil Nadu) ತೆಂಕಶಿ ಜಿಲ್ಲೆಯ ಸಂಕರನ್‌ಕೋಯಿಲ್ ಬಳಿಯ ಪಂಜಕುಲಂ ಗ್ರಾಮದಲ್ಲಿ ನಡೆದಿದೆ. ಎಸ್‌ಸಿ ಸಮುದಾಯಕ್ಕೆ ಸೇರಿದ ಕೆಲವು ಮಕ್ಕಳಿಗೆ ಅಂಗಡಿಯವ ತಿಂಡಿ ಮತ್ತು ಚಾಕೊಲೇಟ್‌ಗಳನ್ನು ನಿರಾಕರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆದ ನಂತರ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಎಸ್‌ಸಿ ಸಮುದಯಾಕ್ಕೆ ಬಹಿಷ್ಕಾರ?: ಸರ್ಕಾರಿ ಶಾಲೆಯ ಕೆಲವು ಮಕ್ಕಳು ಸಣ್ಣಪುಟ್ಟ ಅಂಗಡಿಯಲ್ಲಿ ತಿಂಡಿ ಮತ್ತು ಮಿಠಾಯಿಗಳನ್ನು ಕೇಳುತ್ತಿರುವುದನ್ನು ವೀಡಿಯೊ ಕ್ಲಿಪ್ಪಿನಲ್ಲಿ ಕಾಣಬಹುದು. ಮಕ್ಕಳು ಕೇಳಿದಾಗ ಅಂಗಡಿಯವ ತಿಂಡಿ ಮತ್ತು ಮಿಠಾಯಿಗಳನ್ನು ನೀಡಲು ನಿರಾಕರಿಸಿದ್ದು, ಅವರ ಬೀದಿಯಿಂದ ಯಾರಿಗೂ ಸಾಮಾನು ನೀಡಲಾಗುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ಮಕ್ಕಳಿಗೆ ತಿಳಿಸಿದ್ದಾನೆ. ಅಲ್ಲದೇ ಈ ವಿಷಯವನ್ನು ತಮ್ಮ ಪೋಷಕರಿಗೂ ತಿಳಿಸಲು ಹೇಳಿದ್ದಾನೆ.

 

It is a pity to see the faces of those children and it is hard to feel that even though times change, caste untouchability does not change🤷🏻‍♂️ pic.twitter.com/Sk2c58V69n

— Saha archunan (@sahaarchunan)

 

ಗ್ರಾಮಸಭೆಯಲ್ಲಿ ನಿರ್ಬಂಧ ಹೇರಲು ತೀರ್ಮಾನಿಸಲಾಗಿದ್ದು, ಗ್ರಾಮದ ಇನ್ನೊಂದು ಭಾಗದ ಅಂಗಡಿಗಳಲ್ಲಿ ಮಾತ್ರ ಖರೀದಿಸಬೇಕು ಎಂದ ಆತ ಹೇಳಿದ್ದಾನೆ. ಅಂಗಡಿ ಮಾಲೀಕ ಮಹೇಶ್ವರನ್ ಅವರೇ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಕೆವಿ ನಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಯಾದವ ಸಮುದಾಯದ ಪ್ರಮುಖರೂ ಆಗಿರುವ ಅಂಗಡಿ ಮಾಲೀಕ ಮಹೇಶ್ವರನ್ ಮತ್ತು ಅದೇ ಜಾತಿಯ ಇನ್ನೊಬ್ಬ ವ್ಯಕ್ತಿ ರಾಮಚಂದ್ರ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ

ಸಮುದಾಯಗಳ ನಡುವೆ ಮನಸ್ತಾಪ:  ಗ್ರಾಮದ ಎರಡು ಜಾತಿಗಳ ಸದಸ್ಯರ ನಡುವೆ ಕೆಲವು ಜಗಳದ ಹಿಂದೆ ಮೂರ್ತಿಯ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮದ ಯಾದವ ಸಮುದಾಯ ಮತ್ತು ಎಸ್‌ಸಿ ಸಮುದಾಯದ ಜನರು 2020ರಲ್ಲಿ ಜಮೀನು ಸಮಸ್ಯೆಗೆ ಸಂಬಂಧಿಸಿದಂತೆ ವಿವಾದ ಭುಗಿಲೆದಿತ್ತು, ನಂತರ ಎರಡೂ ಸಮುದಾಯಗಳ ಸದಸ್ಯರು ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು ಎನ್ನಲಾಗಿದೆ.

ಇತ್ತೀಚೆಗಷ್ಟೇ ಯಾದವ ಸಮುದಾಯದ ಕೆ ರಾಮಕೃಷ್ಣನ್ ಎಂಬ ವ್ಯಕ್ತಿ ಅಗ್ನಿವೀರ್ ಯೋಜನೆಯಡಿ ಸೇನಾ ಉದ್ಯೋಗಕ್ಕೆ ಆಯ್ಕೆಯಾಗಿದ್ದರು. ಆದರೆ ಅವರ ವಿರುದ್ಧದ ಪ್ರಕರಣದಿಂದಾಗಿ ಅವರು ಸೇನಾ ಕೆಲಸಕ್ಕೆ ಸೇರಲು ಸಾಧ್ಯವಾಗಲಿಲ್ಲ. ನಂತರ ಮೇಲ್ಜಾತಿಯ ಸದಸ್ಯರು ಪ್ರಕರಣವನ್ನು ಹಿಂಪಡೆಯುವಂತೆ ಎಸ್‌ಸಿ ಸದಸ್ಯರಿಗೆ ಮನವಿ ಮಾಡಿದರು ಆದರೆ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು ಎನ್ನಲಾಗಿದೆ.

ಪ್ರೀತಿಸಿ ಮದುವೆಯಾದ ಯುವ ಪ್ರೇಮಿಗಳಿಗೆ ಜಾತಿ ಅಡ್ಡಿ: ರಕ್ಷಣೆಗಾಗಿ ಪೊಲೀಸರ ಮೊರೆ

ಕೆಲವು ದಿನಗಳ ಹಿಂದೆ, ರಾಮಕೃಷ್ಣನ್ ಅವರ ಕುಟುಂಬ ಸದಸ್ಯರು ಗ್ರಾಮ ಸಭೆ ಮುಂದೆ ಈ ಸಮಸ್ಯೆ ಹೇಳಿಕೊಂಡಿದ್ದಾರೆ. ಅಲ್ಲಿ ಅವರ ಸಮುದಾಯದ ಕೆಲವು ಸದಸ್ಯರು ಭಾಗವಹಿಸಿದ್ದರು ಮತ್ತು ಎಸ್‌ಸಿ ಸಮುದಾಯಕ್ಕೆ ಸೇರಿದ ಜನರಿಗೆ ಸರಕುಗಳನ್ನು ಮಾರಾಟ ಮಾಡದಿರುವ ನಿರ್ಧಾರವನ್ನು ಅಲ್ಲಿ ತೆಗೆದುಕೊಳ್ಳಲಾಯಿತು ಎಂದು ವರದಿಗಳು ತಿಳಿಸಿವೆ. 

ಇದೇ ವೇಳೆ ಆರೋಪಿ ಅಂಗಡಿಯನ್ನು ತಹಶೀಲ್ದಾರ್ ಅವರು ತಾತ್ಕಾಲಿಕವಾಗಿ ಸೀಲ್ ಮಾಡಿದ್ದಾರೆ ಎಂದು ತೆಂಕಶಿ ಜಿಲ್ಲಾಧಿಕಾರಿ ಪಿ.ಆಕಾಶ ತಿಳಿಸಿದ್ದಾರೆ. "ಕರಿವಾಲಂವಂತನಲ್ಲೂರು ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 153 ಎ (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಅವರನ್ನು ಬಂಧಿಸಿದ್ದಾರೆ" ಎಂದು ವರದಿಗಳು ತಿಳಿಸಿವೆ.

click me!