ಲೋಕಸಭಾ ಚುನಾವಣೆ 2024ಕ್ಕೆ ಅಖಾಡ ಸಿದ್ಧವಾಗುತ್ತಿರುವ ಸಮಯದಲ್ಲೇ ಮತ್ತೆ ವಿಧ್ವಂಸಕ ಕೃತ್ಯ ನಡೆದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ 20 ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸ್ಫೋಟಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರು (ಮಾ.2): 2013ರಲ್ಲಿ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಕಚೇರಿ ಸಮೀಪ ಇದೇ ರೀತಿ ಬಾಂಬ್ ಸ್ಫೋಟವಾಗಿತ್ತು. ಈಗ ಲೋಕಸಭಾ ಚುನಾವಣೆ 2024ಕ್ಕೆ ಅಖಾಡ ಸಿದ್ಧವಾಗುತ್ತಿರುವ ಸಮಯದಲ್ಲೇ ಮತ್ತೆ ವಿಧ್ವಂಸಕ ಕೃತ್ಯ ನಡೆದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟಕ ಕೃತ್ಯಗಳ ವಿವರ ಹೀಗಿದೆ.
2005 ಡಿಸೆಂಬರ್ 25: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ವಿಜ್ಞಾನಿಗಳ ಸಮ್ಮೇಳನಕ್ಕೆ ನುಗ್ಗಿ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದರು. ಅಂದು ಭಯೋತ್ಪಾದಕರ ಗುಂಡಿನ ದಾಳಿಗೆ ಸಿಲುಕಿ ವಿಜ್ಞಾನಿ ಮೌನೀಷ್ ಚಂದ್ರಪುರಿ ಹತ್ಯೆಗೀಡಾಗಿದ್ದರು. ಈ ಕೃತ್ಯದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ-ತೋಯ್ಬಾ (ಎಲ್‌ಇಟಿ) ಪಾತ್ರ ಬಯಲಾಗಿ ಸುಮಾರು 10ಕ್ಕೂ ಶಂಕಿತ ಉಗ್ರರನ್ನು ಪೊಲೀಸರು ಬೇಟೆಯಾಡಿ ಜೈಲಿಗೆ ಅಟ್ಟಿದ್ದರು.
undefined
Rameshwaram Cafe Blast ಡಿಜೆ ಹಳ್ಳಿಯ ಓರ್ವ ಸೇರಿ ಮೂವರು ಶಂಕಿತರು ಅರೆಸ್ಟ್!
2008 ಜುಲೈ 25: ಬೆಂಗಳೂರಿನ ಮಡಿವಾಳ, ಆಡುಗೋಡಿ ಹಾಗೂ ನಾಯಂಡಹಳ್ಳಿಗಳಲ್ಲಿ ಮೂರು ಕಡೆ ಬಾಂಬ್ ಸ್ಫೋಟವಾಗಿದ್ದವು. ಅದೇ ರೀತಿ ಕೋರಮಂಗಲ, ರಿಚ್ಮಂಡ್ ಹಾಗೂ ಮಲ್ಯ ಆಸ್ಪತ್ರೆ ಬಳಿ ಸಿಡಿಯುವ ಮುನ್ನವೇ ಸ್ಫೋಟಕ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದರು. ಘಟನೆಯಲ್ಲಿ ಓರ್ವ ಮೃತಪಟ್ಟು, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು. ಈ ವಿಧ್ವಂಸಕ ಕೃತ್ಯದ ಹಿಂದೆ ಸಹ ಪಾಕಿಸ್ತಾನ ಮೂಲದ ಎಲ್‌ಇಟಿ ನೆರಳು ಬಯಲಾಗಿತ್ತು. ಈ ಶಂಕಿತರಿಗೆ ನೆರವು ನೀಡಿದ ಆರೋಪದ ಮೇರೆಗೆ ಕೇರಳ ರಾಜ್ಯದ ರಾಜಕಾರಣಿ ಅಬ್ದುಲ್ ನಾಸಿರ್ ಮದನಿ ಸೇರಿ 20ಕ್ಕೂ ಹೆಚ್ಚಿನ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದರು.
2010 ಏಪ್ರಿಲ್ 10: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ಆರಂಭಕ್ಕೂ ಮುನ್ನ ಪ್ರವೇಶ ದ್ವಾರದ ಬಳಿ ಬಾಂಬ್ ಸ್ಫೋಟವಾಗಿ, 15 ಪ್ರೇಕ್ಷೇಕರು ಗಾಯಗೊಂಡಿದ್ದರು. ಈ ಸ್ಫೋಟದ ಬಳಿಕವೂ ಪಂದ್ಯಾವಳಿ ನಡೆಸಿ ಪೊಲೀಸರು ಮೆಚ್ಚುಗೆ ಪಡೆದಿದ್ದರು. ಈ ಕೃತ್ಯವನ್ನು ಭಟ್ಕಳ್ ಮೂಲದ ಇಂಡಿಯನ್ ಮುಜಾಹಿದ್ದೀನ್ (ಐಎಂ) ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಐಎಂ ಸಹ ಸಂಸ್ಥಾಪಕ ಉಗ್ರ ಯಾಸಿನ್ ಭಟ್ಕಳ್ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿತ್ತು.
ಬೆಂಗಳೂರು ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಯಾಕೆ?
2013 ಏಪ್ರಿಲ್ 13: ವಿಧಾನಸಭಾ ಚುನಾವಣೆ ಕಾವೇರಿರುವ ಹೊತ್ತಿನಲ್ಲೇ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ್ ಭವನದ ಸಮೀಪದಲ್ಲೇ ಬೈಕ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಕೃತ್ಯದಲ್ಲಿ ಓರ್ವ ಮೃತಪಟ್ಟಿದ್ದರು. ಪಿಯುಸಿ ವಿದ್ಯಾರ್ಥಿನಿ ಸೇರಿ ಐವರು ಸಾರ್ಜನಿಕರು ಹಾಗೂ ಬಿಜೆಪಿ ಕಚೇರಿ ಭದ್ರತೆಯಲ್ಲಿದ್ದ ಏಳು ಮಂದಿ ಪೊಲೀಸರು ಗಾಯಗೊಂಡಿದ್ದರು. ಈ ಕೃತ್ಯವನ್ನು ತಮಿಳುನಾಡು ಮೂಲದ ಆಲ್ ಉಮ್ಮಾ ಸಂಘಟನೆ ನಡೆಸಿತ್ತು. ಇದರ ಮುಖಂಡ ಕಿಚನ್ ಬುಖಾರಿ ಸೇರಿದಂತೆ 20ಕ್ಕೂ ಹೆಚ್ಚಿನ ಶಂಕಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
2014 ಡಿಸೆಂಬರ್ 28: ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದಾಗಲೇ ಉದ್ಯಾನ ನಗರಿಯ ಮೇಲೆ ಉಗ್ರರ ಕೆಟ್ಟ ದೃಷ್ಟಿ ಬಿತ್ತು. ಅಂದು ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್‌ನ ಕೊಕನೆಟ್ ಗ್ರೋವರ್ ರೆಸ್ಟೋರೆಂಟ್ ಪ್ರವೇಶ ದ್ವಾರದ ಬಳಿ ಸ್ಫೋಟವಾಗಿತ್ತು. ಘಟನೆಯಲ್ಲಿ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಸೇರಿ ನಾಲ್ವರು ಗಾಯಗೊಂಡಿದ್ದರು. ಆ ಹೋಟೆಲ್‌ಗೆ ಆಗಮಿಸಲಿದ್ದ ಇಸ್ರೇಲ್ ದೇಶದ ಪ್ರತಿನಿಧಿಗಳನ್ನು ಗುರಿಯಾಗಿಸಿಕೊಂಡು ಈ ವಿಧ್ವಂಸಕ ಕೃತ್ಯ ನಡೆದಿದ್ದು, ಘಟನೆ ಹಿಂದೆ ಸಹ ಇಂಡಿಯನ್ ಮುಜಾಹಿದ್ದೀನ್ ಪಾತ್ರವಿದ್ದದ್ದು ತನಿಖೆಯಲ್ಲಿ ಗೊತ್ತಾಗಿತ್ತು. ಆ ಸಂಘಟನೆಯ ಐವರು ಶಂಕಿತರನ್ನು ಪೊಲೀಸರು ಬಂಧಿಸಿದ್ದರು.