* ಕಲಬುರಗಿ ಜಿಲ್ಲೆಯಲ್ಲಿ ರೇಷನ್ ಅಕ್ಕಿ- ಗೋಧಿ ಕಾಳಸಂತೆ ಮಾರಾಟ
* 3 ದಾಲ್‌ಮಿಲ್ ಮಾಲೀಕರ ವಿಚಾರಣೆ
* ಬಂಧನಪೂರ್ವ ಜಾಮೀನು ಮೊರೆ ಹೋಗುತ್ತಿರೋ ಕಾಳಸಂತೆಕೋರರು
ಶೇಷಮೂರ್ತಿ ಅವಧಾನಿ
ಕಲಬುರಗಿ(ಅ.31): ಕಲಬುರಗಿಯಲ್ಲಿ ಬಡವರ ಹೊಟ್ಟೆ ಸೇರಬೇಕಿದ್ದ ರೇಷನ್ ಅಕ್ಕಿ-ಗೋಧಿ ಮೇಲೆ ಭಡವರ ಕಣ್ಣು ಬಿದ್ದಿದೆ. ಹೀಗಾಗಿ ರೇಷನ್ ಅಕ್ಕಿ- ಗೋಧಿ ’ಕಾಳಸಂತೆ’ ಲಂಗು ಲಗಾಮಿಲ್ಲದಂತೆ ಸಾಗಿದೆ. ಏತನ್ಮಧ್ಯೆ ಖದೀಮರ ಬೆನ್ನು ಬಿದ್ದಿರುವ ಖಾಕಿಪಡೆಗೆ ಪಡಿತರ(Ration) ಅಕ್ರಮ ದಂಧೆಯಲ್ಲಿರುವವರಿಗೆ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ರಾಜಾಶ್ರಯವಿರುವ ಶಂಕೆ ಕಾಡಲಾರಂಭಿಸಿದೆ. ಆದಾಗ್ಯೂ ವಿಚಾರಣೆ(Investigation) ಚುರುಕುಗೊಳಿಸಿರುವ ಪೊಲೀಸರು(Police) ವಂಚಕರ ತಂಡದ ಬೆನ್ನು ಬನ್ನಟ್ಟಿದ್ದಾರೆ.
ಕಾಲಾಂತರದಿಂದ ಸಾಗಿರುವ ಅಕ್ಕಿ- ಗೋಧಿ ಕಾಳಸಂತೆಯಲ್ಲಿ ಜಿಲ್ಲೆಯಾದ್ಯಂತ 16 ಕ್ಕೂ ಹೆಚ್ಚು ಪ್ರಕರಣಗಳು(Cases) ದಾಖಲಾದರೂ ಯಾವೊಂದೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ ಎಂಬುದು ಗುಟ್ಟೇನಲ್ಲ. ಇದೀಗ ಅಕ್ಟೋಬರ್ 2021 ಒಂದೇ ತಿಂಗಳಲ್ಲಿ 5 ಕಾಳಸಂತೆ ಅಕ್ಕಿ - ಗೋಧಿ ಅಕ್ರಮ ದಾಸ್ತಾನು ಪ್ರಕರಣಗಳು ಪತ್ತೆಯಾಗಿವೆ. ನೂರಾರು ಕ್ವಿಂಟಲ್ ದಾಸ್ತಾನು ರೆಡ್‌ಹ್ಯಾಂಡ್ ಸಿಕ್ಕಿದೆ.
ಕಲಬುರಗಿ: ಇಬ್ಬರು ಮಕ್ಕಳಿಗೆ ಬೆಂಕಿಹಚ್ಚಿ ತಾಯಿ ಆತ್ಮಹತ್ಯೆ
ಕಾಳಸಂತೆಕೋರರ ಎದೆಯಲ್ಲಿ ಡವಡವ:
ರೇಷನ್ ಅಕ್ಕಿ- ಗೋಧಿ ಕಾಳಸಂತೆಯ ಕರಾಳ ಮುಖಕ್ಕೆ ಅಕ್ಟೋಬರ್‌ನಲ್ಲಿ ಪತ್ತೆಯಾದ ಅಕ್ರಮಗಳ(Illegal) ಸರಣಿಯೇ ಕನ್ನಡಿ. ಅದಕ್ಕೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರಿಂದ ದಂಧೆಕೋರರು ಕಂಗಾಲಾಗಿದ್ದಾರೆ. ಅಕ್ಟೋಬರ್‌ನಲ್ಲಿ ಪತ್ತೆಯಾಗಿರುವ ರೇಷನ್ ಅಕ್ಕಿ- ಗೋಧಿ ಅಕ್ರಮದ 5 ಪ್ರಕರಣಗಳಲ್ಲಿ 3 ದಾಲ್‌ಮಿಲ್ ಮಾಲೀಕರು ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆಗೆ ತಂದವರ ಪೈಕಿ ಇಬ್ಬರು ಬಂಧನಪೂರ್ವ ಜಾಮೀನು (ಆಂಟಿಸಿಪೇಟರಿ ಬೇಲ್) ಪಡೆದು ಬಚಾವ್ ಆದರೆ, ಇನ್ನೊಬ್ಬರಿಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ.
ಜಾಮೀನು ಪಡೆಯಲು ಪರದಾಟ:
ಪೊಲೀಸರ ತನಿಖೆ ಬಿಗಿಗೊಳ್ಳುತ್ತಿದ್ದಂತೆಯೇ ಬೆದರಿರುವ ದಂಧೆಕೋರರು ಬಂಧನಪೂರ್ವ ಜಾಮೀನು ಹೊಂದಲು ನಿತ್ಯ ನ್ಯಾಯಾಲಯ ಅಲೆದಾಡುವಂತಾಗಿದೆ. ಇನ್ನೂ ಹಲವರು ಕಲಬುರಗಿಯನ್ನೇ ತೊರೆದಿದ್ದಾರೆ. ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಜಾಮೀನಿಗಾಗಿ ಕೋರ್ಟ್‌ಗೆ ಬರುವವರಲ್ಲಿ ಯಾರಾದರೂ ಅಕ್ರಮ ಅಕ್ಕಿ- ಗೋಧಿ ಪ್ರಕರಣದವರಾಗಿದ್ದರೆ ಅವರನ್ನು ವಿಚಾರಣೆಗೆಂದು ಅಲ್ಲಿಂದಲೇ ವಶಕ್ಕೂ ಪಡೆಯಲು ಮುಂದಾಗಿದ್ದಾರೆ. 16ಕ್ಕೂ ಹೆಚ್ಚು ಅಕ್ರಮ ಅಕ್ಕಿ ದಾಸ್ತಾನು, ಸಾಗಾಟದ ಪ್ರಕರಣಗಲು ಜಿಲ್ಲೆಯಲ್ಲಿ ವರದಿಯಾದರೂ ಅವುಗಳಲ್ಲೆಲ್ಲಾ ಸೂಕ್ತ ತನಿಖೆಯಾಗದೆ ನೆನೆಗುದಿಗೆ ಬಿದ್ದಿದ್ದವು. ಇದೀಗ ನಗರ ಪೊಲೀಸರು ಈ ಅಕ್ಕಿ- ಗೋಧಿ ಕಾಳಸಂತೆ ಮಾರಾಟ- ಸಾಗಾಟದ ಕಡತವನ್ನೇ ವಿಚಾರಣೆಗೆ ಕೈಗೆತ್ತಿಕೊಂಡಿದ್ದರಿಂದ ಬಡವರ ಅಕ್ಕಿಗೆ ಕನ್ನ ಹಾಕುತ್ತಿರುವ ಭಡವರು ಕಂಗಾಲಾಗಿದ್ದಾರೆ.
ಪ್ರಭಾವಿಗಳಿಂದ ಪೊಲೀಸರಿಗೆ ನಿರಂತರ ಒತ್ತಡ:
ಅಕ್ರಮ ಅಕ್ಕಿ-ಗೋಧಿ ಸಾಗಾಟ- ಮಾರಾಟದ ಪ್ರಕರಗಳು ಪತ್ತೆಯಾದರೂ ಅವುಗಳನ್ನು ಅಷ್ಟೊಂದು ವಿವರವಾಗಿ ತನಿಖೆಗೆ ಒಳಪಡಿಸದಂತೆ ಪ್ರಭಾವಿಗಳು ಅನೇಕರು ಪೊಲೀಸರಿಗೇ ಕರೆ ಮಾಡಿ ಹೇಳುತ್ತಿದ್ದಾರಂತೆ. ಹೀಗೆ ಹೇಳುವವರಲ್ಲಿ ರಾಜಕಾರಣಿಗಳದ್ದೇ ಸಿಂಹಪಾಲು. ಅಕ್ಕಿ- ಗೋಧಿ ದಾಸ್ತಾನು ಪ್ರಕರಣ ವರದಿಯಾದ ಬೆನ್ನಲ್ಲೇ ಪೊಲೀಸರಿಗೆ ಕರೆಗಳು ಬರುತ್ತವೆ, ಒತ್ತಡ ಹಾಕಲಾಗುತ್ತದೆ. ಆದಾಗ್ಯೂ ಇದ್ಯಾವುದಕ್ಕೂ ಜಗ್ಗದೆ ಪೊಲೀಸರು ಪ್ರಕರಣಗಳನ್ನು ಒಂದೊಂದಾಗಿ ವಿಚಾರಣೆಗೊಳಪಡಿಸುತ್ತಿದ್ದಾರೆ.
ಗಂಡನನ್ನೆ ಕೊಂದ ಪತ್ನಿ, 2 ತಿಂಗ್ಳು ಬಳಿಕ ಗೊತ್ತಾಯ್ತು ಆಕೆಯ ಪಲ್ಲಂಗ ಪುರಾಣ
ಕಲಬುರಗಿ ಜಿಲ್ಲೆಯಲ್ಲಿ ರೇಷನ್ ಅಕ್ಕಿ- ಗೋಧಿ ಕಾಳಸಂತೆ ಮಾರಾಟ- ಸಾಗಾಟದ ಪ್ರಕರಣಗಳ ಮೇಲೆ ನಾವು ನಿರಂತರ ನಿಗಾ ಇಟ್ಟಿದ್ದೇವೆ. ಹಳೆ ಪ್ರಕರಣಗಳ ವಿಚಾರಣೆಯನ್ನೂ ಚುರುಕುಗೊಳಿಸಿದ್ದೇವೆ. ಯಾವದೇ ಮುಲಾಜಿಲ್ಲದೆ ಕ್ರಮ ಕೈಗೊಂಡು ಕಾಳಸಂತೆಕೋರರಿಗೆ ಬಿಸಿ ಮುಟ್ಟಿಸುತ್ತೇವೆ. ಯಾವುದೇ ಒತ್ತಡಗಳಿಗೆ ಮಣಿಯೋದಿಲ್ಲ, ಖದೀಮರ ಬಂಧನ- ವಿಚಾರಣೆ ನಿಶ್ಚಿತ. ದಂಧೆಯ ಕಿಂಗ್‌ಪಿನ್ ಹುಡುಕಾಟದಲ್ಲಿದ್ದೇವೆ. ಅಕ್ಕಪಕ್ಕದ ರಾಜ್ಯಗಳಿಗೂ ಹೋಗಿ ಕಾರ್ಯಾಚರಣೆ ಮಾಡುತ್ತೇವೆ. ಇಂತಹ ಅಕ್ರಮಗಳ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಾಚರಣೆಗೆ ಸಹಕರಿಸಲಿ ಎಂದು ಕಲಬುರಗಿ ಪೊಲೀಸ್ ಕಮೀಷ್ನರೇಟ್ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.
ಪ್ರರಣಗಳ ಸುತ್ತಮುತ್ತ
ಅಕ್ಟೋಬರ್ 8
ಕಲಬುರಗಿ ಎಂಪಿಎಂಸಿ 2 ಕಡೆ ದಾಳಿ, ಆಹಾರ ಇಲಾಖೆ ಹಾಗೂ ಪೊಲೀಸ್ ತಂಡದಿಂದ 477 ಕ್ವಿಂಟಾಲ್ ಪಡಿತರ ಗೋಧಿ ಪತ್ತೆ. ಶಂಕರ ದೇವಶೆಟ್ಟಿ ಮಳಿಗೆ ಮೇಲೆ ದಾಳಿ, 191 ಕ್ವಿಂಟಲ್ ಪಡಿತರ ಅಕ್ಕಿ, 3 ಕ್ವಿಂಟಲ್ ಗೋಧಿ ಪತ್ತೆ. ಗಂಗಾಂಬಿಕಾ ದಾಲ್ ಇಂಡಸ್ಟ್ರಿ ದಾಳಿ, 191 ಕ್ವಿಂಟಲ್ ಅಕ್ಕಿ ಜಪ್ತಿ. ಚೌಕ್ ಠಾಣೆಯಲ್ಲಿ ಪ್ರಕರಣಗಳು ದಾಖಲು
ಅಕ್ಟೋಬರ್ 22
ತಾಜ್ ಬಡಾವಣೆ ಅಸಿಯಾ ಬೇಗಂ ಕಟ್ಟಡದಲ್ಲಿ ಸಂಗ್ರಹಿಸಿದ್ದ 48. 75 ಕ್ವಿಂಟಲ್ ಅಕ್ಕಿ (ಕಿಮ್ಮತ್ತು 1. 95ಲಕ್ಷ ರು.), 50 ಕೆಜಿಯ 12 ಕ್ವಿಂಟಲ್ ಗೋಧಿ ಚೀಲಗಳು (30 ಸಾವಿರ ರು.) ಜಪ್ತಿ, ರಾಜು ಜಮಾದಾರ, ಅಸಿಯಾ ಬೇಗಂ ವಿರುದ್ಧ ಪ್ರಕರಣ ದಾಖಲು.
ಅಕ್ಟೋಬರ್ 23
ಗಂಜ್ ಕಾಟನ್ ಮಾರ್ಕೆಟ್‌ನಲ್ಲಿರುವ ಲಕ್ಷ್ಮೀ ಟ್ರೇಡರ್ಸ್ ಮಳಿಗೆಯಲ್ಲಿ ತಲಾ 50 ಕ್ವಿಂಟಲ್ ರೇಷನ್ ಅಕ್ಕಿ, ಗೋಧಿ (ಮೊತ್ತ- 40 ಸಾವಿರ ರು) ಜಪ್ತಿ. 1 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಉದಯಕುಮಾರ್ ಜಮಾದಾರ್ ಬಂಧನ.
ಅಕ್ಟೋಬರ್ 27
ನಂದೂರ್ ಕೆಸರಟಗಿ ಕೈಗಾರಿಕಾ ವಸಾಹತು ಪ್ರದೇಶದ ಪ್ಲಾಟ್ ನಂ. 213 ಮೇಲೆ ದಾಳಿ. ರೇಷನ್ ವಿತರಣೆಯ 50 ಕೆಜಿ ತೂಕದ ಒಟ್ಟು 213 ಅಕ್ಕಿ ಚೀಲ (427 ಕೆಜಿ), ವಾಹನ ಜಪ್ತಿ. ಬಿಹಾರ ಮೂಲದ ಇಬ್ಬರ ಬಂಧನ.