ಸಂಜನಾಗೆ ತಲೆನೋವು, ಚಿಕಿತ್ಸೆ| ಮೌನದಿಂದಲೇ ಇರುವ ರಾಗಿಣಿ| ಹಾಸಿಗೆ ಬದಲು ಜಮಖಾನೆ ಮೇಲೆ ಶಯನ| ಪೋಷಕರು, ವಕೀಲರಿಗೆ ಫೋನ್ ಮಾಡಿದ ರಾಗಿಣಿ|
ಬೆಂಗಳೂರು(ಸೆ.18): ಮಾದಕ ವಸ್ತು ಮಾರಾಟ ಜಾಲ ನಂಟು ಪ್ರಕರಣ ಸಂಬಂಧ ಸಿಸಿಬಿ ಬಲೆಗೆ ಬಿದ್ದ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ, ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸ್ನೇಹದಿಂದ ಒಂದೇ ಸೆಲ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.
ಸದ್ಯ ಜೈಲಿನ ಆವರಣದ ಹೊಸ ಕಟ್ಟಡದ ಬ್ಯಾರಕ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ನಟಿಯರು, ಇತರೆ ವಿಚಾರಣಾಧೀನ ಕೈದಿಗಳ ಜತೆ ಹೆಚ್ಚು ಬೆರೆಯಲು ಅವಕಾಶ ಸಿಕ್ಕಿಲ್ಲ. ಬುಧವಾರ ರಾತ್ರಿ ಜೈಲಿ ಸೇರಿದ ಬಳಿಕ ಸಂಜನಾ ತಲೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಕಾರಾಗೃಹದ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ರಾಗಿಣಿ ಶಾಂತವಾಗಿದ್ದು, ಹೆಚ್ಚಿನ ಸಮಯ ಮೌನವಾಗಿಯೇ ಆಕೆ ಕಾಲ ಕಳೆಯುತ್ತಿದ್ದಾಳೆ. ಜೈಲಿನಲ್ಲಿ ನಟಿಯರಿಗೆ ಯಾವುದೇ ವಿಶೇಷ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಅವರಿಗೆ ಹಾಸಿಗೆ ಬದಲಿಗೆ ಜಮಖಾನೆ ಮಾತ್ರ ಒದಗಿಸಲಾಗಿದೆ. ಕ್ವಾರಂಟೈನ್ ಕಾರಣಕ್ಕೆ ಹೊರಗಿನವರ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ಮೂಲಗಳು ಹೇಳಿವೆ.
ರಾಗಿಣಿಗೆ ಸಿಗದ 'ತುಪ್ಪ' ಪರಪ್ಪನ ಅಗ್ರಹಾರದಲ್ಲೇ ಇನ್ನೆಷ್ಟು ದಿನ?
ಪೋಷಕರಿಗೆ ರಾಗಿಣಿ ಕರೆ:
ಕಾರಾಗೃಹದಲ್ಲಿ ಸಜಾ ಮತ್ತು ವಿಚಾರಣಾಧೀನ ಕೈದಿಗಳ ಬಳಕೆಗೆ ಸ್ಥಿರ ದೂರವಾಣಿ ಒದಗಿಸಲಾಗಿದ್ದು, ತಲಾ ಕೈದಿಗೆ ಇಬ್ಬರರೊಡನೆ ಮಾತನಾಡಲು ಅವಕಾಶ ನೀಡಲಾಗಿದೆ. ಈ ಅವಕಾಶ ಬಳಸಿಕೊಂಡ ರಾಗಿಣಿ, ತನ್ನ ಪೋಷಕರು ಹಾಗೂ ವಕೀಲರಿಗೆ ಕರೆ ಮಾಡಿ ಮಾತನಾಡಿದ್ದಾಳೆ ಎಂದು ತಿಳಿದು ಬಂದಿದೆ.
ನಟಿಯರಿಗೆ ಚಾಕೊಲೇಟ್ ಕೊಟ್ಟ ಪೋಷಕರು!
ಕಾರಾಗೃಹದಲ್ಲಿರುವ ತಮ್ಮ ಮಕ್ಕಳ ಭೇಟಿಗೆ ಬಂದಿದ್ದ ರಾಗಿಣಿ ಮತ್ತು ಸಂಜನಾ ಪೋಷಕರಿಗೆ ಗುರುವಾರ ಕೂಡಾ ನಿರಾಸೆಯಾಗಿದೆ. ಕೊರೋನಾ ಸೋಂಕು ಕಾರಣ ನಟಿಯರನ್ನು ಭೇಟಿಯಾಗಲು ಪೋಷಕರಿಗೆ ಕಾರಾಗೃಹದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ನಟಿಯರ ಪೋಷಕರು, ಅಧಿಕಾರಿಗಳ ಮೂಲಕ ಮಕ್ಕಳಿಗೆ ಚಾಕೊಲೇಟ್ ಹಾಗೂ ಬಟ್ಟೆಗಳನ್ನು ತಲುಪಿಸಿದ್ದಾರೆ.