ಬೆಂಗಳೂರು ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಡ್ರಗ್ಸ್ ಜಾಲ ಶ್ರೀಲಂಕಾದವರೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಸುಳಿವೊಂದು ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕೊಚ್ಚಿ: ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ಪ್ರಕರಣಕ್ಕೆ ಮತ್ತೊಂದು ‘ಸ್ಫೋಟ’ಕ ತಿರುವು ಸಿಕ್ಕಿದೆ. ಡ್ರಗ್ಸ್ ಜಾಲ ಸ್ಯಾಂಡಲ್‌ವುಡ್‌ನಿಂದ ಕೇರಳದವರೆಗೆ ಹಬ್ಬಿದ್ದು ಬೆಳಕಿಗೆ ಬಂದ ಬೆನ್ನಲ್ಲೇ, ಅದು ಅಲ್ಲಿಂದಲೂ ದಾಟಿ ಶ್ರೀಲಂಕಾದವರೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಸುಳಿವೊಂದು ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ. ಹೀಗಾಗಿ 267 ಜನರ ಬಲಿ ಪಡೆದ 2019ರ ಶ್ರೀಲಂಕಾ ಸರಣಿ ಸ್ಫೋಟ ಪ್ರಕರಣದಲ್ಲಿ ಭಾರತೀಯರ ನಂಟಿನ ಬಗ್ಗೆ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ತಂಡವು, ಇದೀಗ ಬೆಂಗಳೂರು ಡ್ರಗ್ಸ್ ಪ್ರಕರಣದ ಆರೋಪಿಗಳನ್ನೂ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಬೆಂಗಳೂರು ಡ್ರಗ್ಸ್ ಪ್ರಕರಣ ಸಂಬಂಧ ಇತ್ತೀಚೆಗೆ ಬಂಧಿತ ಆರೋಪಿಯೊಬ್ಬ ಪದೇ ಪದೇ ಶ್ರೀಲಂಕಾಗೆ ಭೇಟಿ ನೀಡುತ್ತಿದ್ದ ವಿವರವನ್ನು ಎನ್‌ಐಎ ಸಂಗ್ರಹಿಸಿದೆ. ಅಲ್ಲದೆ, ಚಿತ್ರರಂಗದವರೂ ಲಂಕಾದ ಕ್ಯಾಸಿನೋಗಳಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಡ್ರಗ್ಸ್ ಕೇಸಲ್ಲಿ ಬಂಧಿತರನ್ನು ವಿಚಾರಣೆಗೆ ಒಳಪಡಿಸಲು ಎನ್‌ಐಎ ತಂಡ ನಿರ್ಧರಿಸಿದೆ ಎಂದು ಕೇರಳದ ಪತ್ರಿಕೆಯೊಂದು ವರದಿ ಮಾಡಿದೆ.
ಏನೀ ಸುಳಿವು?:
ಬೆಂಗಳೂರಿನಲ್ಲಿ ಬಂಧಿತ ಡ್ರಗ್ಸ್ ಪ್ರಕರಣದ ಆರೋಪಿಯೊಬ್ಬನ ಮೊಬೈಲ್ ಸೇರಿದಂತೆ ಕೆಲ ಉಪಕರಣಗಳನ್ನು ಜಾಲಾಡಿದಾಗ, ಅದರಲ್ಲಿ ಶ್ರೀಲಂಕಾ ಸ್ಫೋಟಕ್ಕೆ ಸಂಬಂಧಿಸಿದ್ದು ಎನ್ನಲಾದ ಕೆಲ ಸಂದೇಹಾಸ್ಪದ ಸಂದೇಶಗಳು ಲಭ್ಯವಾಗಿವೆ. ಇದಕ್ಕೆ ಪೂರಕವೆಂಬಂತೆ, ಶ್ರೀಲಂಕಾ ಸ್ಫೋಟದ ರೂವಾರಿ ಎನ್ನಲಾದ ಜಹ್ರಾನ್ ಹಷೀಂ ಎಂಬಾತ ಬೆಂಗಳೂರಿಗೆ 3 ವರ್ಷದ ಹಿಂದೆ ಭೇಟಿ ನೀಡಿದ್ದ ಎಂಬ ಮಾಹಿತಿ ಗುಪ್ತಚರ ದಳಕ್ಕೆ ಲಭಿಸಿದೆ. ಈ ಕಾರಣಕ್ಕೇ ಡ್ರಗ್ಸ್ ಕೇಸ್ ಆರೋಪಿಗೂ ಹಷೀಂಗೂ ನಂಟು ಇರಬಹುದು ಎಂಬ ಅನುಮಾನ ಎನ್ಐಎನದ್ದು.
ಡ್ರಗ್ಸ್ ಪ್ರಕರಣ; ಸ್ಫೋಟಕ 'ಮತ್ತಿನ' ನ್ಯೂಸ್ ಕೊಟ್ಟ ಕುಮಾರಸ್ವಾಮಿ
ಜಹ್ರಾನ್ ಹಷೀಂನನ್ನು ಸೋಷಿಯಲ್ ಮೀಡಿಯಾಗಳಲ್ಲಿ ಫಾಲೋ ಮಾಡುತ್ತಿದ್ದ ಯುವಕರನ್ನು ಈಗಾಗಲೇ ಕೇರಳದಲ್ಲಿ ಎನ್‌ಐಎ ವಿಚಾರಣೆಗೆ ಒಳಪಡಿಸಿದೆ. ಭಾರತಕ್ಕೆ ಶ್ರೀಲಂಕಾದಿಂದ ಭಾರೀ ಪ್ರಮಾಣದ ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿತ್ತು ಹಾಗೂ ಕೇರಳದ ಯುವಕರು ಶ್ರೀಲಂಕಾ ಕ್ಯಾಸಿನೋಗಳಿಗೆ ಭೇಟಿ ನೀಡಿ ರೇವ್ ಮಾರ್ಟಿ ಮಾಡುತ್ತಿದ್ದರು ಎಂದು ಈ ಹಿಂದೆಯೇ ಗುಪ್ತಚರ ದಳ ಪತ್ತೆ ಮಾಡಿತ್ತು ಎಂದೂ ಮಾಧ್ಯಮ ವರದಿ ಹೇಳಿದೆ.
ಇದಲ್ಲದೆ, ಇದೇ ಡ್ರಗ್ಸ್ ಕೇಸ್ ಆರೋಪಿಗೂ, ಕೇರಳದ ರಾಜತಾಂತ್ರಿಕ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿಗೂ ನಂಟು ಇರಬಹುದು ಎಂದು ಎನ್‌ಐಎ ಶಂಕಿಸಿದೆ.