ನಾಪತ್ತೆಯಾಗಿದ್ದ ಮೂವರು ಬಾಲಕಿಯರು ಚೆನ್ನೈನಲ್ಲಿ ಪತ್ತೆ

By Kannadaprabha NewsFirst Published Sep 27, 2022, 11:22 AM IST
Highlights
  •  ಸೆ.6ರಂದು ಚೆನ್ನೈಗೆ ತೆರಳಿದ್ದ ಬಾಲಕಿಯರು
  •  7ರಂದು ಚೆನ್ನೈ ರೈಲು ನಿಲ್ದಾಣದಲ್ಲೇ ಇದ್ದರು
  •  8ರಂದು ವಾಪಸ್‌ ಬಾಲಕಿಯರು ಬೆಂಗಳೂರಿಗೆ
  •  ನಿಲ್ದಾಣದಲ್ಲಿ ತಮ್ಮ ಪ್ರಕಟಣೆ ನೋಡಿ ಮತ್ತೆ ವಾಪಸ್‌

ಬೆಂಗಳೂರು (ಸೆ.27) : ಇಪ್ಪತ್ತು ದಿನಗಳ ಹಿಂದೆ ನಗರದ ಖಾಸಗಿ ಶಾಲಾ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಮೂವರು ಬಾಲಕಿಯರನ್ನು ಚೆನ್ನೈನಲ್ಲಿ ಪತ್ತೆ ಮಾಡಿರುವ ಪುಲಿಕೇಶಿನಗರ ಠಾಣೆ ಪೊಲೀಸರು ಸುರಕ್ಷಿತವಾಗಿ ನಗರಕ್ಕೆ ಕರೆತಂದಿದ್ದಾರೆ. ಪುಲಿಕೇಶಿನಗರದ ಖಾಸಗಿ ಶಾಲೆಯಲ್ಲಿ ಈ ಮೂವರು ಬಾಲಕಿಯರು ವ್ಯಾಸಂಗ ಮಾಡುತ್ತಿದ್ದರು. ಈ ಪೈಕಿ ಇಬ್ಬರು ಬಾಲಕಿಯರು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಮತ್ತೊಬ್ಬ ಬಾಲಕಿ ಮನೆಯಿಂದ ಶಾಲೆಗೆ ಬರುತ್ತಿದ್ದಳು. ಸೆ.6ರಂದು ಈ ಮೂವರು ಬಾಲಕಿಯರು ಶಾಲೆಗೆ ಬಂದು ಬಳಿಕ ನಾಪತ್ತೆಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿ ಸುರಕ್ಷಿತವಾಗಿ ನಗರಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗ್ಳೂರಲ್ಲಿ ಮೂವರು ಶಾಲಾ ಬಾಲಕಿಯರು ನಾಪತ್ತೆ: ಕಾಣೆಯಾಗಿ 9 ದಿನವಾದ್ರೂ ಪತ್ತೆಯಾಗಿಲ್ಲ..!

ಮೂವರು ಬಾಲಕಿಯರು ಪರಸ್ಪರ ಸ್ನೇಹಿತರಾಗಿದ್ದರು. ಕೌಟುಂಬಿಕ ಕಾರಣಗಳಿಂದ ಬೇಸರಗೊಂಡಿದ್ದ ಬಾಲಕಿಯರು ಮನೆ ತೊರೆಯಲು ನಿರ್ಧರಿಸಿದ್ದರು. ಅದರಂತೆ ಸೆ.6ರಂದು ಮಧ್ಯಾಹ್ನ ನಗರದ ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ಚೆನ್ನೈ ರೈಲು ಹತ್ತಿದ್ದರು. ಸೆ.7ರಂದು ಚೆನ್ನೈ ರೈಲು ನಿಲ್ದಾಣದಲ್ಲೇ ಸಂಜೆವರೆಗೂ ಕಾಲ ಕಳೆದಿದ್ದಾರೆ. ಬಳಿಕ ರೈಲ್ವೆ ಪೊಲೀಸರು ಈ ಬಾಲಕಿಯರನ್ನು ಗಮನಿಸಿ ಪ್ರಶ್ನಿಸಿದಾಗ, ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದ್ದಾರೆ. ಈ ವೇಳೆ ರೈಲ್ವೆ ಪೊಲೀಸರು ಮೂವರು ಬಾಲಕಿಯರನ್ನೂ ಬೆಂಗಳೂರು ರೈಲು ಹತ್ತಿಸಿದ್ದಾರೆ.

ಚೆನ್ನೈನಿಂದ ನಗರದ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಬಂದಿರುವ ಬಾಲಕಿಯರು, ರೈಲು ನಿಲ್ದಾಣದಲ್ಲಿ ಕಾಣೆಯಾಗಿರುವ ತಮ್ಮ ಭಾವಚಿತ್ರ ಸಹಿತ ಪ್ರಕಟಣೆ ನೋಡಿದ್ದಾರೆ. ಬಳಿಕ ವಾಪಾಸ್‌ ಚೆನ್ನೈಗೆ ತೆರಳಲು ನಿರ್ಧರಿಸಿ ಚೆನ್ನೈ ರೈಲು ಹತ್ತಿದ್ದರು.ಚೆನ್ನೈನಲ್ಲಿ ಹಣ ಇಲ್ಲದೆ ಕಂಗಾಲಾಗಿದ್ದ ಬಾಲಕಿಯರನ್ನು ನೋಡಿದ ಆಟೋ ಚಾಲಕ, ಬಾಲಕಿಯರ ಬಳಿ ತೆರಳಿ ವಿಚಾರಣೆ ಮಾಡಿದಾಗ, ಕೌಟುಂಬಿಕ ಕಾರಣದಿಂದ ಬೇಸರಗೊಂಡು ಮನೆ ಬಿಟ್ಟು ಬಂದಿರುವ ವಿಚಾರ ತಿಳಿಸಿದ್ದರು. ಬಳಿಕ ಆ ಆಟೋ ಚಾಲಕ ಬಾಲಕಿಯರನ್ನು ಅನಾಥಶ್ರಮಕ್ಕೆ ಸೇರಿಸಿ, ಮಿಕ್ಸಿ ತಯಾರಿಕೆ ಘಟಕದಲ್ಲಿ ಕೆಲಸ ಕೊಡಿಸಿದ್ದ. ಈ ಬಗ್ಗೆ ಸಿಕ್ಕಿ ಮಾಹಿತಿ ಆಧರಿಸಿ ಪೊಲೀಸರು ಚೆನ್ನೈಗೆ ತೆರಳಿ ಬಾಲಕಿಯರನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದಿದ್ದಾರೆ.

ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ!

ಮಿಸ್ಡ್‌ಕಾಲ್‌ ನೀಡಿದ ಸುಳಿವು: ಮೂವರು ಬಾಲಕಿಯರು ಸೇರಿ ಒಂದು ಮೊಬೈಲ್‌ ಫೋನ್‌ ಖರೀದಿಸಿದ್ದರು. ಈ ಪೈಕಿ ಒಬ್ಬಾಕೆ ಆ ಮೊಬೈಲ್‌ನಿಂದ ತಂದೆಗೆ ಮಿಸ್ಡ್‌ಕಾಲ್‌ ನೀಡಿದ್ದಳು. ವಾಪಾಸ್‌ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಈ ಬಗ್ಗೆ ಅನುಮಾನಗೊಂಡ ಪೋಷಕರು, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಅಷ್ಟರಲ್ಲಾಗಲೇ ಕರ್ನಾಟಕ, ಪಾಂಡಿಚೇರಿ, ಕೇರಳ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಬಾಲಕಿಯರಿಗಾಗಿ ಹುಡುಕಾಡುತ್ತಿದ್ದ ಪೊಲೀಸರು, ಈ ಮಿಸ್ಡ್‌ ಕಾಲ್‌ ಸುಳಿವು ಆಧರಿಸಿ ಬಾಲಕಿಯರು ಇರುವ ಜಾಗ ಪತ್ತೆಹಚ್ಚಿ ತಮಿಳುನಾಡಿಗೆ ತೆರಳಿ ಬಾಲಕರನ್ನು ಕರೆತಂದಿದ್ದಾರೆ.

click me!