
ಟೆಕ್ಸಾಸ್ (ಮೇ. 25): ಅಮೆರಿಕದಲ್ಲಿ ಮತ್ತೊಮ್ಮೆ ಶೂಟರ್ ಗಳ (Shooter)ಅಟ್ಟಹಾಸ ಮುಂದುವರಿದಿದೆ. ಈ ಬಾರಿ ಟೆಕ್ಸಾಸ್ ನಲ್ಲಿ (exas) ಶೂಟರ್ ನಿಂದ ನಡೆದ ಭೀಕರ ಗುಂಡಿನ ದಾಳಿಯಲ್ಲಿ 18 ಅಮಾಯಕ ಮಕ್ಕಳು ಸೇರಿ ಒಟ್ಟು 21 ಮಂದಿ ದಾರುಣ ಸಾವು ಕಂಡಿದ್ದಾರೆ.
ಟೆಕ್ಸಾಸ್ ನ ಪ್ರಾಥಮಿಕ ಶಾಲೆಗೆ (elementary school ) ನುಗ್ಗಿದ 18 ವರ್ಷದ ಶೂಟರ್ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದರಿಂದ 18 ಮಕ್ಕಳು, ಮೂವರು ಶಿಕ್ಷಕರು ಸೇರಿ 21 ಮಂದಿ ದಾರುಣ ಸಾವು ಕಂಡಿದ್ದಾರೆ. ಅದರ ಬೆನ್ನಲ್ಲಿಯೇ ಶೂಟರ್ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಟೆಕ್ಸಾಸ್ ನ ಗವರ್ನರ್ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಹಿಂದೆಯೂ ಕೂಡ ಇಂಥದ್ದೇ ಘಟನೆಗಳು ಸಾಕಷ್ಟು ಬಾರಿ ನಡೆದಿವೆ.
"
ಟೆಕ್ಸಾಸ್‌ನ ಉವಾಲ್ಡೆ ನಗರದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ (Texas Governor Greg Abbott ) ಮಾಹಿತಿ ನೀಡಿದ್ದಾರೆ. ಅಲ್ಲಿ, 18 ವರ್ಷದ ಶೂಟರ್, ರಾಬ್ ಎಲಿಮೆಂಟರಿ ಶಾಲೆಯ (Robb Elementary School) ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗರ್ವನರ್ ನೀಡಿರುವ ಖಚಿತ ಮಾಹಿತಿಯ ಪ್ರಕಾರ 18 ಮಕ್ಕಳು ಹಾಗೂ ಮೂವರು ಶಿಕ್ಷಕರು ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿ ನಡೆಸಿದ ನಂತರ ಆರೋಪಿ ಶೂಟರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳವಾರ ಮಧ್ಯಾಹ್ನದ ವೇಳೆಗೆ 18ರ ಹರೆಯದ ಶೂಟರ್ ಇದ್ದಕ್ಕಿದ್ದಂತೆ ಶಾಲಾ ಆವರಣಕ್ಕೆ ಪ್ರವೇಶಿಸಿದ್ದ ಎನ್ನುವುದು ಸಿಸಿಟಿವಿ ಮೂಲಕ ಪತ್ತೆಯಾಗಿದೆ. ಶೂಟರ್ ಬಗ್ಗೆ ತಿಳಿದ ಬೆನ್ನಲ್ಲಿಯೇ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿಕೊಡಲಾಗಿತ್ತು. ಅಷ್ಟರಲ್ಲಿಯೇ ಶೂಟರ್ ತನ್ನ ಅಟ್ಟಹಾಸ ಮೆರೆದಿದ್ದಾನೆ. ಇದರ ಬೆನ್ನಲ್ಲಿಯೇ ಮಕ್ಕಳ ಪೋಷಕರು ಕ್ಯಾಂಪಸ್ ನತ್ತ ದೌಡಾಯಿಸಿದ್ದು, ಯಾವುದೇ ಕಾರಣಕ್ಕೂ ಪೋಷಕರನ್ನು ಕ್ಯಾಂಪಸ್ ನ ಒಳಗಡೆ ಹೋಗದಂತೆ ತಡಡೆಹಿಡಿಯಲಾಗಿದೆ.
ಶೂಟರ್ ಅನ್ನು 18 ವರ್ಷದ ಸಾಲ್ವಡಾರ್ ರೋಮಾ ಎಂದು ಅಬಾಟ್ ಮೊದಲು ಹೇಳಿದ್ದರು, ಕೊನೆಗೆ ಆತನ ಹೆಸರನ್ನು ನಂತರ ಸಾಲ್ವಡಾರ್ ರಾಮೋಸ್ ಎಂದು ಸ್ಪಷ್ಟಪಡಿಸಲಾಗಿದೆ. ಈ ಗುಂಡಿನ ದಾಳಿ ಮಾರಣಾಂತಿಕ ಎಂದು ಗ್ರೆಗ್ ಅಬಾಟ್ ಪರಿಗಣನೆ ಮಾಡಿದ್ದಾರೆ. ಉವಾಲ್ಡ ಬಹಳ ಚಿಕ್ಕ ಪಟ್ಟಣ, ದಾಳಿಕೋರ ಸಾಲ್ವಡಾರ್ ರಾಮೋಸ್ ನಡೆಸಿದ ಶಾಲೆಯಲ್ಲಿ ಕೇವಲ 600 ಮಕ್ಕಳು ಮಾತ್ರವೇ ವ್ಯಾಸಂಗ ಮಾಡುತ್ತಿದ್ದಾರೆ. 2012ರಲ್ಲಿ ಸ್ಯಾಂಡಿ ಹುಕ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಶೂಟಿಂಗ್ ಗೆ ಇದನ್ನು ಹೋಲಿಸಿದ್ದಾರೆ.
ಹಾಗಿದ್ದರೂ, ಟೆಕ್ಸಾಸ್ ಶಾಲೆಯ ಶೂಟಿಂಗ್ ಹೆಚ್ಚು ಮಾರಣಾಂತಿಕ ಮತ್ತು ಆತಂಕಕಾರಿ ಎಂದು ಅಬಾಟ್ ಪರಿಗಣನೆ ಮಾಡಿದ್ದಾರೆ. ದಾಳಿಕೋರ ಎರಡು, ಮೂರು ಮತ್ತು ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಅಮಾಯಕ ಪುಣಾಣಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಬಹಳ ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 2012ರಲ್ಲಿ ನಡೆದ ಘಟನೆಯಲ್ಲಿ 20 ಮಕ್ಕಳನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.
ಅಮೆರಿಕದಲ್ಲಿ 24 ಗಂಟೆಯೊಳಗೆ 2 ಕಡೆ ಶೂಟೌಟ್: 29 ಜನ ಹತ್ಯೆ!
ಸದ್ಯ ಪೊಲೀಸರು ಸ್ಥಳದಲ್ಲಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಂದಿರುವ ಮಾಹಿತಿಯ ಪ್ರಕಾರ ಈ ಗುಂಡಿನ ದಾಳಿಯಲ್ಲಿ ಹಲವು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎನ್ನುವ ಆತಂಕವಿದೆ. ಸದ್ಯಕ್ಕೆ, ಗವರ್ನರ್ ಆದೇಶದ ನಂತರ, ಟೆಕ್ಸಾಸ್‌ನ ರೇಂಜರ್‌ಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಪೊಲೀಸರಿಂದಲೂ ಸಹಕಾರ ಪಡೆಯಲಾಗುತ್ತಿದೆ.
ಅಮೆರಿಕ ಶೂಟೌಟ್: ಇಬ್ಬರು ಮಕ್ಕಳು ಸೇರಿ ನಾಲ್ವರು ಭಾರತೀಯರ ಹತ್ಯೆ
ಅದೇ ಸಮಯದಲ್ಲಿ, ಶೀಘ್ರದಲ್ಲೇ ಅಧ್ಯಕ್ಷ ಜೋ ಬಿಡೆನ್ ಈ ಗುಂಡಿನ ಘಟನೆಯ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎಂಬ ಸುದ್ದಿಯೂ ಇದೆ. ಈ ಭೀಕರ ದಾಳಿಯ ಬಗ್ಗೆ ಅಧ್ಯಕ್ಷ ಬಿಡೆನ್ ಅವರಿಗೆ ತಿಳಿಸಲಾಗಿದೆ ಎಂದು ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ