ಯಾದಗಿರಿಯಲ್ಲಿ ಅಕ್ರಮ ಮರಳು ದಂಧೆ: ಪೊಲೀಸರೇ ಕಂಬಿ ಹಿಂದೆ..!

By Kannadaprabha News  |  First Published May 29, 2022, 12:19 PM IST

*  ಎಸಿಬಿ ಬಲೆಗೆ ಕಾನ್ಸಟೇಬಲ್‌, ಡಿವೈಎಸ್ಪಿ ಎರಡನೇ ಆರೋಪಿ
*  ಅಕ್ರಮ ತಡೆಗಟ್ಟುವಲ್ಲಿ ವಿಫಲ
*  ಯಾದಗಿರಿ ಪಿಎಸೈ, ಕಾನ್ಸಟೇಬಲ್‌ ಅಮಾನತು
 


ಯಾದಗಿರಿ(ಮೇ.29):  ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ನೆರವಾಗಲು ಸಾವಿರಾರು ರುಪಾಯಿಗಳ ಲಂಚ ಕೇಳಿದ ಆರೋಪದ ಮೇಲೆ, ನೇರವಾಗಿ ಬೆಂಗಳೂರು ಎಸಿಬಿ ಕಚೇರಿಗೇ ತೆರಳಿ ರಘುಪತಿ ಎನ್ನುವವರು ನೀಡಿದ್ದ ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ಪಡೆಯ ಬೆಂಗಳೂರು ಹಾಗೂ ರಾಯಚೂರು ತಂಡದ ಅಧಿಕಾರಿಗಳು, ಯಾದಗಿರಿ ಡಿವೈಎಸ್ಪಿ ಕಚೇರಿಯ ಎಸ್ಬಿ ಡ್ಯೂಟಿಯಲ್ಲಿದ್ದ ಕಾನ್ಸಟೇಬಲ್‌ ಬಲೆಗೆ ಕೆಡವಿ ಬಂಧಿಸಿದ್ದರೆ, ಇದೇ ದೂರಿನಲ್ಲಿ ಯಾದಗಿರಿ ಡಿವೈಎಸ್ಪಿ ಎರಡನೇ ಆರೋಪಿಯಾಗಿದ್ದಾರೆ.

ಕಳೆದ ಶನಿವಾರ ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸ್‌ ಇಲಾಖೆಯಲ್ಲಿ ದಾಳಿ ಮಾಹಿತಿ ಸೋರಿಕೆಯಾಗಬಾರದು ಎನ್ನುವ ಹಿನ್ನೆಲೆಯಲ್ಲಿ, ಎಡಿಜಿಪಿ ಸೀಮಾಂತ್‌ ಕುಮಾರ್‌ ಆದೇಶದ ಮೇರೆಗೆ ಗೌಪ್ಯ ತಂಡವೊಂದು ರಚನೆಯಾಗಿ, ಈ ದಾಳಿ ನಡೆಸಿದೆ. ಮರಳು ಸಾಗಾಟದ ರಘುಪತಿ ಎನ್ನುವವರ ಪ್ರತಿ ಟಿಪ್ಪರ್‌ ಸಂಚಾರಕ್ಕೆ 40 ಸಾವಿರ ರು.ಗಳ ಲಂಚದ ಬೇಡಿಕೆಯಿಟ್ಟಿದ್ದ ಖಾಕಿಪಡೆಯ ಈ ಸಿಬ್ಬಂದಿಯ ಕುರಿತು ಬೆಂಗಳೂರಿನಲ್ಲಿ ದೂರು ನೀಡಲಾಗಿತ್ತು. ಫೋನ್‌ ಪೇ ಮುಖಾಂತರ ಒಂದಿಷ್ಟುಹಣ ಸಂದಾಯವಾಗಿತ್ತು ಎಂಬ ಮಾತಿದೆ.

Latest Videos

undefined

ಬಂದೂಕು ಭದ್ರತೆಯಲ್ಲಿ ಐವರು ದಲಿತ ಮಹಿಳೆಯರು ಯಾದಗಿರಿ ದೇಗುಲಕ್ಕೆ!

ಅಚ್ಚರಿಯೆಂದರೆ, ಕಲಬುರಗಿ ವಿಭಾಗದ (ಕಲಬುರಗಿ, ಬೀದರ್‌ ಹಾಗೂ ಯಾದಗಿರಿ) ಎಸಿಬಿ ಅಧಿಕಾರಿಗಳಿಗೂ ಸುಳಿವು ಸಿಗದ ಹಾಗೆ ದಾಳಿಯ ಯೋಜನೆ ಸಿದ್ಧವಾಗಿತ್ತು ಎನ್ನಲಾಗಿದೆ. ಗುತ್ತೆಪ್ಪಗೌಡ ಬಿರಾದರ್‌ನನ್ನು ಎಸಿಬಿ ಬಲೆಗೆ ಕೆಡವಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಯಾದಗಿರಿ ಡಿವೈಎಸ್ಪಿಯವರತ್ತ ಗುರುತರ ಆರೋಪ ಮಾಡಿದ್ದರಿಂದ, ಈ ದೂರಿನಲ್ಲಿ ಎರಡನೇ ಆರೋಪಿಯಾಗಿ ವೀರೇಶ ಕರಡಿಗುಡ್ಡ ಅವರ ಹೆಸರಿದೆ.(ಪ್ರಕರಣ ಸಂಖ್ಯೆ : 5/22 ಯಾದಗಿರಿ ಎಸಿಬಿ)
ಬಂಧಿತ ಆರೋಪಿ ಗುತ್ತಿಗೆಪ್ಪಗೌಡ ಈ ಹಿಂದೆ ಎಸಿಬಿಯಲ್ಲೂ ಕೆಲಸ ಮಾಡಿದ್ದರಿಂದ ದಾಳಿ ಸೋರಿಕೆ ಆಗಬಾರದು ಎಂಬ ಕಾರಣದಿಂದ ಭಾರಿ ಗೌಪ್ಯತೆ ಕಾಪಾಡಿಕೊಂಡ ಬೆಂಗಳೂರು ಮೇಲಧಿಕಾರಿಗಳು, ಕಾರ್ಯೋನ್ಮುಖರಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪಿಎಸೈ ಅಮಾನತು:

ಅಕ್ರಮ ಮರಳು ದಂಧೆ ತಡೆಗಟ್ಟುವಲ್ಲಿ ವಿಫಲರಾದ ಆರೋಪದ ಮೇಲೆ ಯಾದಗಿರಿ ನಗರ ಪಿಎಸೈ ಚಂದ್ರಶೇಖರ ಅವರನ್ನು ಅಮಾನತುಗೊಳಿಸಲಾಗಿದೆ, ಜೊತೆಗೆ ಕಾನ್ಸಟೇಬಲ್‌ ಪಾಶಾ ಸಹ. ಅಕ್ರಮ ಮರಳು ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಖಾಕಿಪಡೆಯ ಅಧಿಕಾರಿಗಳೇ ನೆರಳಾಗಿ ನಿಲ್ಲುತ್ತಿದ್ದಾರೆ ಎಂಬ ಆರೋಪಗಳು ಸಾಕಷ್ಟು ಮೂಡಿಬರುತ್ತಿವೆ.
 

click me!