ಫೇಸ್ಬುಕ್, ಪ್ರಸಾದದ ನೆಪದಲ್ಲಿ ದಂಧೆಯಲ್ಲಿ ತೊಡಗಿದ್ದವರು ಪೊಲೀಸ್ ಬಲೆಗೆ| 16 ಲಕ್ಷ ಮೌಲ್ಯದ 1.1 ಲೀಟರ್ ಹಶೀಶ್ ಜಪ್ತಿ | ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು|
ಬೆಂಗಳೂರು(ಸೆ.18): ದೇವರ ಪ್ರಸಾದ ನೆಪದಲ್ಲಿ ಖಾಸಗಿ ಬಸ್‌ಗಳು ಹಾಗೂ ಫೇಸ್‌ಬುಕ್ ಮೆಸೇಂಜರ್ ಸೇರಿದಂತೆ ವಿವಿಧ ಮೂಲಗಳ ಮೂಲಕ ಡ್ರಗ್ಸ್ ಪೂರೈಸುತ್ತಿದ್ದ 16 ಮಂದಿ ರಾಜಧಾನಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಎರಡು ಕ್ವಿಂಟಾಲ್ ಗಾಂಜಾ, ಒಂದು ಲೀಟರ್ ಹಶೀಶ್ ಜಪ್ತಿ ಮಾಡಲಾಗಿದೆ.
ಹೆಲ್ಮಟ್‌ನಲ್ಲಿ ಬ್ರೌನ್ ಶುಗರ್ ಸಾಗಾಣಿಕೆ:
ಖಾಸಗಿ ಬಸ್‌ಗಳಲ್ಲಿ ದೇವರ ಪ್ರಸಾದವೆಂದು ಹೇಳಿ ಬ್ರೌನ್ ಶುಗರ್ ಸಾಗಿಸುತ್ತಿದ್ದ ಚಾಲಾಕಿ ಪೆಡ್ಲರ್ ಸಿಟಿ ಮಾರ್ಕೆಟ್ ಠಾಣೆ ಪೊಲೀಸರಿಗೆ ಸೆರೆಯಾಗಿದ್ದಾನೆ. ಗಿರಿನಗರದ ವಿಕ್ರಮ್ ಖಿಲೇರಿ ಬಂಧಿತನಾಗಿದ್ದು, ಆರೋಪಿಯಿಂದ 90 ಗ್ರಾಂ ಬ್ರೌನ್ ಶುಗರ್ ಜಪ್ತಿಯಾಗಿದೆ. ಪಟ್ನೂಲ್ ಪೇಟೆ ಬಳಿ ಹೆಲ್ಮಟ್‌ನಲ್ಲಿ ಡ್ರಗ್ಸ್ ಇಟ್ಟು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ.
ಹಲವು ದಿನಗಳಿಂದ ಡ್ರಗ್ಸ್ ದಂಧೆಯಲ್ಲಿ ವಿಕ್ರಮ್ ತೊಡಗಿದ್ದು, ನಗರದಿಂದ ಖಾಸಗಿ ಬಸ್‌ಗಳ ಮೂಲಕ ಹೊರ ಜಿಲ್ಲೆಗಳಿಗೆ ಬ್ರೌನ್ ಶುಗರ್ ಸಾಗಿಸುತ್ತಿದ್ದ. ಖಾಸಗಿ ಬಸ್‌ಗಳ ಚಾಲಕರಿಗೆ 100 ಕೊಟ್ಟು ತನ್ನ ದಂಧೆಗೆ ಬಳಸಿಕೊಂಡಿದ್ದ ಆರೋಪಿ, ಬ್ರೌನ್ ಶುಗರ್ ಪ್ಯಾಕೆಟ್‌ಗಳನ್ನು ದೇವರ ಪ್ರಸಾದವೆಂದು ಚಾಲಕರಿಗೆ ಹೇಳುತ್ತಿದ್ದ. ನಾನು ಸೂಚಿಸಿದ ಊರಿನಲ್ಲಿ ಸಂಬಂಧಿಕರು ಬಂದು ಪ್ರಸಾದ ಪಡೆಯುತ್ತಾರೆ ಎಂದು ಡ್ರಗ್ಸ್ ಸರಬರಾಜು ಮಾಡಿಸುತ್ತಿದ್ದಾಗಿ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಡ್ರಗ್ಸ್ ಕೇಸಿಗೆ ಲಂಕಾ ಸ್ಫೋಟದ ನಂಟು..?
90 ಕೆ.ಜಿ.ಗಾಂಜಾ ಜಪ್ತಿ:
ಕಾಡುಗೋಡಿಯಲ್ಲಿ ಅಪಾರ್ಟ್‌ಮೆಂಟ್‌ವೊಂದರ ಮೇಲೆ ದಾಳಿ ನಡೆಸಿ ಮೂವರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ಕಾಡುಗೋಡಿ ಬೆಳತ್ತೂರಿನ ಆಜಾಮ್ ಪಾಷ, ಮಸ್ತಾನ್ ವಾಲಿ ಹಾಗೂ ಮೊಹಮ್ಮದ್ ಅಬ್ಬಾಸ್ ಬಂಧಿತರಾಗಿದ್ದು, ಆರೋಪಿಗಳಿಂದ 50 ಲಕ್ಷ ಮೌಲ್ಯದ 90 ಕೆ.ಜಿ ಗಾಂಜಾ, ಮೂರು ಮೊಬೈಲ್, ಕಾರು ಸೇರಿದಂತೆ ಮತ್ತಿರರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಎಚ್‌ಎಎಲ್‌ನ ಅಪ್ಪು ಎಂಬಾತನ ಪತ್ತೆಗೆ ಬಲೆ ಬೀಸಲಾಗಿದೆ. ಕಾಡುಗೋಡಿಯ ದೊಡ್ಡ ಬನಹಳ್ಳಿಯ ಸಫಲ್ ಮಾರ್ಕೆಟ್ ಹಿಂಭಾಗದ ವಿಂದ್ಯಗಿರಿ ಬಿಡಿಎ ಅಪಾರ್ಟ್‌ಮೆಂಟ್ ಮೇಲೆ ಸಿಸಿಬಿ ದಾಳಿ ನಡೆದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ನೂರಾರು ಕೆ.ಜಿ.ಗಾಂಜಾ ತಂದು ಆರೋಪಿಗಳು ಮಾರುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಫುಡ್ ಡೆಲಿವರಿ ಬಾಯ್‌ಗಳು ಬಲೆಗೆ
ಗಾಂಜಾ ದಂಧೆಯಲ್ಲಿ ತೊಡಗಿದ್ದ ಇಬ್ಬರು ಫುಡ್ ಡೆಲಿವರಿ ಬಾಯ್‌ಗಳನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಮಾಲೂರು ತಾಲೂಕಿನ ಶಿವರಾಪಟ್ಟಣ ಗ್ರಾಮದ ಮೊಹಮ್ಮದ್ ಖೈರುಲ್ ಇಸ್ಲಾಂ ಹಾಗೂ ಓಲ್ಡ್ ಏರ್‌ಪೋರ್ಟ್ ರಸ್ತೆಯ ಮೊಹಮ್ಮದ್ ಫಾರೂಕ್ ಬಂಧಿತರಾಗಿದ್ದು, ಆರೋಪಿಗಳಿಂದ .15 ಲಕ್ಷ ಮೌಲ್ಯದ 51 ಕೆ.ಜಿ. ಗಾಂಜಾ ಹಾಗೂ 5 ಲಕ್ಷ ರು ಮೌಲ್ಯದ ಕಾರು ಜಪ್ತಿ ಮಾಡಲಾಗಿದೆ.
ಆರೋಪಿಗಳು ಮೂಲತಃ ಅಸ್ಸಾಂ ರಾಜ್ಯದವರಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಬಳಿಕ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕಾವಲುಗಾರರಾಗಿದ್ದ ಖೈರುಲ್ ಹಾಗೂ ಫಾರೂಕ್, ಬಳಿಕ ಫುಡ್ ಡಿಲವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಸಂಪಾದಿಸಲು ಸಲುವಾಗಿ ಗಾಂಜಾ ದಂಧೆಗಿಳಿದ ಆರೋಪಿಗಳು, ಒಡಿಶಾದಿಂದ ಗಾಂಜಾ ಖರೀದಿಸಿ ತಂದು ನಗರದಲ್ಲಿ ಮಾರುತ್ತಿದ್ದರು. ಮಾಲೂರಿನಲ್ಲಿ ನೆಲೆಸಿದ್ದ ಖೈರುಲ್, ಕಾರಿನಲ್ಲಿ ಬೆಂಗಳೂರಿಗೆ ವಾರಕ್ಕೆರಡು ಬಾರಿ ಬಂದು ಗಾಂಜಾ ಮಾರಿ ಮರಳುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ತಂಡವು, ಆರೋಪಿಗಳನ್ನು ಸೆರೆ ಹಿಡಿದಿದೆ ಎಂದು ಆಗ್ನೇಯ ವಿಭಾಗದ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.
ಪೆಡ್ಲರ್ ಆದ ಬೈಕ್ ಕಳ್ಳ!
ಮತ್ತೊಂದು ತಂಡವು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರ ಗಾಳಕ್ಕೆ ಸಿಕ್ಕಿದೆ. ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದ ಪೊಲೀಸರು ಬೈಕ್ ಕಳ್ಳತನದಲ್ಲಿ ಮನೋಹರ್‌ನನ್ನು ಬಂಧಿಸಿದ್ದರು. ಆ ವೇಳೆ ಜೈಲಿನಲ್ಲಿ ಆತನಿಗೆ ಗಾಂಜಾ ದಂಧೆಕೋರರಾರದ ಕೃಪಾನಂದ ಮತ್ತು ಪಾರ್ಥ ಪರಿಚಯವಾಗಿದೆ. ಬೈಕ್ ಕಳ್ಳತನಕ್ಕಿಂತ ಗಾಂಜಾ ಮಾರಾಟದಲ್ಲಿ ಹೆಚ್ಚಿನ ಲಾಭವಿದೆ ಎಂದು ದಂಧೆಕೋರ ಮಾತಿಗೆ ಮನೋಹರ್ ಒಪ್ಪಿದ್ದಾನೆ. ಜೈಲಿನಿಂದ ಬಿಡುಗಡೆ ಬಳಿಕ ಆರೋಪಿಗಳು, ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಶುರು ಮಾಡಿದ್ದರು.
ವಿಶಾಖಪಟ್ಟಣದಲ್ಲಿ 8 ಸಾವಿರಕ್ಕೆ 1 ಕೆ.ಜಿ ಗಾಂಜಾ ಖರೀದಿಸುತ್ತಿದ್ದ ತಂಡ, ನಂತರ ನಗರಕ್ಕೆ ತಂದು 20 ರಿಂದ 30 ಸಾವಿರಕ್ಕೆ ಮಾರುತ್ತಿತ್ತು. ಈ ಗ್ಯಾಂಗ್‌ನ ಒಟ್ಟು 9 ಪೆಡ್ಲರ್‌ಗಳು ಪೊಲೀಸರ ಬಲೆಗೆ ಬಿದ್ದಿದೆ. ಆರೋಪಿಗಳಿಂದ 57 ಕೆ.ಜಿ ಗಾಂಜಾ, 20 ಸಾವಿರ ನಗದು, 10 ಮೊಬೈಲ್, 1 ಕಾರು, 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಷಿ ತಿಳಿಸಿದ್ದಾರೆ.
ಓದಲು ಬಂದು ದಂಧೆಗಿಳಿದ!
ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಬಂದು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂಬಿಎ ಪದವೀಧರನೊಬ್ಬ ಇದೀಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಒಡಿಶಾ ಮೂಲದ ತುಷಾರ್ ಪಟ್ನಾಯಕ್ ಬಂಧಿತನಾಗಿದ್ದು, ಮೂರು ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದಿದ್ದ. ಈ ವೇಳೆ ಮಾದಕ ಜಾಲದ ಸುಳಿಗೆ ಸಿಲುಕಿದ ಆತ, ವ್ಯಸನಿಯಾಗಿ ನಂತರ ಪೆಡ್ಲರ್ ಆಗಿ ರೂಪಾಂತರಗೊಂಡಿದ್ದ.
ಎಂಬಿಎ ಮುಗಿಸಿದ ನಂತರ ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ತುಷಾರ್, ಲಾಕ್‌ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದ. ಮಾಲೂರು ಮೂಲದ ಪರಿಚಯಸ್ಥರ ವ್ಯಕ್ತಿಯೊಬ್ಬನಿಂದ ಗಾಂಜಾ ಖರೀದಿಸಿ ತುಷಾರ್, ಆಟೋ ಚಾಲಕ ಹಬ್ಬಿಬ್ ಖಾನ್ ಮೂಲಕ ನಗರದಲ್ಲಿ ಬಿಕರಿ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಪೀಣ್ಯ ಸಮೀಪ ಕಾರ್ಖಾನೆಯೊಂದರ ಬಳಿ ಮಾರಟಕ್ಕೆ ಯತ್ನಿಸುತ್ತಿದ್ದಾಗ ಪಿಎಸ್‌ಐ ರಘು ಪ್ರಸಾದ್ ತಂಡಕ್ಕೆ ಸೆರೆಯಾಗಿದ್ದಾನೆ.
ಮೆಸೇಂಜರ್ ಮೂಲಕ ಗಾಳ
ಫೇಸ್‌ಬುಕ್ ಮೆಸೇಂಜರ್ ಬಳಸಿ ಡ್ರಗ್ಸ್ ದಂಧೆ ಮಾಡುತ್ತಿದ್ದ ಇಬ್ಬರು ಜಾಲಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೇರಳದ ಲೂಬಿನ್ ಅಮಲ್ ಹಾಗೂ ವಿವೇಕ್ ಬಂಧಿತರಾಗಿದ್ದು, ಆರೋಪಿಗಳಿಂದ 16 ಲಕ್ಷ ಮೌಲ್ಯದ 1.1 ಲೀಟರ್ ಹಶೀಶ್ ಜಪ್ತಿ ಮಾಡಲಾಗಿದೆ. ಜಾಲಹಳ್ಳಿಯ ಕಿರ್ಲೋಸ್ಕರ್ ಲೇಔಟ್‌ನಲ್ಲಿ ಸಮೀಪ ಗ್ರಾಹಕರಿಗೆ ಡ್ರಗ್ಸ್ ತಲುಪಿಸುವ ವೇಳೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೋಟೆಲ್‌ನಲ್ಲಿ ಅಮಲ್ ಕೆಲಸಗಾರನಾಗಿದ್ದರೆ, ವಿವೇಕ್ ನಿರುದ್ಯೋಗಿಯಾಗಿದ್ದ. ಮಾರತ್ತಹಳ್ಳಿ ಬಳಿ ನೆಲೆಸಿದ್ದ ಆರೋಪಿಗಳು, ಹಣದಾಸೆಗೆ ಡ್ರಗ್ಸ್ ದಂಧೆ ಶುರು ಮಾಡಿದ್ದರು. ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಬಳಿಕ ಸ್ಟೀಲ್ ಡಬ್ಬಿಗಳಲ್ಲಿ 10 ಗ್ರಾಂ ತುಂಬಿ ಮಾರುತ್ತಿದ್ದರು ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.