ಎಸಿಪಿ ಬೇಡವೆಂದರೂ ಸ್ಯಾಂಟ್ರೋ ರವಿ ಪತ್ನಿ ಬಂಧಿಸಿ ಜೈಲಿಗಟ್ಟಿದ ಇನ್‌ಸ್ಪೆಕ್ಟರ್‌!

By Kannadaprabha NewsFirst Published Jan 13, 2023, 8:01 AM IST
Highlights

ದರೋಡೆ ಕೇಸ್‌ನಲ್ಲಿ ಎಸಿಪಿಯಿಂದ ಪ್ರತ್ಯೇಕವಾಗಿ ಸ್ಯಾಂಟ್ರೋ ರವಿ ಪತ್ನಿ, ನಾದಿನಿ ವಿಚಾರಣೆ, ಮುಗ್ಧರು ಎಂದು ತೀರ್ಮಾನ, ಬಿಡುಗಡೆ ಮಾಡಲು ಇನ್‌ಸ್ಟೆಕ್ಟರ್‌ಗೆ ಎಸಿಪಿ ಸೂಚನೆ, ಆದರೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದ ಪ್ರವೀಣ್‌. 

ಬೆಂಗಳೂರು(ಜ.13): ಕುಖ್ಯಾತ ವಂಚಕ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ದರೋಡೆ ಪ್ರಕರಣವನ್ನು ಬಗೆದಷ್ಟು ಮತ್ತಷ್ಟು ರೋಚಕ ಮಾಹಿತಿ ಬೆಳಕಿಗೆ ಬರುತ್ತಿದ್ದು, ಎಸಿಪಿ ಬಂಧಿಸದಂತೆ ಸೂಚನೆ ನೀಡಿದ ಬಳಿಕವೂ ರವಿ ಪತ್ನಿ ಹಾಗೂ ನಾದಿನಿಯನ್ನು ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್‌ ಬಂಧಿಸಿದ್ದರು ಎಂಬ ಸಂಗತಿ ಬಯಲಾಗಿದೆ.

ದರೋಡೆ ಪ್ರಕರಣದಲ್ಲಿ ಮೈಸೂರಿನಿಂದ ಇಬ್ಬರು ಮಹಿಳೆಯರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ ಎಂಬ ಮಾಹಿತಿ ತಿಳಿದ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಕೆ.ಸಿ.ಗಿರಿ ಅವರು, ಕೂಡಲೇ ಕಾಟನ್‌ಪೇಟೆ ಠಾಣೆಗೆ ತೆರಳಿ ಆ ಪ್ರಕರಣದ ತನಿಖೆ ಬಗ್ಗೆ ಆಗಿನ ಇನ್‌ಸ್ಪೆಕ್ಟರ್‌ ಪ್ರವೀಣ್‌ ಅವರಿಂದ ವಿವರ ಪಡೆದಿದ್ದರು. ಆಗ ಕೃತ್ಯದಲ್ಲಿ ರವಿ ಪತ್ನಿ ಹಾಗೂ ನಾದಿನಿ ಪಾತ್ರದ ಬಗ್ಗೆ ಸ್ಪಷ್ಟವಾದ ಪುರಾವೆ ನೀಡದೆ ಗೊಂದಲಕಾರಿ ಹೇಳಿಕೆಯನ್ನು ಪ್ರವೀಣ್‌ ನೀಡಿದ್ದರು. ಇದರಿಂದ ಅನುಮಾನಗೊಂಡ ಎಸಿಪಿ, ಠಾಣೆಯಲ್ಲಿದ್ದ ರವಿ ಪತ್ನಿ ಹಾಗೂ ನಾದಿನಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಅವರಿಬ್ಬರು ಮುಗ್ಧರು ಎಂಬುದು ಗೊತ್ತಾಯಿತು ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಸ್ಯಾಂಟ್ರೋ ರವಿ ಬಿಜೆಪಿಯಲ್ಲಿ ಇದ್ರೋ ಇಲ್ವೋ ನನ್ನ ಬಳಿ ಮಾಹಿತಿ ಇಲ್ಲ: ಸಿಟಿ ರವಿ

ತಕ್ಷಣವೇ ಇನ್‌ಸ್ಪೆಕ್ಟರ್‌ ಪ್ರವೀಣ್‌ಗೆ ಈ ಇಬ್ಬರು ಮಹಿಳೆಯರನ್ನು ಬಂಧನಕ್ಕೆ ಒಳಪಡಿಸದೆ ಹೇಳಿಕೆ ಪಡೆದು ಬಿಡುಗಡೆಗೊಳಿಸುವಂತೆ ಎಸಿಪಿ ಗಿರಿ ಸೂಚಿಸಿ ಮರಳಿದ್ದರು. ಆದರೆ ಇದಾದ ಬಳಿಕ ತರಾತುರಿಯಲ್ಲಿ ಮರುದಿನ ಬೆಳಗ್ಗೆ ನ್ಯಾಯಾಲಯಕ್ಕೆ ಆ ಇಬ್ಬರನ್ನು ಹಾಜರುಪಡಿಸಿ ಪ್ರವೀಣ್‌ ಜೈಲಿಗೆ ಕಳುಹಿಸಿದ್ದರು. ದರೋಡೆ ಪ್ರಕರಣದಲ್ಲಿ ತನ್ನ ಕರ್ತವ್ಯ ಲೋಪ ಬಯಲಾಗಿ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ ಎಂಬ ಭೀತಿಗೊಳಗಾಗಿಯೇ ಎಸಿಪಿ ಸೂಚನೆ ಹೊರತಾಗಿಯೂ ಅವರನ್ನು ಇನ್‌ಸ್ಪೆಕ್ಟರ್‌ ಬಂಧಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿಸಿದ ದಿನವೇ ವರ್ಗಾವಣೆ

ನಮಗೆ ಮೊದಲು ದರೋಡೆ ಪ್ರಕರಣದಲ್ಲಿ ಮೈಸೂರಿನ ಮಂಜುನಾಥ ಎಂಬಾತ ಒತ್ತಾಡ ಹಾಕಿದ್ದಾನೆ ಎಂಬ ಮಾಹಿತಿ ಇತ್ತು. ಆದರೆ ಆತನ ಮತ್ತೊಂದು ಹೆಸರು ಸ್ಯಾಂಟ್ರೋ ರವಿ ಎಂಬುದು ಗೊತ್ತಿರಲಿಲ್ಲ. ಅಲ್ಲದೆ ದರೋಡೆ ಪ್ರಕರಣದ ವಿಚಾರಣೆ ವೇಳೆ ತನ್ನ ಪತಿ ಹೆಸರನ್ನು ಮಂಜುನಾಥ್‌ ಎಂದು ಆತನ ಪತ್ನಿ ಹೇಳಿದ್ದಳು. ಕೃತ್ಯದಲ್ಲಿ ಮಹಿಳೆಯರ ಬಂಧನ ಬಳಿಕ ಪ್ರಕರಣದ ಹಿನ್ನಲೆ ಕೆದಕಿದಾಗ ಮಂಜುನಾಥನ ಮತ್ತೊಂದು ಹೆಸರು ಸ್ಯಾಂಟ್ರೋ ರವಿ ಎಂಬುದು ಗೊತ್ತಾಯಿತು ಎಂದು ಎಸಿಪಿ ಗಿರಿ ಹೇಳಿರುವುದಾಗಿ ತಿಳಿದು ಬಂದಿದೆ.

ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿಯನ್ನು ಬಂಧಿಸಿದ ದಿನವೇ ಪ್ರವೀಣ್‌ ವರ್ಗಾವಣೆ ಆಯಿತು. ಅದೇ ದಿನ ಆತ ಠಾಣೆಯಿಂದ ಬಿಡುಗಡೆ ಹೊಂದಿದ್ದ. ಹಾಗಾಗಿ ಕರ್ತವ್ಯ ಲೋಪದ ಆರೋಪದ ಮೇರೆಗೆ ಆತನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನು ತೊಡಕು ಎದುರಾಯಿತು ಎಂದು ಎಸಿಪಿ ಗಿರಿ ಹೇಳಿದ್ದಾರೆ.

ದರೋಡೆ ಕೃತ್ಯದಲ್ಲಿ ರವಿ ಪಾತ್ರವಿರಲಿಲ್ಲ. ಅಲ್ಲದೆ ಆತನ ಮೇಲೆ ಯಾವುದೇ ಅಪರಾಧ ಪ್ರಕರಣಗಳು ಕೂಡಾ ಇರಲಿಲ್ಲ. ಆದರೆ ದರೋಡೆ ಪ್ರಕರಣದ ವಿಚಾರಣೆ ಸಲುವಾಗಿ ಆತನನ್ನು ವಶಕ್ಕೆ ಪಡೆಯುವಂತೆ ಪ್ರವೀಣ್‌ ಬಳಿಕ ಕಾಟನ್‌ಪೇಟೆ ಠಾಣೆಗೆ ವರ್ಗವಾಗಿ ಬಂದ ಇನ್‌ಸ್ಪೆಕ್ಟರ್‌ ಬಾಲರಾಜ್‌ ಅವರಿಗೆ ಸೂಚಿಸಿದ್ದೆ. ಎರಡು ಬಾರಿ ಆತನನ್ನು ವಶಕ್ಕೆ ಪಡೆಯಲು ಯತ್ನಿಸಿ ಬಾಲರಾಜ್‌ ವಿಫಲರಾದರು. ಅನಂತರ ಪ್ರಕರಣದ ತನಿಖೆಯೂ ಅಲ್ಲಿಗೆ ನಿಂತಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರ ನವೆಂಬರ್‌ನಲ್ಲಿ ತಮ್ಮ ಸಂಬಂಧಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಪ್ರಕಾಶ್‌ ಅವರಿಗೆ .5 ಲಕ್ಷ ಸಾಲ ನೀಡುವ ನೆಪದಲ್ಲಿ ಮೆಜೆಸ್ಟಿಕ್‌ ಸಮೀಪದ ಖೋಡೆ ಸರ್ಕಲ್‌ ಬಳಿಗೆ ಕರೆಸಿಕೊಂಡು ಬಳಿಕ ಆತನಿಗೆ ಚಾಕುವಿನಿಂದ ಇರಿದು ಚಿನ್ನ ಹಾಗೂ ಹಣ ದೋಚಿದ ಆರೋಪ ಮೇರೆಗೆ ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ಮೇಲೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸಿಪಿ ವಿರುದ್ಧ ದೂರು

ದರೋಡೆ ಪ್ರಕರಣದಲ್ಲಿ ತನ್ನನ್ನು ವಿಚಾರಣೆ ನೆಪದಲ್ಲಿ ಕರೆದು ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ)ಕ್ಕೆ ಚಿಕ್ಕಪೇಟೆ ಎಸಿಪಿ ಕೆ.ಸಿ.ಗಿರಿ ವಿರುದ್ಧ ಸ್ಯಾಂಟ್ರೋ ರವಿ ದೂರು ನೀಡಿದ್ದ ಎಂದು ತಿಳಿದು ಬಂದಿದೆ.

ಪಿಎಸ್ಐ, ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ಆರೋಪಿ No.1 : ಕಿಮ್ಮನೆ ಗಂಭೀರ ಆರೋಪ

ಸುಳ್ಳು ಕೇಸ್‌: ಎಸಿಪಿ ಗಿರಿ ಆರಂಭ ಶೂರತ್ವ

ಸುಳ್ಳು ದರೋಡೆ ಆರೋಪ ಹೊರಿಸಿ ಇಬ್ಬರು ಅಮಾಯಕ ಮಹಿಳೆಯರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದ ಬಳಿಕವೂ ಕಾನೂನು ಕ್ರಮ ಜರುಗಿಸದೆ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಕೆ.ಸಿ.ಗಿರಿ ಕೂಡಾ ನಿರ್ಲಕ್ಷ್ಯ ತೋರಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

ಈ ಘಟನೆ ನಡೆದ ಎರಡು ತಿಂಗಳ ಬಳಿಕ ಸಂತ್ರಸ್ತ ಮಹಿಳೆಯರು ಮೈಸೂರಿನಲ್ಲಿ ತಮ್ಮ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದರು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆನಂತರವೇ ಸುಳ್ಳು ದರೋಡೆ ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ವಿಚಾರಣೆ ನಡೆಸಿದರು. ಕೊನೆಗೆ ಇನ್‌ಸ್ಪೆಕ್ಟರ್‌ ಪ್ರವೀಣ್‌ ಕರ್ತವ್ಯಲೋಪ ಸಾಬೀತಾಗಿ ತಲೆದಂಡವಾಯಿತು. ಆದರೆ ತಮ್ಮ ಉಪ ವಿಭಾಗದ ವ್ಯಾಪ್ತಿಯಲ್ಲಿ ಇಂಥ ಗಂಭೀರ ಸ್ವರೂಪದ ಕೃತ್ಯ ನಡೆದಾಗ ಆರಂಭದಲ್ಲಿ ವಿಚಾರಣೆ ನಡೆಸಿ ಎಸಿಪಿ ಸುಮ್ಮನಾಗಿದ್ದು ಏಕೆ ಹಾಗೂ ಸಂತ್ರಸ್ತೆಯರು ಮಾಧ್ಯಮಗಳ ಮುಂದೆ ಬಾರದೆ ಹೋಗಿದ್ದರೆ ಸುಳ್ಳು ದರೋಡೆ ಕೃತ್ಯ ಬಯಲಾಗುತ್ತಿರಲಿಲ್ಲವೇ? ಹಾಗೂ ಸುಳ್ಳು ಪ್ರಕರಣದ ಬಗ್ಗೆ ಡಿಸಿಪಿ ಹಾಗೂ ಹೆಚ್ಚುವರಿ ಆಯುಕ್ತರಿಗೆ ಎಸಿಪಿ ಯಾಕೆ ವರದಿ ನೀಡಲಿಲ್ಲ ಎಂಬ ಪ್ರಶ್ನೆಗಳು ಎದುರಾಗಿವೆ.

click me!