
ಬೆಂಗಳೂರು(ಸೆ.15): ಕಳೆದ ಮೂರು ದಿನಗಳ ಹಿಂದೆ (ಸೆ.12) ಕೊಲೆಯಾದ ರೌಡಿಶೀಟರ್ ಅರವಿಂದ್‌ನನ್ನು(30), ಹತ್ಯೆಗೂ ಮೊದಲು ಆರೋಪಿಗಳು ಅಟ್ಟಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಂತಕರಿಂದ ತಪ್ಪಿಸಿಕೊಳ್ಳಲು ಅರವಿಂದ್ ಫುಟ್ಬಾಲ್ ಕ್ರೀಡಾಂಗಣಕ್ಕೆ ನುಗ್ಗಿದ್ದು, ಹೆಲ್ಮೆಟ್ ಧರಿಸಿರುವ ಹಂತಕರು ಓಡಿಸಿಕೊಂಡು ಹೋಗಿರುವ ವಿಡಿಯೋ ಭಯ ಹುಟ್ಟಿಸುವಂತಿದೆ. ಮತ್ತೊಂದೆಡೆ ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಗೆ ಹಳೇ ದ್ವೇಷ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೆಲ ದಿನಗಳ ಹಿಂದಷ್ಟೇ ಕೊಲೆಯಾದ ಅರವಿಂದ್, ಸುಭಾಷ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಫುಟ್ಬಾಲ್ ಮೈದಾನದಲ್ಲಿ ಅಟ್ಟಾಡಿಸಿ ರೌಡಿಶೀಟರ್ ಹತ್ಯೆ
ಸಿಸಿ ಕ್ಯಾಮೆರಾದಲ್ಲಿ ಏನಿದೆ?
ಆರಂಭದಲ್ಲಿ ಹಲ್ಲೆಗೊಳಗಾಗಿದ್ದ ಅರವಿಂದ್ ಪ್ರಾಣ ಉಳಿಸಿಕೊಳ್ಳಲು ಫುಟ್ಬಾಲ್ ಮೈದಾನಕ್ಕೆ ಓಡಿದ್ದಾನೆ. ಆಗ ನಾಲ್ವರು ಮಾರಕಾಸ್ತ್ರಗಳನ್ನು ಹಿಡಿದು ಮೈದಾನಕ್ಕೆ ನುಗ್ಗಿದ್ದಾರೆ. ಮೈದಾನದ ಒಳಾಂಗಣದಲ್ಲಿ ಹಂತಕರು ಹುಡುಕಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಹಂತಕರು ಮುಖ ಚಹರೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸಿದ್ದಾರೆ. ಮತ್ತೊಬ್ಬ ಟೋಪಿ ಹಾಕಿ, ಮಾಸ್ಕ್ ಧರಿಸಿದ್ದ. ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಓಡುವ ದೃಶ್ಯ ಸಾರ್ವಜನಿಕ ವಲಯದಲ್ಲಿ ಬೆಚ್ಚಿ ಬೀಳುವಂತೆ ಮಾಡಿದೆ.
ಭಾರತಿನಗರ ಮತ್ತು ಡಿ.ಜೆ.ಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದ ಅರವಿಂದ್ ಮೇಲೆ ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿತ್ತು. ಭಾರತಿನಗರ ಠಾಣೆಯ ರೌಡಿಶೀಟರ್ ಕೂಡ ಆಗಿದ್ದ. ಭಾರತಿನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಅರವಿಂದ್‌ನನ್ನು ಜೈಲಿಗೆ ಕಳುಹಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದ ಅರವಿಂದ್, ಪುಟ್ಬಾಲ್ ತಂಡವೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಸೆ.12ರಂದು ಸಂಜೆ ತನ್ನ ಕೆಡಿಎಫ್ ತಂಡದ ಜತೆ ಆಟವಾಡುತ್ತಿದ್ದಾಗ ಅರವಿಂದ್ ಮೇಲೆ ನಾಲ್ವರು ಮಾರಕಾಸ್ತ್ರ ಬೀಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡ ಅರವಿಂದ್, ಮೈದಾನಕ್ಕೆ ನುಗ್ಗಿದ್ದಾನೆ. ಬಳಿಕ ರೆಫ್ರಿ ಕೊಠಡಿಗೆ ತೆರಳಿ ಲಾಕ್ ಮಾಡಿಕೊಂಡಿದ್ದಾನೆ. ಆದರೂ ಬಿಡದ ಹಂತಕರು ಬಾಗಿಲು ಮುರಿದು ಒಳ ನುಗ್ಗಿ ಹತ್ಯೆಗೈದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ