ಹೂಸ್ಟನ್‌/ವಾಷಿಂಗ್ಟನ್‌[ಆ.05]: ಅಮೆರಿಕದಲ್ಲಿ 24 ಗಂಟೆ ಅವಧಿಯಲ್ಲಿ 2 ಕಡೆ ನಡೆದ ನಡೆದ ಶೂಟೌಟ್‌ನಲ್ಲಿ 29 ಜನರು ಮೃತಪಟ್ಟು, 40ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡ ದಾರುಣ ಘಟನೆ ನಡೆದಿದೆ. ಟೆಕ್ಸಾಸ್‌ನ ವಾಲ್‌ರ್‍ಮಾರ್ಟ್‌ ಸ್ಟೋರ್‌ನಲ್ಲಿ ಪ್ಯಾಟ್ರಿಕ್‌ ಕ್ರೂಸಿಯಸ್‌ (21) ಎಂಬಾತ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ವಾಲ್‌ಮಾರ್ಟ್‌ ಸ್ಟೋರ್‌ನಲ್ಲಿ ಜನರು ಶಾಂಪಿಂಗ್‌ನಲ್ಲಿ ತೊಡಗಿದ್ದಾಗ ಕ್ರೂಸಿಯಸ್‌ ಬಂದೂಕಿನಿಂದ ಹಲವು ಸುತ್ತುಗಳಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 20 ಜನ ಸ್ಥಳದಲ್ಲೇ ಮೃತಪಟ್ಟರೆ, 26 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗುಂಡಿನ ದಾಳಿ ನಡೆಸಿದ ನಂತರ ಹಂತಕ ಕ್ರೂಸಿಯಸ್‌ ವಾಲ್‌ಮಾರ್ಟ್‌ ಹೊರಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ವಿದೇಶಿ ವಲಸಿಗರಿಂದ ಮೂಲ ಅಮೆರಿಕನ್ನರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂಬ ದ್ವೇಷ ಹೊಂದಿದ್ದ ಎನ್ನಲಾಗಿದೆ. ಅದರಲ್ಲೂ ಲ್ಯಾಟಿನ್‌ ವಲಸಿಗರೇ ಇವನ ಟಾರ್ಗೆಟ್‌ ಆಗಿದ್ದರು. ಇದನ್ನು ಸ್ವತಃ ಕ್ರೂಸಿಯಸ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ. ಸದ್ಯ ಹಂತಕನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ವಾಷಿಂಗ್ಟನ್‌ನ ಡೈಟನ್‌ ಓಹಿಯೋದ ಬಾರ್‌ವೊಂದರಲ್ಲಿ ನಡೆದ ಮತ್ತೊಂದು ಶೂಟೌಟ್‌ನಲ್ಲಿ 9 ಜನ ಹತ್ಯೆಯಾಗಿ, 16 ಜನ ಗಾಯಗೊಂಡಿದ್ದಾರೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಗುಂಡಿನ ದಾಳಿ ನಡೆದಿದೆ. ದಾಳಿ ನಡೆಸಿದವನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಹಂತಕನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಗುಂಡಿನ ದಾಳಿ ವೇಳೆ ಸ್ಥಳದಲ್ಲಿಯೇ ಪೊಲೀಸರು ಇದ್ದ ಕಾರಣ ಹಂತಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.