
ಬೆಂಗಳೂರು(ಡಿ.21): ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯ ಸ್ನೇಹ ಬೆಳೆಸಿದ್ದ ಅಪರಿಚಿತ ವ್ಯಕ್ತಿ, ಬಾಲಕಿಗೆ ತನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಯ ಪೋಷಕರು ಇ-ಮೇಲ್ ಮೂಲಕ ನೀಡಿದ ದೂರನ್ನು ಆಧರಿಸಿ ದಕ್ಷಿಣ ವಿಭಾಗದ ಸಿಇಎನ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
13 ವರ್ಷದ ಬಾಲಕಿ ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದಳು. ಕೆಲ ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯ ಸ್ನೇಹ ಬೆಳೆಸಿದ್ದ. ಪ್ರತಿದಿನ ಚಾಟಿಂಗ್ ಮಾಡಿ ಸಂಪರ್ಕಿಸಿದ್ದ. ತನ್ನ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಬಾಲಕಿಗೆ ರವಾನಿಸಿದ್ದ. ಅದೇ ರೀತಿಯ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ತನಗೆ ರವಾನಿಸುವಂತೆ ಬಾಲಕಿಗೆ ಸಂದೇಶ ಕಳುಹಿಸಿದ್ದ.
ಅಶ್ಲೀಲ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್: ಆರೋಪಿ ಸೆರೆ
ಇದರಿಂದ ಗಾಬರಿಗೊಂಡ ಬಾಲಕಿ, ಅಪರಿಚಿತ ಕಳುಹಿಸಿದ್ದ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಳು. ಇದಾದ ಬಳಿಕವೂ ನಿರಂತರವಾಗಿ ಸಂದೇಶ ಕಳುಹಿಸಿ ನಗ್ನ ಫೋಟೋ ಕಳುಹಿಸುವಂತೆ ಒತ್ತಾಯಿಸಿದ್ದ. ಈ ವಿಚಾರ ಪಾಲಕರಿಗೆ ಗೊತ್ತಾಗಿದ್ದು, ಅಪರಿಚಿತನ ಇನ್‌ಸ್ಟಾಗ್ರಾಂ ಖಾತೆಗೆ ರಿಪೋರ್ಟ್ ಮಾಡಿ ಸುಮ್ಮನಾಗಿದ್ದರು. ಮತ್ತೊಂದು ನಕಲಿ ಖಾತೆ ಸೃಷ್ಟಿಸಿಕೊಂಡಿರುವ ಆರೋಪಿ, ಲೈಂಗಿಕವಾಗಿ ಸಹಕರಿಸುವಂತೆ ಬಾಲಕಿಗೆ ಆಡಿಯೋ ಸಂದೇಶಗಳನ್ನು ಕಳುಹಿಸಿ ಪೀಡಿಸಿದ್ದಾನೆ. ಈ ಕುರಿತು ಬಾಲಕಿಯ ಸಂಬಂಧಿ ಮಹಿಳೆಯೊಬ್ಬರು ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ