ವಿಮೆ ಹಣಕ್ಕಾಗಿ ಪತ್ನಿಯ ಕೊಲೆ ಮಾಡಿಸಿದ ಭೂಪ, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯ್ತು ಸತ್ಯ!

By Santosh Naik  |  First Published Aug 9, 2022, 11:31 PM IST

ಜುಲೈ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ನಿರ್ಜನವಾದ ಭೋಪಾಲ್ ರಸ್ತೆಯಲ್ಲಿ ಆಘಾತಕಾರಿ ಘಟನೆ ಸಂಭವಿಸಿತ್ತು. ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಪೂಜಾ ಎಂಬ ಮಹಿಳೆಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದರು. ಕೊಲೆ ಪ್ರಕರಣ ಆಗಿದ್ದರಿಂದ ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದರು.


ನವದೆಹಲಿ (ಆ.9): ಪತ್ನಿಯ ಹೆಸರಲ್ಲಿ ವಿಮೆ ಮಾಡಿಸಿದ್ದ ಗಂಡ, ಆ ಹಣವನ್ನು ಪಡೆಯುವ ಸಲುವಾಗಿ ಹೆಂಡತಿಯ ಕೊಲೆ ಮಾಡಲು ಪ್ಲ್ಯಾನ್‌ ಮಾಡಿ ಅದರಲ್ಲಿ ಯಶಸ್ವಿಯಾದ ಪ್ರಕರಣ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಮೂರು ಜನ ಹಂತಕರನ್ನು ಹುಡುಕಿ ಅವರಿಗೆ ಪತ್ನಿಯನ್ನು ಕೊಲ್ಲಲು 5 ಲಕ್ಷ ರೂಪಾಯಿ ಸುಪಾರಿಯನ್ನೂ ನೀಡಿದ್ದ. ಮುಂಗಡ ಹಣವಾಗಿ 1 ಲಕ್ಷ ರೂಪಾಯಿ ನೀಡಿದ್ದ ಆತ, ಕೆಲಸ ಮುಗಿದ ಬಳಿಕ ಉಳಿದ ನಾಲ್ಕು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದ. ಹಂತಕರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದರೂ, ಅವರಿಗೆ ಸಿಗಬೇಕಾದ ನಾಲ್ಕು ಲಕ್ಷ ರೂಪಾಯಿ ಸಿಗಲಿಲ್ಲ. ಯಾಕೆಂದರೆ, ಪೊಲೀಸರು ಈ ಕೊಲೆಯ ಹಿಂದಿದ್ದ ಪ್ರಮುಖ ಸೂತ್ರಧಾರ ಆಕೆಯ ಪತಿ ಎನ್ನುವುದನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಜುಲೈ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ನಿರ್ಜನವಾದ ಭೋಪಾಲ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಯ ಮೇಲೆ ಅಪರಿಚಿತರು ದಾಳಿ ಮಾಡಿದ್ದಲ್ಲದೆ, ಪೂಜಾ ಎನ್ನುವ ಮಹಿಳೆಯನ್ನು ಗುಂಡು ಹಾರಿಸಿ ಕೊಂದಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಕುರಿತಾದ ತನಿಖೆಯನ್ನು ನಡೆಸಿ, ಆಕೆಯೊಂದಿಗೆ ಬೈಕ್‌ನಲ್ಲಿದ್ದ ಗಂಡ ವಿಚಾರಣೆಯನ್ನೂ ಮಾಡಿದ್ದರು.

ಪೊಲೀಸರು ಮಹಿಳೆಯ ಶವವನ್ನು ವಶಪಡಿಸಿಕೊಂಡು, ಅದನ್ನು ತಕ್ಷಣವೇ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಘಟನೆಯ ಏಕೈಕ ಪ್ರತ್ಯಕ್ಷದರ್ಶಿ ಆಗಿದ್ದ ಆಕೆಯ ಪತಿ ಬದ್ರಿಪ್ರಸಾದ್ ಮೀನಾ ಅವರನ್ನು ವಿಚಾರಣೆ ಮಾಡಲು ಪ್ರಾರಂಭಿಸಿದರು. ಬದ್ರಿಪ್ರಸಾದ್ ಗುಜರಾತ್‌ ಸಮೀಪದ ಮನ್ಪುರಾ ಗ್ರಾಮದ ರೈತ. ಜುಲೈ 26 ರಂದು ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ, ಮಾನ್‌ ಜೋಡ್‌ ಎನ್ನುವ ಸ್ಥಳದಲ್ಲಿ ಬೈಕ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು ಎಂದು ಬದ್ರಿ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದ. ಬಳಿಕ ಪತ್ನಿಯನ್ನು ರಸ್ತೆಯ ಬದಿಯಲ್ಲಿಯೇ ಸ್ವಲ್ಪ ಹೊತ್ತು ಕುಳಿತುಕೊಳ್ಳುವಂತೆ ಹೇಳಿ, ಯಾರಾದರೂ ಜನರ ಸಹಾಯ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದ್ದ. ಆದರೆ, ಅಷ್ಟರಲ್ಲಿಯೇ ದುಷ್ಕರ್ಮಿಗಳು ಬಂದು ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಬದ್ರಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರು ತನ್ನನ್ನು ಕೊಲ್ಲಲು ಬಯಸಿದ್ದರು, ಆದರೆ ಪತ್ನಿ ಪೂಜಾ ಮಧ್ಯದಲ್ಲಿ ಬಂದರು ಮತ್ತು ದುರದೃಷ್ಟವಶಾತ್ ಅವರ ಗುಂಡು ಪೂಜಾ ಅವರ ಎದೆಗೆ ತಗುಲಿ ಅವರು ಸಾವನ್ನಪ್ಪಿದರು ಎಂದು ಬದ್ರಿಪ್ರಸಾದ್ ಮೀನಾ ಪೊಲೀಸರಿಗೆ ತಿಳಿಸಿದ್ದ. ಗ್ರಾಮದ ಮುಖ್ಯಸ್ಥ ಮನೋಹರ್ ಸೇರಿದಂತೆ ಕೆಲವರ ಜತೆ ವೈಷಮ್ಯ ಹೊಂದಿದ್ದು, ಇದೇ ವ್ಯಕ್ತಿಗಳು ವೈಷಮ್ಯದಿಂದ ಹಲ್ಲೆ ನಡೆಸಿದ್ದಾರೆ ಎಂದು ಬದ್ರಿ ಪೊಲೀಸರಿಗೆ ಹೇಳಿದ್ದ.

Tap to resize

Latest Videos

ಗ್ರಾಮಸ್ಥರ ಹೇಳಿಕೆ ಪಡೆದ ಪೊಲೀಸರು: ಬದ್ರಿ ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಮೊದಮೊದಲು ಬದ್ರಿ ಯಾರ ಮೇಲೆ ಆರೋಪ ಮಾಡಿದ್ದಾರೋ, ಅವರೆಲ್ಲ ಹಳ್ಳಿಯಲ್ಲಿಯೇ ಪೊಲೀಸರಿಗೆ ಸಿಕ್ಕಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರೆಲ್ಲರೂ ಬದ್ರಿ ಆರೋಪವನ್ನು ಅಲ್ಲಗಳೆದರು.  ಈ ಜನರ ಮೊಬೈಲ್ ಫೋನ್‌ಗಳ ಕರೆ ವಿವರಗಳನ್ನು ಪೊಲೀಸರು ಪಡೆದುಕೊಂಡಿದ್ದು, ಗ್ರಾಮಸ್ಥರ ಹೇಳಿರುವುದು ನಿಜ ಎನ್ನುವುದು ತಿಳಿದುಬಂದಿದೆ. ಬದ್ರಿ ತನ್ನ ಹೆಂಡತಿಯ ಕೊಲೆಯ ಬಗ್ಗೆ ಸುಳ್ಳು ಹೇಳುತ್ತಿದ್ದ ಎನ್ನುವ ಅನುಮಾನ ಪೊಲೀಸರಿಗೆ ಮೊದಲು ವ್ಯಕ್ತವಾಗಿದ್ದು ಇಲ್ಲಿ.

ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ: ಹುಟ್ಟು ಹಬ್ಬದಂದೇ ದುರಂತ ಅಂತ್ಯ

ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಹಿರಂಗ: ಬದ್ರಿಯ ಪತ್ನಿ ಪೂಜಾಳ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ನಿಜ ವಿಚಾರ ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಎದೆಯಲ್ಲಿ ಗುಂಡು ತಗುಲಿದ ಕಾರಣ ಪೂಜಾ ಸಾವಿಗೀಡಾಗಿಲ್ಲ, ಆದರೆ ಆಕೆ ಕುಳಿತಿದ್ದಾಗ ಯಾರೋ ಕಂಟ್ರಿಮೇಡ್ ಪಿಸ್ತೂಲ್ ನಿಂದ ಆಕೆಯ ಬೆನ್ನಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದರಿಂದ ಆಕೆಯ ಪತಿ ಬದ್ರಿಯ ಮತ್ತೊಂದು ಸುಳ್ಳು ಕೂಡ ಬಯಲಿಗೆ ಬಂದಿತ್ತು. ಯಾಕೆಂದರೆ, ದುಷ್ಕರ್ಮಿಗಳಿಂದ ರಕ್ಷಣೆ ಮಾಡುವ ವೇಳೆ ಹೆಂಡತಿಯ ಎದೆಗೆ ಗುಂಡು ತಗುಲಿತ್ತು ಎಂದು ಬದ್ರಿ ಪೊಲೀಸರಿಗೆ ಹೇಳಿದ್ದ. ನಂತರ ಪೊಲೀಸರು ತಡಮಾಡದೆ ಬದ್ರಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಬದ್ರಿ ಕೆಲಕಾಲ ಪೊಲೀಸರನ್ನು ವಂಚಿಸಲು ಯತ್ನಿಸಿದ, ಆದರೆ ಪೊಲೀಸರು ತನ್ನ ಸುಳ್ಳುಗಳನ್ನು ಬಹಿರಂಗಪಡಿಸಿದಾಗ, ಅವನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೊಲೆಯಲ್ಲಿ ತನ್ನ ಕೈವಾಡವನ್ನು ಒಪ್ಪಿಕೊಂಡ ಆತ, ಕೊಲೆ ಮಾಡುವ ಸಂಚಿನ ಕಾರಣ ಕೇಳಿದಾಗ ಪೊಲೀಸರು ಕೂಡ ಅಚ್ಚರಿಪಟ್ಟಿದ್ದಾರೆ.

ಬಾಲಕಿಯರಿಗೆ ಲೈಂಗಿಕ ಕಿರುಕುಳ: ತಮಿಳುನಾಡಲ್ಲಿ ಚರ್ಚ್‌ ಪಾದ್ರಿ ಅರೆಸ್ಟ್‌

ಸಾಲದಲ್ಲಿದ್ದ ಬದ್ರಿ: ಊರಿನ ಜನರಿಂದ ಬದ್ರಿ ಸುಮಾರು 50 ರಿಂದ 60 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಹಣ ವಾಪಾಸ್‌ ಕೊಡುವಂತೆ ಅವರು ಕೇಳಿದಾಗ ಇಲ್ಲಸಲ್ಲದ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ.  ಅಂತಹ ಪರಿಸ್ಥಿತಿಯಲ್ಲಿ, ಅವರು ಸಾಲದಿಂದ ಮುಕ್ತರಾಗಲು ಕೊಲೆಯ ಸಂಚು ರೂಪಿಸಿದ್ದ. ಪತ್ನಿಯ ಹೆಸರಿನಲ್ಲಿ ಸುಮಾರು 40 ಲಕ್ಷ ರೂಪಾಯಿ ಆಕ್ಸಿಡೆಂಟ್ ಪಾಲಿಸಿ ಮಾಡಿದ್ದ ಬದ್ರಿ ಅದಕ್ಕಾಗಿ ನಾಲ್ಕು ಕಂತುಗಳನ್ನೂ ಪಾವತಿಸಿದ್ದ. ಇದಾದ ಬಳಿಕ ಸಂಚು ರೂಪಿಸಿ ಪತ್ನಿಯನ್ನು ಕೊಂದು ಆಕೆಯ ವಿಮಾ ಪಾಲಿಸಿಯನ್ನು ಎನ್‌ಕ್ಯಾಶ್ ಮಾಡಿಸಿ ಸಾಲದಿಂದ ಮುಕ್ತಿ ಪಡೆಯಬಹುದು ಎನ್ನುವ ಪ್ಲ್ಯಾನ್‌ ಆತನದಾಗಿತ್ತು. ಇದರ ನಡುವೆ ಒಂದೇ ಬಾಣದಿಂದ ಎರಡು ಹಕ್ಕಿಗಳನ್ನು ಹೊಡೆಯುವ ಪ್ಲ್ಯಾನ್‌ ಕೂಡ ಇವನದಾಗಿತ್ತು. ಮೊದಲನೆಯದು, ಹೆಂಡತಿಯನ್ನು ಕೊಂದು ವಿಮೆಯ ಹಣವನ್ನು ಪಡೆಯುವುದು ಮತ್ತು ಎರಡನೆಯದಾಗಿ ಸಾಲ ವಾಪಸ್‌ ಕೇಳುವಂತೆ ಹೇಳಿದ ಜನರನ್ನು ಹೆಂಡತಿಯ ಕೊಲೆ ಆರೋಪದಲ್ಲಿ ಸಿಲುಕಿಸುವುದಾಗಿತ್ತು. ಅದಲ್ಲದೆ, ಹೆಂಡತಿ ಕೊಲೆಗೆ 5 ಲಕ್ಷ ರೂಪಾಯಿ ಸುಪಾರಿಯನ್ನು ಸಾಲ ಮಾಡಿ ನೀಡಿದ್ದ ಎನ್ನುವುದೂ ಬಹಿರಂಗವಾಗಿದೆ.

click me!