KSOU ಕುಲಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಆಡಿಯೋ ಬಿಡುಗಡೆ ಮಾಡಿದ ನಿವೃತ್ತ ಪ್ರಾಧ್ಯಾಪರ ಮೇಲೆ ಹಲ್ಲೆಗೆ ಯತ್ನ

By BK AshwinFirst Published Sep 27, 2022, 12:31 PM IST
Highlights

ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಸಂಬಂಧ ನಿವೃತ್ತ ಪ್ರಾಧ್ಯಾಪಕರೊಬ್ಬರು ಆಡಿಯೋ ಬಿಡುಗಡೆ ಮಾಡಿದ್ದಾರೆ. 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (Karnataka State Open University) ವಿಚಾರವಾಗಿ ಮತ್ತೊಂದು ಹೈಡ್ರಾಮಾ ನಡೆದಿದೆ. ಕೆಎಸ್‌ಓಯು ಈ ಹಿಂದೆಯೂ ಸಾಕಷ್ಟು ವಿವಾದಗಳಿಗೆ ಆಗಾಗ್ಗೆ ಸುದ್ದಿಯಾಗುತ್ತಿರುತ್ತಿರುತ್ತದೆ. ಈಗ ಅದೇ ರೀತಿ, ಮತ್ತೊಂದು ಹೈಡ್ರಾಮಾ ನಡೆದಿದೆ. ಈ ಬಾರಿ ಸ್ವತ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. KSOU ಕುಲಪತಿ ಡಾ. ವಿದ್ಯಾಶಂಕರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೆಎಸ್‌ಓಯು ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಮಹದೇವ್ ಆಡಿಯೋ ಬಿಡುಗಡೆ ಮಾಡಿದ್ದಾರೆ. 

ಆದರೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್ ಪರವಾದ ಬೆಂಬಲಿಗರು ಮೈಸೂರಿನಲ್ಲಿ ನಡೆಯುತ್ತಿದ್ದ ಈ ಸುದ್ದಿಗೋಷ್ಠಿಯನ್ನೇ ತಡೆದಿದ್ದಾರೆ ಎಂದೂ ವರದಿಯಾಗಿದೆ. ನಗರದ ಪ್ರೆಸ್‌ಕ್ಲಬ್‌ಗೆ ನುಗ್ಗಿದ ಕುಲಪತಿಯ ಬೆಂಬಲಿಗರು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಮಹದೇವ್ ವಿರುದ್ಧ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಗೆ ಡಾ. ಮಹದೇವ್ ದೂರು ನೀಡಿದ್ದಾರೆ. 

ಇದನ್ನು ಓದಿ: KSOU: ಮುಕ್ತ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ..!

ಕೆಲ ದಿನಗಳ ಹಿಂದಷ್ಟೇ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದ್ದ ಘಟನೆ ಬೆಳಕಿಗೆ ಬಂದಿತ್ತು. ವಿಭಾಗದ ಸಹ ಪ್ರಾಧ್ಯಾಪಕರಾದ ತೇಜಸ್ವಿ ನವಿಲೂರು ಅವರನ್ನು ಸಿದ್ದಪಾಠಗಳನ್ನು ತಯಾರಿ ಮಾಡಿಕೊಡುವಲ್ಲಿ ವಿಳಂಬ ಮಾಡಿದರೆಂದು ಅಮಾನತು ಮಾಡಿ, ಅವರ ಕೊಠಡಿ ಸೇರಿದಂತೆ ಎಲ್ಲಾ ಶೈಕ್ಷಣಿಕ ಸೌಲಭ್ಯಗಳ ಬಳಕೆಗೆ ನಿರ್ಬಂಧ ಹೇರಲಾಗಿತ್ತು. ಸಂಶೋಧನಾ ವಿದ್ಯಾರ್ಥಿಗಳ ಮನವಿಯ ಮೇರೆಗೆ ವಿವಿ ಅವರ ಅಮಾನತು ಆದೇಶವನ್ನು ಹಿಂಪಡೆದಿತ್ತು. ಹೀಗಾಗಿ, ಸೋಮವಾರ ತೇಜಸ್ವಿ ಅವರು ಕೆಲಸಕ್ಕೆ ಬಂದು ಕೊಠಡಿಯನ್ನು ತೆರೆದಾಗ ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆ ಚೂರು ಜೊತೆಗೆ ಫೋಟೋ ಕತ್ತರಿಸಿ ವಾಮಾಚಾರ ಮಾಡಿರುವುದು ಕಂಡು ಬಂದಿತ್ತು. 

ಇದನ್ನೂ ಓದಿ: ಕೆಎಸ್‌ಒಯುಗೆ ಮಾತ್ರ ದೂರಶಿಕ್ಷಣ: ಪುನರ್‌ಪರಿಶೀಲಿಸಲು ಸಿಎಂ ಬಳಿ ಮನವಿ

 

click me!