
ತೀರ್ಥಹಳ್ಳಿ(ಏ.13): ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದಲ್ಲಿ ಬಂಧಿತ ಶಂಕಿತ ಉಗ್ರರಲ್ಲಿ ಒಬ್ಬನಾದ ಅಬ್ದುಲ್ ಮತೀನ್ ತಾಹ ನಿವೃತ್ತ ಯೋಧರ ಪುತ್ರ ಎಂಬುದು ಬೇಸರದ ಸಂಗತಿ. ಎಂಜಿನಿಯರಿಂಗ್ ಪದವೀಧರನಾಗಿದ್ದು, ಪ್ರೌಢಶಾಲೆಯವರೆಗೆ ತೀರ್ಥಹಳ್ಳಿಯಲ್ಲಿಯೇ ಓದಿದ್ದ ತಾಹ ಅತ್ಯಂತ ಚುರುಕು ಮತ್ತು ಮೃದು ಸ್ವಭಾವದ ವ್ಯಕ್ತಿಯಾಗಿದ್ದ ಎಂದು ಬಲ್ಲವರು ಹೇಳುತ್ತಾರೆ.
ಕಲಿಕೆಯಲ್ಲೂ ನಿಪುಣನಾಗಿದ್ದ ಈತ ಪ್ರೌಢ ಶಿಕ್ಷಣದ ಬಳಿಕ ಬೆಂಗಳೂರಿಗೆ ತೆರಳಿ ಅಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ್ದ. ಸಂದರ್ಭದಲ್ಲಿಯೇ ಉಗ್ರರ ನೆರಳಿಗೆ ಸಿಲುಕಿದ್ದ ಎನ್ನಲಾಗಿದೆ. ಮೀನು ಮಾರ್ಕೆಟ್ ಬಳಿಯೇ ಈತನ ಮನೆ ಇದ್ದು, ಒಬ್ಬನೇ ಪುತ್ರ. ಸಮಾಜದಲ್ಲಿ ಇವರ ಕುಟುಂಬ ಒಳ್ಳೆಯ ಹೆಸರು ಇಟ್ಟುಕೊಂಡಿತ್ತು. ತಂದೆ ಒಂದು ವರ್ಷದ ಹಿಂದಷ್ಟೇ ತೀರಿಕೊಂಡಿದ್ದು, ತಾಯಿಯ ಬಗ್ಗೆ ಕೂಡ ಒಳ್ಳೆಯ ಅಭಿಪ್ರಾಯವಿದೆ.
ಏಕಾಂಗಿಯಾಗಿರುತ್ತಿದ್ದ ಮುಸಾವಿರ್ ಸಾಜಿದ್ ಹುಸೇನ್
ತೀರ್ಥಹಳ್ಳಿ: ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಹೊಂದಿರುವ ಮುಸಾವಿರ್ ಸಾಜಿದ್ ಹುಸೇನ್ ಬಗ್ಗೆ ಸ್ಥಳೀಯರಿಗೆ ಗೊತ್ತಿರುವುದೇ ಕಡಿಮೆ. ಮುಜಾವಿರ್ ಅಕ್ಕಪಕ್ಕದವರೊಂದಿಗಾಗಲಿ, ಕುಟುಂಬದವರೊಂದಿಗೆ ಸೇರಿ ಯಾರ ಜತೆಗೂ ಹೆಚ್ಚು ಬೆರೆಯದೆ ತನ್ನದೇ ಲೋಕದಲ್ಲಿರುತ್ತಿದ್ದ ಎನ್ನಲಾಗಿದೆ.
ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಈತನ ಮನೆಯಲ್ಲಿ ತಾಯಿ ಮಾತ್ರ ಇದ್ದಾರೆ. ತಂದೆ ಇಲ್ಲದ ಈತನಿಗೆ ಅಣ್ಣ ಮತ್ತು ತಮ್ಮ ಇದ್ದಾರೆ. ಅಣ್ಣ ಬೇರೆ ಕಡೆ ವ್ಯವಹಾರ ಮಾಡಿಕೊಂಡಿದ್ದು, ಈತನ ಕುಟುಂಬಕ್ಕೆ ಕಟ್ಟಡ ಬಾಡಿಗೆಯೇ ಮೂಲ ಆದಾಯ. ಮುಸ್ಲಿಂ ಉದ್ದನೆಯ ನಿಲುವಂಗಿ ಧರಿಸಿ, ಮನೆ ಮಹಡಿ ಮೇಲೆ ಮೊಬೈಲ್ ನೋಡುತ್ತಾ ಕೂರುತ್ತಿದ್ದ. ಉಳಿದ ವೇಳೆ ತನಗೆ ಅತ್ಯಂತ ಬೇಕಾದ ತನ್ನದೇ ಸಮುದಾಯದ ಒಂದೆರಡು ಸ್ಥಳಗಳಲ್ಲಿ ಮತ್ತು ಮಸೀದಿಯಲ್ಲಿರುತ್ತಿದ್ದ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ