UP Honour Killing: ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ
ಉತ್ತರ ಪ್ರದೇಶದ ಶಾಮ್ಲಿ ಬಳಿ ಮರ್ಯಾದಾ ಹತ್ಯೆ ಘಟನೆ ವರದಿಯಾಗಿದೆ. ಈ ಸಂಬಂಧ ಆರೋಪಿ ರೈತ ಪ್ರಮೋದ್ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಮರ್ಯಾದಾ ಹತ್ಯೆ ಪ್ರಕರಣ (Honour Killing) ವರದಿಯಾಗಿದೆ. ಬೇರೆ ಜಾತಿಯ (Caste) ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ 18 ವರ್ಷದ ಹುಡುಗಿಯನ್ನು ಆಕೆಯ 56 ವರ್ಷದ ತಂದೆ ಕೊಂದಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಶಾಮ್ಲಿ ಬಳಿಯ ಗ್ರಾಮದಲ್ಲಿ ಈ ಭಯಾನಕ ಘಟನೆ ಸಂಭವಿಸಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ರೈತ ಪ್ರಮೋದ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ರೈತ ಪ್ರಮೋದ್ ಕುಮಾರ್ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು ಆಕೆಯ ಮೃತ ದೇಹಕ್ಕೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಶಾಮ್ಲಿಯ ಪೊಲೀಸ್ ಸೂಪರಿಂಟೆಂಡೆಂಟ್ ಅಭಿಷೇಕ್ ಹೇಳಿದರು.
ರೈತ ಪ್ರಮೋದ್ ಕುಮಾರ್ ಮೇಲ್ಜಾತಿಯ (Upper Caste) ವ್ಯಕ್ತಿಯಾಗಿದ್ದು, ಆದರೆ ತನ್ನ ಮಗಳು - ಕಾಜಲ್ ಹಿಂದುಳಿದ ಜಾತಿಯ (Backward Caste) ಯುವಕ ಅಜಯ್ ಕಶ್ಯಪ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದ್ದರಿಂದ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದರು. ತನ್ನ ಮಗಳಿಗೆ ಅಜಯ್ ಕಶ್ಯಪ್ ಜೊತೆ ಬ್ರೇಕ್ ಅಪ್ ಮಾಡಲು ಹಲವು ಬಾರಿ ಎಚ್ಚರಿಕೆ ನೀಡಿದರೂ ಅವಳು ಕೇಳಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, 20 ವರ್ಷದ ಯುವಕ ಅಜಯ್ ಕಶ್ಯಪ್ ಜೊತೆಗೆ ಅವರ ಮಗಳು ಕುಟುಂಬಕ್ಕೆ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದಳು. ಈ ಹಿನ್ನೆಲೆ, ಪ್ರಮೋದ್ ಕುಮಾರ್ ಮಗಳನ್ನು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ಝಿಝಾನಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ (Station House Officer) (ಎಸ್‌ಎಚ್‌ಒ) ಪಂಕಜ್ ತ್ಯಾಗಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಅಂತರ್ಜಾತಿ ವಿವಾಹ, ಅಳಿಯನನ್ನೇ ಗುಂಡಿಕ್ಕಿ ಕೊಂದ ಮಾವ!
ಸಾಮಾಜಿಕ ಕಳಂಕದ (Social Stigma) ಭಯದಿಂದ, ರೈತ ಪ್ರಮೋದ್ ಕುಮಾರ್ ತನ್ನ ಮಗಳನ್ನು ಸೆಪ್ಟೆಂಬರ್ 9 ರಂದು ಯಾವುದೋ ಕೆಲಸ ಮಾಡುವ ನೆಪದಲ್ಲಿ ರಾತ್ರಿ ಯಾರದ್ದೋ ಹೊಲಕ್ಕೆ ಕರೆದೊಯ್ದರು ಮತ್ತು ಆಕೆಯನ್ನು ಕತ್ತು ಹಿಸುಕಿ ಬಳಿಕ ಮಗಳ ಶವವನ್ನು ಸುಟ್ಟು ಹಾಕಿದರು ಎಂದು ತಿಳಿದುಬಂದಿದೆ. ಮನೆಗೆ ಮರಳಿದ ನಂತರ, ಮಗಳನ್ನು ಪಾಣಿಪತ್‌ನಲ್ಲಿ ತನ್ನ ಸಹೋದರನೊಂದಿಗೆ ಬಿಟ್ಟು ಹೋಗಿರುವುದಾಗಿ ಪ್ರಮೋದ್ ಕುಮಾರ್ ತನ್ನ ಕುಟುಂಬಕ್ಕೆ ತಿಳಿಸಿದರು. ಆದರೆ, ಶುಕ್ರವಾರ ರಾತ್ರಿ ಹೊಲದಲ್ಲಿ ಶವ ಸುಟ್ಟು ಕರಕಲಾಗಿರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿತ್ತು. ತನ್ನ ಆಸ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆ ಹೊಲದ ಮಾಲೀಕರು ತಿಳಿದಾಗ, ಅವರು ಕೂಡ ಸ್ಥಳಕ್ಕೆ ಹೋದರು ಎಂದು ವರದಿಯಾಗಿದೆ.
.
ನಂತರ, ಪೊಲೀಸ್ ತಂಡ ಆಗಮಿಸಿದಾಗ, ಅವರು ಚಿತಾಭಸ್ಮದಿಂದ ಮೂಳೆಗಳನ್ನು ಹೊರತೆಗೆದರು. ಶ್ವಾನದಳ (Dog Squad) ಹಾಗೂ ವಿಧಿವಿಜ್ಞಾನ ತಜ್ಞರನ್ನೂ (Forensic Specialists) ಕರೆಸಲಾಗಿತ್ತು. ಈ ವೇಳೆ ರೈತ ಪ್ರಮೋದ್ ಕುಮಾರ್ ಮಗಳನ್ನು ಕೊಲೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೈಸೂರು; ಬೇರೆ ಜಾತಿ ಯುವಕನ ಪ್ರೀತಿಸುತ್ತಿದ್ದ ಮಗಳ ಕೊಚ್ಚಿ ಕೊಂದ ತಂದೆ