ವಾಷಿಂಗ್ಟನ್[ಜೂ.17]: ಇಬ್ಬರು ಮಕ್ಕಳು ಸೇರಿದಂತೆ ಭಾರತ ಮೂಲದ ಒಂದೇ ಕುಟುಂಬದ ನಾಲ್ವರನ್ನು ಮನೆಯೊಳಗೆಯೇ ಗುಂಡಿಟ್ಟು ಕೊಂದಿರುವ ಘಟನೆ ಅಮೆರಿಕಾದ ವೆಸ್ಟ್ ಡೆಸ್ ಮೊನೆಸ್‌ನಲ್ಲಿ ನಡೆದಿದೆ.

ಶನಿವಾರ ಮುಂಜಾನೆ ಈ ಘಟನೆ ನಡೆದಿದ್ದು, ಮೃತರನ್ನು ಚಂದ್ರಶೇಖರ ಸುಂಕರ(44), ಲಾವಣ್ಯ ಸುಂಕರ(41) ಹಾಗೂ ಈ ದಂಪತಿಯ 15 ಹಾಗೂ 10 ವರ್ಷದ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಮೃತರ ದೇಹದಲ್ಲಿ ಹಲವು ಗುಂಡುಗಳು ಪತ್ತೆಯಾಗಿವೆ. 

ಸುಂಕರ ದಂಪತಿಯ ಮನೆಯಲ್ಲಿ ಉಳಿದುಕೊಂಡಿದ್ದ ಅತಿಥಿಗಳು, ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ತಪಾಸಣೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಮೃತಪಟ್ಟ ಮಕ್ಕಳಿಬ್ಬರೂ ಅತ್ಯಂತ ಮೇಧಾವಿಗಳಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಶಾಲೆಯನ್ನು ಪ್ರತಿನಿಧಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ. 

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ’ಹತ್ಯೆಗೆ ಕಾರಣವೇನು ಎಮಬ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಆದರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವವರೆಗೆ ಸುಮ್ಮನಿರುವುದಿಲ್ಲ. ಈ ಪ್ರಕರಣವನ್ನು ಬೇಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.