ಬೆಂಗಳೂರು: ಸುಂಕದಕಟ್ಟೆ ಆ್ಯಸಿಡ್‌ ದಾಳಿಗೆ ಫೋನ್‌ ರೆಕಾರ್ಡ್‌ ಧ್ವನಿ ಸಾಕ್ಷಿ..!

By Kannadaprabha NewsFirst Published Aug 10, 2022, 6:52 AM IST
Highlights

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ನಾಗೇಶ್‌ ಆ್ಯಸಿಡ್‌ ದಾಳಿ ಕೇಸ್‌

ಬೆಂಗಳೂರು(ಆ.10):  ಪ್ರೇಮ ನಿರಾಕರಿಸಿದ ಕಾರಣಕ್ಕೆ ಮಾಗಡಿ ರಸ್ತೆಯ ಸುಂಕದಟ್ಟೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ 24 ವರ್ಷದ ಯುವತಿ ಮೇಲೆ ನಡೆದಿದ್ದ ಆ್ಯಸಿಡ್‌ ದಾಳಿ ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನಗರದ 39ನೇ ಎಸಿಎಂಎಂ ನ್ಯಾಯಾಲಯಕ್ಕೆ ಆ.8ರಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್‌ ಲೇಔಟ್‌ ನಿವಾಸಿ ನಾಗೇಶ್‌ ಬಾಬು (34) ದುಷ್ಕೃತ್ಯ ಕೃತ್ಯ ತನಿಖೆಯಲ್ಲಿ ರುಜುವಾತಾಗಿದ್ದು, ತನ್ನೊಂದಿಗೆ ಪ್ರೇಮ ವಿವಾಹವಾಗಲು ತಿರಸ್ಕರಿಸಿದ ಕಾರಣಕ್ಕೆ ಕೋಪಗೊಂಡು ಏಪ್ರಿಲ್‌ 28ರಂದು ಕಾಮಾಕ್ಷಿಪಾಳ್ಯದ ನಿವಾಸಿ ಯುವತಿ ಮೇಲೆ ಆತ ಆ್ಯಸಿಡ್‌ ದಾಳಿ ನಡೆಸಿದ್ದ. ಈ ಕೃತ್ಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಪ್ರಕರಣದ ತ್ವರಿತ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಎಂ.ಪ್ರಶಾಂತ್‌ ನೇತೃತ್ವದ ತಂಡ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದೆ.

ಕಾಟ ನೀಡಿದ್ದ ನಾಗೇಶ್‌

ಹೆಗ್ಗನಹಳ್ಳಿಯಲ್ಲಿ ಗಾರ್ಮೆಂಟ್ಸ್‌ ನಡೆಸುತ್ತಿದ್ದ ನಾಗೇಶ್‌, ಈ ಮೊದಲು ಕಾಮಾಕ್ಷಿಪಾಳ್ಯದಲ್ಲಿ ಸಂತ್ರಸ್ತೆ ದೊಡ್ಡಪ್ಪನ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದ. ಈ ವೇಳೆ ಆಕೆಗೆ ಪ್ರೀತಿಸುವುದಾಗಿ ಹೇಳಿದ್ದ, ಆದರೆ ಆಕೆ ನಿರಾಕರಿಸಿದ್ದಳು. ಪದವಿ ಓದು ಮುಗಿದ ಬಳಿಕ ಸುಂಕದಕಟ್ಟೆಯ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ತೆರಳಿ ಆರೋಪಿ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸರಗೊಂಡ ಆಕೆ, ತನ್ನನ್ನು ಹಿಂಬಾಲಿಸದಂತೆ ನಾಗೇಶ್‌ಗೆ ಬೈದಿದ್ದಳು. ಈ ಮಾತಿಗೆ ಕೆರಳಿದ ಆರೋಪಿ, ಏ.28ರಂದು ಬೆಳಗ್ಗೆ 8.30ರ ಸುಮಾರಿಗೆ ಯುವತಿ ಕಚೇರಿ ಪ್ರವೇಶಿಸುವ ಮುನ್ನ ಅಡ್ಡಗಟ್ಟಿಆ್ಯಸಿಡ್‌ ಎರಚಿ ಪರಾರಿಯಾಗಿದ್ದ. ಈ ಕೃತ್ಯ ಎಸಗಿದ ಬಳಿಕ ತಮಿಳುನಾಡಿನಲ್ಲಿ ಕಾವಿಧಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೇ 13ರಂದು ಇನ್‌ಸ್ಪೆಕ್ಟರ್‌ ಪ್ರಶಾಂತ್‌ ತಂಡ ಪತ್ತೆ ಹಚ್ಚಿ ಬಂಧಿಸಿತ್ತು. ತಮಿಳುನಾಡಿನಿಂದ ನಗರಕ್ಕೆ ಕರೆತರುವಾಗ ಕೆಂಗೇರಿ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಮೇ 14ರಂದು ಇನ್‌ಸ್ಪೆಕ್ಟರ್‌ ಗುಂಡು ಹೊಡೆದು ಶಾಸ್ತಿ ಮಾಡಿದ್ದರು.

10 ವರ್ಷದಿಂದ ಒನ್ ವೇ ಲವ್, ಆ್ಯಸಿಡ್ ದಾಳಿಗೆ ಪ್ಲ್ಯಾನ್ ಮಾಡಿದ್ದೆ: ತಪ್ಪೊಪ್ಪಿಕೊಂಡ ಆ್ಯಸಿಡ್ ನಾಗ

ಆ್ಯಸಿಡ್‌ ಹಾಕಿ ಅಣ್ಣನಿಗೆ ಕರೆ

ಆ್ಯಸಿಡ್‌ ಎರಚಿದ ಬಳಿಕ ತನ್ನ ಅಣ್ಣನಿಗೆ ಕರೆ ಮಾಡಿದ್ದ ನಾಗೇಶ್‌, ತಾನು ಯುವತಿ ಮೇಲೆ ಆ್ಯಸಿಡ್‌ ಎರಚಿದ್ದೇನೆ. ನಾನು ಬೆಂಗಳೂರು ಬಿಟ್ಟು ಹೋಗುತ್ತಿದ್ದೇನೆ ಎಂದಿದ್ದ. ಈ ಮಾತು ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿತ್ತು. ತನಿಖೆ ವೇಳೆ ನಾಗೇಶ್‌ ಸೋದರನ ಮೊಬೈಲ್‌ ಜಪ್ತಿ ಮಾಡಿ ಆಡಿಯೋದಲ್ಲಿನ ನಾಗೇಶ್‌ ಧ್ವನಿ ಪರೀಕ್ಷೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆಡಿಯೋದಲ್ಲಿನ ದನಿ ಆರೋಪಿಯದ್ದೇ ಎಂದು ಎಫ್‌ಎಸ್‌ಎಲ್‌ ವರದಿ ನೀಡಿದೆ. ಇದೂ ಪ್ರಮುಖ ಸಾಕ್ಷಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

754 ಪುಟಗಳು, 94 ಸಾಕ್ಷಿ ಹೇಳಿಕೆ

ಆ್ಯಸಿಡ್‌ ದಾಳಿ ಪ್ರಕರಣದ ಸಂಬಂಧ ಆರೋಪಿ ವಿರುದ್ಧ 754 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಆಗಸ್ಟ್‌ 8ರಂದು ಪೊಲೀಸರು ಸಲ್ಲಿಸಿದ್ದಾರೆ. ಇದರಲ್ಲಿ 94 ಸಾಕ್ಷಿಗಳು ಹಾಗೂ ವೈದ್ಯಕೀಯ ದಾಖಲೆಗಳು ಲಗತ್ತಿಸಲಾಗಿದೆ.

ದಾಳಿಗಾಗಿ 9 ಕೇಜಿ ಆ್ಯಸಿಡ್‌ ಖರೀದಿ

ಯುವತಿ ಮೇಲೆ ಆ್ಯಸಿಡ್‌ ದಾಳಿ ನಡೆಸಲು ಆರೋಪಿ ನಕಲಿ ದಾಖಲೆ ಸೃಷ್ಟಿಸಿ 9 ಕೇಜಿ ಆ್ಯಸಿಡ್‌ ಖರೀದಿಸಿ ತನ್ನ ಗಾರ್ಮೆಂಟ್ಸ್‌ನಲ್ಲಿ ಇಟ್ಟಿದ್ದ. ಇದರಲ್ಲಿ 1 ಕೇಜಿಯಷ್ಟುಆ್ಯಸಿಡನ್ನು ಕೃತ್ಯಕ್ಕೆ ಬಳಸಿದ್ದು, ಯುವತಿ ಮೇಲೆ ಅರ್ಧ ಕೇಜಿ ಆ್ಯಸಿಡ್‌ ಎರಚಲಾಗಿತ್ತು. ಇನ್ನುಳಿದ ಅರ್ಧ ಕೇಜಿ ಆ್ಯಸಿಡನ್ನು ಕೃತ್ಯ ಎಸಗಿ ತಪ್ಪಿಸಿಕೊಳ್ಳುವಾಗ ಕೆ.ಜಿ.ರಸ್ತೆಯಲ್ಲಿ ಆತ ಎಸೆದು ಪರಾರಿಯಾಗಿದ್ದ. ಗಾರ್ಮೆಂಟ್ಸ್‌ನಲ್ಲಿಟ್ಟಿದ್ದ 8 ಕೇಜಿ ಆ್ಯಸಿಡನ್ನು ಪೊಲೀಸರು ಜಪ್ತಿ ಮಾಡಿದ್ದರು.

ಯುವತಿ ಸಹಪಾಠಿ ಹೇಳಿಕೆ ಮಹತ್ವ

ಯುವತಿ ಕಾಲೇಜಿನ ಬಳಿ ತೆರಳಿದ್ದ ನಾಗೇಶ್‌, ಆಕೆಯ ಸಹಪಾಠಿಯೊಬ್ಬನನ್ನು ಪರಿಚಯ ಮಾಡಿಕೊಂಡಿದ್ದ. ನಮ್ಮ ಹುಡುಗಿ ಅವಳು. ಯಾರಾದರೂ ಲವ್‌ ಮಾಡಿದರೆ ನನಗೆ ಹೇಳು ಎಂದು ಆತನಿಗೆ ಆರೋಪಿ ಹೇಳಿದ್ದ. ಈ ಸಂಗತಿಯನ್ನು ವಿಚಾರಣೆ ವೇಳೆ ಸಂತ್ರಸ್ತೆ ಸಹಪಾಠಿ ಹೇಳಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನನಗೆ ಬೆದರಿಕೆ ಹಾಕ್ತಾರೆ: ರೂಪಾ

ವಿಶೇಷ ಅಭಿಯೋಜಕರ ನೇಮಕ

ಈ ಪ್ರಕರಣವನ್ನು ಶೀಘ್ರ ಇತ್ಯರ್ಥ ಸಲುವಾಗಿ ತ್ವರಿತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುವ ಸಾಧ್ಯತೆಗಳಿದ್ದು, ಪ್ರಕರಣಕ್ಕೆ ವಿಶೇಷ ಅಭಿಯೋಜಕರನ್ನಾಗಿ ಹಿರಿಯ ವಕೀಲ ಜಗದೀಶ್‌ ಅವರನ್ನು ಸರ್ಕಾರವು ನೇಮಕಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವರ್ಗಾವಣೆ ದಿನ ಆರೋಪಪಟ್ಟಿ ಸಲ್ಲಿಸಿದ ಇನ್‌ಸ್ಪೆಕ್ಟರ್‌

ಪ್ರಕರಣದ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಅವರನ್ನು ಇದೇ ಶನಿವಾರ ಕಾಮಾಕ್ಷಿಪಾಳ್ಯ ಠಾಣೆಯಿಂದ ಸರ್ಕಾರ ವರ್ಗ ಮಾಡಿತ್ತು. ತನಿಖೆ ಪೂರ್ಣಗೊಳಿಸಿದ್ದ ಅವರು, ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿ ಠಾಣೆಯಿಂದ ಬಿಡುಗಡೆಗೊಂಡಿದ್ದಾರೆ. ಜತೆಗೆ ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆ ನೆರವು ನೀಡಿದ್ದ ಅವರು ತಾವು ಮಾತ್ರವಲ್ಲದೆ ಸಹೋದ್ಯೋಗಿಗಳಿಂದ ರಕ್ತದಾನ ಸಹ ಮಾಡಿಸಿ ಮಾನವೀಯತೆ ಮೆರೆದಿದ್ದರು.
 

click me!