‘ರಾಬರ್ಟ್‌’ ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್‌

By Kannadaprabha NewsFirst Published Dec 21, 2020, 9:23 AM IST
Highlights

ಚಿತ್ರ ನಿರ್ಮಾಪಕನ ಹತ್ಯೆ ಸಂಚು ಬಯಲು | ಬೆಂಗಳೂರು ಪೊಲೀಸರಿಂದ 7 ಮಂದಿ ಗ್ಯಾಂಗ್‌ ಸೆರೆ |‘ರಾಬರ್ಟ್‌’ ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್‌ | ಪೊಲೀಸರ ಮೇಲೇ ಟೆಂಪೋ ಹತ್ತಿಸಲು ರೌಡಿಗಳ ಯತ್ನ

ಬೆಂಗಳೂರು (ಡಿ. 21): ‘ರಾಬರ್ಟ್‌’ ಸಿನಿಮಾ ನಿರ್ಮಾಪಕ ಉಮಾಪತಿ ಸೇರಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು ಹಾಗೂ ರೌಡಿಶೀಟರ್‌ಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ ಏಳು ಮಂದಿಯ ತಂಡವನ್ನು ಪೊಲೀಸರು ಭಾನುವಾರ ಬೆಳಗಿನ ಜಾವ ಬಂಧಿಸಿದ್ದಾರೆ.

ಈ ತಂಡ ಕನ್ನಡ ಸಿನಿಮಾ ನಿರ್ಮಾಪಕರಾದ ಉಮಾಪತಿ ಹಾಗೂ ದೀಪಕ್‌ ಎಂಬುವರ ಹತ್ಯೆಗೆ ಸಂಚು ಮಾಡಿತ್ತು. ಅಲ್ಲದೆ, ಇಬ್ಬರು ಕುಖ್ಯಾತ ರೌಡಿ ಶೀಟರ್‌ಗಳಾದ ಸೈಕಲ್‌ ರವಿ ಮತ್ತು ಬೇಕರಿ ರಘು ಹತ್ಯೆಗೆ ಸ್ಕೆಚ್‌ ಹಾಕಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

35 ವರ್ಷಗಳಿಂದ ಬೇರೆ ಇರುವ ಅಪ್ಪ -ಅಮ್ಮನ ಬಗ್ಗೆ ಕರೀನಾ ಮಾತು

ಸಂಚು ರೂಪಿಸುತ್ತಿದ್ದ ಬೆಂಗಳೂರಿನ ದರ್ಶನ್‌, ರಾಜನ್‌, ಗಿರೀಶ್‌, ಮೋಹನ್‌ ಹಾಗೂ ಟೋನಿ ಜೊಸೇಫ್‌ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ, ಟೆಂಪೋ ಟ್ರಾವೆಲರ್‌ ಹಾಗೂ ಬೈಕನ್ನು ಜಪ್ತಿ ಮಾಡಿದ್ದೇವೆ. ಸಂಚಿನ ಸೂತ್ರಧಾರಿಗಳಾದ ರೌಡಿಶೀಟರ್‌ ಬಾಂಬೆ ರವಿ ಹಾಗೂ ಭರತ್‌ ಪರಾರಿಯಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಯಾವ ಕಾರಣಕ್ಕೆ ನಿರ್ಮಾಪಕರ ಹತ್ಯೆಗೆ ಹೊಂಚು ಹಾಕುತ್ತಿದ್ದರು ಎಂಬುದು ಗೊತ್ತಾಗಿಲ್ಲ. ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಬಂಧನ:

ಭಾನುವಾರ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಜಯನಗರ ಇನ್‌ಸ್ಪೆಕ್ಟರ್‌ ಎಚ್‌.ವಿ.ಸುದರ್ಶನ್‌ ಅವರು ಗಸ್ತಿನಲ್ಲಿದ್ದರು. ನ್ಯಾಷನಲ್‌ ಕಾಲೇಜು ಸಮೀಪ ಟೆಂಪೋ ಟ್ರಾವೆಲರ್‌ವೊಂದು ಅನುಮಾನಾಸ್ಪದವಾಗಿ ನಿಂತಿತ್ತು. ಅನುಮಾನಗೊಂಡ ಇನ್‌ಸ್ಪೆಕ್ಟರ್‌ ಸುದರ್ಶನ್‌ ಅವರು ಟೆಂಪೋ ಟ್ರಾವೆಲರನ್ನು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಿದ್ದ ವಾಹನ ಚಾಲಕ, ವಾಹನವನ್ನು ಪೊಲೀಸರ ಮೇಲೆ ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸ್‌ ಜೀಪನ್ನು ಆರೋಪಿಗಳಿದ್ದ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ.

ಬಿಪಾಶಾ ಜೊತೆ ರಿಲೇಶನ್‌ಷಿಪ್‌ನಲ್ಲಿದ್ಕೊಂಡೇ ಬೇರೆ ಹುಡುಗಿ ಜೊತೆ ಡೇಟ್ ಮಾಡ್ತಿದ್ದ ಜಾನ್ ಅಬ್ರಾಹಾಂ!

ಈ ಸಂದರ್ಭದಲ್ಲಿ ಆರೋಪಿಗಳ ಗ್ಯಾಂಗ್‌ ಕಿಟಕಿಯಿಂದ ಕಾನ್‌ಸ್ಟೇಬಲ್‌ವೊಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲು ಯತ್ನಿಸಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ಪಾಂಡೆ ತಿಳಿಸಿದರು.

ವಿಚಾರಣೆ ವೇಳೆ ಆರೋಪಿಗಳು, ನಿರ್ಮಾಪಕರಾದ ಉಮಾಪತಿ, ದೀಪಕ್‌ ಹಾಗೂ ಕುಖ್ಯಾತ ರೌಡಿಶೀಟರ್‌ಗಳಾದ ಸೈಕಲ್‌ ರವಿ ಮತ್ತು ಬೇಕರಿ ರಘು ಹತ್ಯೆಗೆ ಸಂಚು ರೂಪಿಸಿದ್ದಾಗಿ ಬಾಯಿ ಬಿಟ್ಟಿದ್ದಾರೆ. ಹಣಕಾಸಿನ ವಿಚಾರಕ್ಕೆ ನಿರ್ಮಾಪಕರ ಹತ್ಯೆಗೆ ಈ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ. ಸಿನಿಮಾಗೆ ಬಂಡವಾಳ ಹೂಡುವ ವಿಷಯಕ್ಕೆ ಹಣಕಾಸಿನ ವಿಚಾರವೋ ಅಥವಾ ಜಮೀನಿನ ವಿಷಯವೋ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬರಬೇಕಿದೆ. ರೌಡಿಶೀಟರ್‌ಗಳಾದ ಸೈಕಲ್‌ ರವಿ ಹಾಗೂ ಬೇಕರಿ ರಘು ಜೈಲಿನಿಂದ ಹೊರಗೆ ಬಂದಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೆ ಹೊಂಚು ನಡೆದಿತ್ತು.

ಬಂಧಿತರೆಲ್ಲರೂ ತಲೆಮರೆಸಿಕೊಂಡಿರುವ ರೌಡಿಶೀಟರ್‌ ಬಾಂಬೆ ರವಿಯ ಸಹಚರರಾಗಿದ್ದಾರೆ. ಆತನ ಅಣತಿಯಂತೆ ಕೃತ್ಯ ಎಸಗಲು ಮುಂದಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಹಾಗೂ ದೀಪಕ್‌ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ವಿವರಿಸಿದರು.

ನಾನು ಊರಲ್ಲಿ ಇಲ್ಲ. ನನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದ ಕೆಲವರು ಬಂಧನಕ್ಕೆ ಒಳಗಾಗಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಯಾವ ಕಾರಣಕ್ಕೆ ನನ್ನ ವಿರುದ್ಧ ಸಂಚು ರೂಪಿಸಿದ್ದರು ಎಂಬುದು ಗೊತ್ತಿಲ್ಲ. ಇಲ್ಲಿಯವರೆಗೆ ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ. ನನಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ. ಆದರೂ ಬೆಂಗಳೂರು ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡುತ್ತೇನೆ.

- ಉಮಾಪತಿ, ನಿರ್ಮಾಪಕ

click me!