ಭಟ್ಕಳದಲ್ಲಿ ಅಪರಿಚಿತ ಮಹಿಳೆ ಮೃತದೇಹ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ

By Girish Goudar  |  First Published May 25, 2022, 6:00 AM IST

*   ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
*  ತಲಾನ್‌ದಲ್ಲಿ ಮಾಲಕಿ ಜಾಗದ ಗುಡ್ಡದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
*  ಪೊಲೀಸರಿಗೆ ಆರೋಪಿಗಳು ಸಿಕ್ಕಲ್ಲಿ ಮಹಿಳೆಯ ಗುರುತು ಪತ್ತೆ ಹಚ್ಚುವುದು ಸುಲಭ 


ಭಟ್ಕಳ(ಮೇ.25):  ಇಲ್ಲಿನ ಮುಠ್ಠಳ್ಳಿ ಗ್ರಾಪಂ ವ್ಯಾಪ್ತಿಯ ತಲಾನ್‌ದಲ್ಲಿ ಮಾಲಕಿ ಜಾಗದ ಗುಡ್ಡದ ನಿರ್ಜನ ಪ್ರದೇಶದಲ್ಲಿ ಸುಮಾರು 35-40 ವರ್ಷದ ಮಹಿಳೆಯೋರ್ವಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎನ್ನುವ ಬಲವಾದ ಸಂಶಯ ವ್ಯಕ್ತವಾಗಿದೆ.

ಮಂಗಳವಾರ ಬೆಳಗ್ಗೆ ಮಹಿಳೆಯೋರ್ವಳು ಬೆಟ್ಟಕ್ಕೆ ಸೊಪ್ಪು ತರಲು ಅದೇ ಸ್ಥಳದ ಹತ್ತಿರದಿಂದಲೇ ಹೋಗುತ್ತಿರುವಾಗ ಆಕೆಗೆ ವಾಸನೆ ಬಂದಿದ್ದು, ಅಕ್ಕಪಕ್ಕದಲ್ಲಿ ನೋಡುವಾಗ ಮಹಿಳೆಯ ಶವ ಕಂಡು ಬಂದಿತ್ತು. ತಕ್ಷಣ ಆಕೆಯು ಗ್ರಾಪಂ ಅಧಿಕಾರಿಯೋರ್ವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ತಿಳಿಸಿದ್ದರಿಂದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತ ದೇಹವನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಶವಾಗಾರಕ್ಕೆ ರವಾನಿಸಿದರು.
ಮಹಿಳೆಯು ಚೂಡಿದಾರ ಧರಿಸಿದ್ದು ಅಸ್ತವ್ಯವಸ್ಥವಾಗಿರುವುದು ಕಂಡು ಬಂದಿದೆ. ಮೃತ ಮಹಿಳೆಯ ಮುಖ ಭಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಪೊಲೀಸರು ಈಕೆಯ ಪತ್ತೆಗಾಗಿ ಎಲ್ಲ ಪೊಲೀಸ್‌ ಠಾಣೆಗೂ ಮಾಹಿತಿ ರವಾನಿಸಿದ್ದಾರೆ. ಶನಿವಾರ ಮಹಿಳೆಯು ಬೈಕ್‌ನಲ್ಲಿ ಬಂದು ಇಳಿದು ನಂತರ ಅಟೋವೊಂದರಲ್ಲಿ ಹೋಗಿದ್ದಾಳೆನ್ನುವ ಮಾಹಿತಿ ಹರಿದಾಡುತ್ತಿದ್ದು ಇದರ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸಬೇಕಿದೆ. ಮಹಿಳೆಯ ಕೊಲೆಯ ಹಿಂದೆ ಸ್ಥಳೀಯರು ಇದ್ದಾರೆಯೇ? ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. 

Tap to resize

Latest Videos

ಕಲ್ಗಾ (ಚಿಪ್ಪು) ತೆಗೆಯಲು ಹೋಗಿದ್ದ ಮಹಿಳೆ ನದಿ ಪಾಲು

ಪೊಲೀಸರಿಗೆ ಆರೋಪಿಗಳು ಸಿಕ್ಕಲ್ಲಿ ಮಹಿಳೆಯ ಗುರುತು ಪತ್ತೆ ಹಚ್ಚುವುದು ಸುಲಭ ಎನ್ನಲಾಗಿದೆ. ಅನುಮಾನಾಸ್ಪದ ಸಾವಾಗಿರುವುದರಿಂದ ಮೃತದೇಹವನ್ನು ಮಣಿಪಾಲದ ಆಸ್ಪತ್ರೆಗೆ ಒಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಗೊತ್ತಾಗಿದೆ. ಪಟ್ಟಣದ ಮೂಲಕವೇ ತಲಾನ್‌ಗೆ ಹೋಗಬೇಕಾಗಿರುವುದರಿಂದ ಸಿಸಿ ಟಿವಿಯಲ್ಲಿ ಪೂಟೇಜಗಳು ತನಿಖೆಗೆ ಸಹಕಾರಿಯಾಗಲಿದೆ. ಮಂಗಳವಾರ ಮಹಿಳೆಯ ಮೃತದೇಹ ತಲಾನ್‌ ಗುಡ್ಡದಲ್ಲಿ ಸಿಕ್ಕ ಹಿನ್ನೆಲೆಯಲ್ಲಿ ಡಿವೈಎಸ್ಪಿ ಕೆ ಯು ಬೆಳ್ಳಿಯಪ್ಪ, ಗ್ರಾಮಾಂತರ ಸಿಪಿಐ ಮಹಾಬಲೇಶ್ವರ ನಾಯ್ಕ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಭಟ್ಕಳದ ಮುಟ್ಟಳ್ಳಿಯ ತಲಾನ್‌ದಲ್ಲಿ ಪತ್ತೆಯಾದ ಮಹಿಳೆಯ ಮೃತದೇಹವನ್ನು ಸಂಶಯಾಸ್ಪದ ಹಿನ್ನೆಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ಒಯ್ದು ಪರೀಕ್ಷೆ ನಡೆಸುತ್ತೇವೆ. ಇದನ್ನು ಸಂಶಯಾಸ್ಪದ ಸಾವು ಎಂದು ದಾಖಲು ಮಾಡಿಕೊಂಡಿದ್ದು ತನಿಖೆ ನಡೆದಿದೆ. ಬೈಕು ಹಾಗೂ ಆಟೋದಲ್ಲಿ ಪ್ರಯಾಣಿಸಿದ ಬಗ್ಗೆಯೂ ಕೂಡಾ ಪರಿಶೀಲನೆ ನಡೆಸುತ್ತಿದ್ದೇವೆ. ಅಕ್ಕಪಕ್ಕದ ಸಿಸಿ ಟಿವಿಗಳು ಕೂಡಾ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಅಂತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಪೆನ್ನೇಕರ್‌ ತಿಳಿಸಿದ್ದಾರೆ.  
 

click me!