ಪ್ಯಾಂಟ್‌ನಲ್ಲಿದ್ದ ಕಡಲೆಬೀಜ ಹೇಳಿದ ಜಮಖಂಡಿಯ ಕೊಲೆ ಸ್ಟೋರಿ!

By Suvarna NewsFirst Published Jan 31, 2020, 10:28 PM IST
Highlights

ಕೊಲೆ ಕತೆ ಹೇಳಿದ ಕಡಲೆಬೀಜ/ ಕೊಲೆ ರಹಸ್ಯ ಬಿಚ್ಚಿಟ್ಟ ಬಾರ್ ಕತೆ/ ಜಮೀನು ವಿಚಾರದಲ್ಲಿ ಸುಪಾರಿ ಕೊಟ್ಟಿದ್ದ ಸಂಬಂಧಿ/ ಕುಡಿಸಿ ಕೊಲೆ ಮಾಡಿದ್ದ ಆರೋಪಿಗಳು

ಜಮಖಂಡಿ(ಜ. 31) ಹತ್ಯೆಯಾದವ ಪ್ಯಾಂಟ್‌ನಲ್ಲಿ ಸಿಕ್ಕ ಕಡಲೆ ಬೀಜವು ಆರೋಪಿಗಳ ಬಂಧನಕ್ಕೆ ಸಹಕಾರಿಯಾಗಿದೆ. ಕಡಲೆಬೀಜದ ಸುಳಿವನ್ನೇ ಆಧರಿಸಿ ಇಬ್ಬರು ಕೊಲೆ ಆರೋಪಿಗಳನ್ನು ಜಮಖಂಡಿ ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಮಖಂಡಿ ತಾಲೂಕಿನ ಜಕನೂರು ಧರ್ಮಣ್ಣ ರಂಗಪ್ಪ ಗುಡಧಾರ (55) ಹಾಗೂ ವಿಠ್ಠಲ ಹಾಲಪ್ಪ ಬಬಲೇಶ್ವರ (22) ಬಂಧಿತ ಆರೋಪಿಗಳು. ಬೀಳಗಿ ತಾಲೂಕಿನ ಮುಂಡಗನೂರಿನ ತುಕ್ಕಪ್ಪ ಮಣಿಗೆಪ್ಪ ರೇವಣ್ಣವರ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬೀಳಗಿ ತಾಲೂಕಿನ ಮುಂಡಗನೂರಿನ ಕೊಲೆಯಾದ ವ್ಯಕ್ತಿ ತುಕ್ಕಪ್ಪ ಮಣಿಗೆಪ್ಪ ರೇವಣ್ಣವರ ಎಂಬಾತನನ್ನು ಜಮಖಂಡಿ ಶಹರಕ್ಕೆ ಆರೋಪಿತರಿಬ್ಬರು ಒಂದೇ ಬೈಕ್‌ನಲ್ಲಿ ಕರೆದುಕೊಂಡು ಬಂದಿದ್ದಾರೆ. ನಂತರ ಕಂಠಪೂರ್ತಿ ಮದ್ಯ ಕುಡಿಸಿ ತುಕ್ಕಪ್ಪನನ್ನು ಬೈಕ್‌ನಲ್ಲಿ ಕುಂಚನೂರ ಗ್ರಾಮದ ಪುನರ್ವಸತಿ ಬಳಿ ಕರೆತಂದು ಹಗ್ಗದಿಂದ ಬಿಗಿದು, ಕಲ್ಲಿನಿಂದ ಮಕರ ಸಂಕ್ರಮಣದಂದು ಕೊಲೆ ಮಾಡಿದ್ದರು.

ಹೇಗೆ ಪತ್ತೆ?: ಕೊಲೆ ಮಾಡಲು ಧೈರ್ಯ ತುಂಬುವ ಉದ್ದೇಶದಿಂದ ಬಾರ್‌ವೊಂದರಲ್ಲಿ ಮದ್ಯ ಕುಡಿದಿದ್ದು, ಆಗ ಬಾರ್‌ನಲ್ಲಿ ಸಾರಾಯಿ ಕುಡಿವ ಮುನ್ನ ಗಿರಾಕಿಗಳಿಗೆ ಉಚಿತವಾಗಿ ಕಡ್ಲೆಕಾಯಿ ಬೀಜಗಳನ್ನು ನೀಡಲಾಗಿತ್ತು. ಹತ್ಯೆಗೀಡಾದ ವ್ಯಕ್ತಿ ಬಾರ್ ನಿಂದ ಹೊರ ಬರುವಾಗ ತನ್ನ ಪ್ಯಾಂಟ್ ಜೇಬಿನಲ್ಲಿ ಬಾರ್‌ನಿಂದ ಕಡ್ಲೆಕಾಯಿಗಳನ್ನು ತಂದಿದ್ದ. ಕೊಲೆಯಾದ ನಂತರ ಸ್ಥಳಕ್ಕೆ ಬಂದ ಪೊಲೀಸರು ಕೊಲೆಯಾದ ವ್ಯಕ್ತಿಯ ಜೇಬಿನಲ್ಲಿ ಕಡ್ಲೆಕಾಯಿ ಬೀಜಗಳು ಪತ್ತೆಯಾಗಿದ್ದವು. ಅದೇ ಸುಳಿವಿನಿಂದ ಜಮಖಂಡಿಯ ಎಲ್ಲ ಬಾರ್‌ಗಳನ್ನು ತಪಾಸಣೆ ನಡೆಸಿದ್ದಾರೆ. ಇದೇ ವೇಳೆ ಬಾರ್‌ನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ವ್ಯಕ್ತಿ ಜೊತೆ ಇದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಕಾಂಡೋಮ್ ಹಾಕಿಕೊಳ್ಳಿ ಎಂದ ಮಹಿಳೆಯನ್ನೇ ಹತ್ಯೆ ಮಾಡಿದ

ಸುಪಾರಿ: ಮೃತರ ಸಂಬಂಧಿಕರೊಬ್ಬರು ಜಮೀನು ಹಾಗೂ ಬಾವಿ ವಿಷಯವಾಗಿ ಈ ಹಿಂದೆ ಜಗಳ ನಡೆಸಿದ್ದರು. ಆತನೇ ತುಕ್ಕಪ್ಪನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾನೆ. ಆರೋಪಿಗಳಾದ ಧರ್ಮಣ್ಣ ರಂಗಪ್ಪ ಗುಡಧಾರ (55) ಹಾಗೂ ವಿಠ್ಠಲ ಹಾಲಪ್ಪ ಬಬಲೇಶ್ವರ (22) ಇವರಿಬ್ಬರೂ ಕೊಲೆ ಉದ್ದೇಶಕ್ಕೆ 1 ಲಕ್ಷ ರೂ. ನೀಡಿದ್ದಾನೆ .ಮುಂಗಡವಾಗಿ ಅಲ್ಪ ಹಣ ಪಡೆದಿದ್ದು, ಕಬ್ಬಿನ ಬಿಲ್ ಬಂದ ನಂತರ ಲಕ್ಷ ರು. ನೀಡುವುದಾಗಿ ಮಾತುಕತೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಆರ್.ಕೆ.ಪಾಟೀಲ  ಮಾರ್ಗದರ್ಶನದಲ್ಲಿ ಸಿಪಿಐ ಧರೇಗೌಡ ಪಾಟೀಲ ಸೂಕ್ತ ತನಿಖೆ ನಡೆಸಿದ್ದು, ಎಸೈ ಅನಿಲಕುಮಾರ ರಾಠೋಡ ಹಾಗೂ ಅವರ ಸಿಬ್ಬಂದಿ ಎಎಸ್‌ಐ ಬಿ.ಎಂ. ಕುಂ ಬಾರ, ಬಾಹುಬಲಿ ಕುಸನಾಳ,ಸಿ.ಎಂ. ಕುಂಬಾರ, ಸಂಗಮೇಶ ತುಪ್ಪದ,ಎಸ್.ಎ.ಮಟ್ಯಾಳ, ಬಿ.ಎಂ. ಮೊಕಾನಿ, ವಿ.ವಿ.ಕೊಳಂಬಿ, ಬಿ.ಜಿ. ಹೂಗಾರ, ಎಸ್.ಎಸ್. ಮೂಲಿಮನಿ, ಎ.ಎಲ್.ಚಿಪ್ಪಲಕಟ್ಟಿ  ಆರೋಪಿಗಳ ಬಂಧನ ಕಾರ್ಯಾಚರಣೆ ತಂಡದಲ್ಲಿದ್ದರು.  ಜಮಖಂಡಿ ಗ್ರಾಮೀಣ ಪೋಲಿಸ್ ಠಾಣೆ ಪೋಲಿಸ್ ಪೇದೆಗಳಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೂಕ್ತ ಬಹುಮಾನ ಘೋಷಿಸಿದ್ದಾರೆ.

click me!